ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆ ಅನಿರೀಕ್ಷಿತ ಮಳೆ, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿ, ವಿಮಾನಗಳ ಹಾರಾಟದಲ್ಲಿ ವ್ಯತ್ಯಯ, ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಕೃಷಿಕರು ಬಾಳೆ, ಮಾವು, ದ್ರಾಕ್ಷಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಜನತೆಗೆ ಬಿಸಿಲಿನಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆಯಾದರೂ, ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ.

ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!
ಆಲಿಕಲ್ಲು ಮಳೆ ಅಬ್ಬರ

Updated on: Mar 19, 2026 | 7:48 AM

ಬೆಂಗಳೂರು, ಮಾ.19: ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತ ಎಂಟ್ರಿ ಕೊಟ್ಟಿದ್ದಾನೆ. ನೆನ್ನೆ (ಮಾ.18) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಭೂಮಿ ತಂಪಾಗಿದೆಯಾದರೂ ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ. ನಗರದ ಕೆ.ಆರ್. ಪುರಂ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಬೇರೆಡೆಗೆ ಡೈವರ್ಟ್ ಮಾಡಲಾಗಿದೆ.

ಧಾರಾಕಾರ ಮಳೆಗೆ ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಉರುಳಿಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಚಾಮರಾಜನಗರದ ಕಡುವಿನಕಟ್ಟೆಹುಂಡಿಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿದೆ. ಕೋಲಾರದಲ್ಲಿ ಮಾವಿನ ಹೂವು ಮತ್ತು ಕಾಯಿಗಳು ಉದುರಿದ್ದು, ದ್ರಾಕ್ಷಿ ಬೆಳೆಗಾರರು ರೋಗಭೀತಿಯ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್!

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳೆಲ್ಲಾ ಬಿಳಿ ಮಂಜಿನಿಂದ ಆವೃತವಾಗಿದ್ದು, ಕಾಶ್ಮೀರದಂತಹ ದೃಶ್ಯ ಕಂಡುಬಂದಿದೆ. ಶಿವಮೊಗ್ಗದಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಮೈಸೂರಿನ ಹುಣಸೂರು ತಾಲೂಕಿನ ದಾಸನಪುರದಲ್ಲಿ ಶಾಲೆಯ ಮೇಲ್ಚಾವಣಿ ಹಾರಿಹೋಗಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಕಡಬ, ದಾವಣಗೆರೆಯ ಗುಡಾಳ್ ಗ್ರಾಮ ಮತ್ತು ಬಾಗಲಕೋಟೆಯಲ್ಲಿಯೂ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತುಸು ನೆಮ್ಮದಿ ಸಿಕ್ಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Thu, 19 March 26

Follow Us