ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಕೊರತೆ: ಅಧಿಕಾರಿಗಳ ಸಭೆ ಬಳಿಕ ಕೃಷಿ ಸಚಿವ ಹೇಳಿದ್ದಿಷ್ಟು

ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ ತೀವ್ರ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಸಚಿವರು ಕೇಂದ್ರ ಸರ್ಕಾರದಿಂದ ಸಹಾಯ ಕೋರಿದ್ದು, ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಯೂರಿಯಾ ಸರಬರಾಜು ಹೆಚ್ಚಿಸಬೇಕೆಂಬುದು ಸರ್ಕಾರದ ಆಗ್ರಹವಾಗಿದೆ.

ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಕೊರತೆ: ಅಧಿಕಾರಿಗಳ ಸಭೆ ಬಳಿಕ ಕೃಷಿ ಸಚಿವ ಹೇಳಿದ್ದಿಷ್ಟು
ಸಚಿವ ಎನ್​ ಚಲುವರಾಯಸ್ವಾಮಿ

Updated on: Jul 30, 2025 | 4:28 PM

ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ (Karnataka) ಯೂರಿಯಾ (Urea) ಗೊಬ್ಬರಕ್ಕಾಗಿ (Fertilizer Shortage) ರೈತರು ಪರದಾಡುತ್ತಿದ್ದಾರೆ. ಕೊಪ್ಪಳ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಗಲಾಟೆ ಶುರುವಾಗಿದೆ. ದಿನವಿಡೀ ಸರದಿ ಸಾಲಿನಲ್ಲಿ ನಿಂತರೂ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಯೂರಿಯಾಕ್ಕಾಗಿ ಅನ್ನದಾತರು ಬೀದಿ ಬೀದಿ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ. ಯೂರಿಯಾ ಗೊಬ್ಬರ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆಪಿ ನಡ್ಡಾ ಅವರ ಭೇಟಿಗೆ ಸಮಯ ಕೋರಿದ್ದಾರೆ. ಆಗಸ್ಟ್ 6, 7 ಅಥವಾ 8 ಈ ಮೂರು ದಿನಗಳಲ್ಲಿ ಒಂದು ದಿನ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ, ಯೂರಿಯಾ ಸರಬರಾಜಿಗೆ ಮನವಿಗೆ ಮಾಡಲಿದ್ದಾರೆ.

ಯೂರಿಯಾ ಗೊಬ್ಬರ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಬುಧವಾರ (ಜು.30) ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಜಂಟಿ ನಿರ್ದೇಶಕರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಾನು ನಿರಂತರವಾಗಿ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿ ಇದ್ದೇನೆ. ವಾಸ್ತವ ಏನಿದೆ ಎಂದು ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡುತ್ತಿದ್ದೇನೆ. ಸಿಎಂ ಸಹ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ. ವಿಪಕ್ಷದವರ ಟೀಕೆಗೆ ಉತ್ತರ ಕೊಡುವುದಕ್ಕೂ ಮುನ್ನ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ರಾಯಚೂರಿನಲ್ಲಿ 79 ಟನ್​ ಯೂರಿಯಾ ಕಾಳಸಂತೆಯಲ್ಲಿ ಮಾರಾಟ

ಇದನ್ನೂ ಓದಿ
ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ: ರೈತರಿಗೆ ಮತ್ತೊಂದು ಆಘಾತ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ಕರ್ನಾಟಕದಾದ್ಯಂತ ರಸಗೊಬ್ಬರದ ಬರ: ರೈತರು ಕಂಗಾಲು, ಎಲ್ಲೆಲ್ಲೂ ‘ನೋ ಸ್ಟಾಕ್’!
ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ: ಜೆಪಿ ನಡ್ಡಾಗೆ ಸಿದ್ದರಾಮಯ್ಯ ಪತ್ರ

ಈ ವರ್ಷ ಕೇಂದ್ರದಿಂದ ಸರಿಯಾಗಿ ಯೂರಿಯಾ ಸರಬರಾಜು ಆಗಿಲ್ಲ. ಮಳೆ ಚನ್ನಾಗಿ ಆಗಿದೆ, ನಾವು ಕೂಡ ನಿರ್ವಹಣೆ ಮಾಡುತ್ತಿದ್ದೇವೆ. ನಾವು ನೇರವಾಗಿ ಆಮದು, ಉತ್ಪಾದನೆ ಮಾಡುವುದಕ್ಕೆ ಆಗಲ್ಲ. ರಸಗೊಬ್ಬರದ ಹೊಣೆ ಕೇಂದ್ರ ಸರ್ಕಾರದ್ದು. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ? ರೈತರನ್ನು ಮುಂದೆ ಇಟ್ಟುಕೊಂಡು ಆರೋಪ ಮಾಡುವುದು ಸರಿಯಿಲ್ಲ ಎಂದು ವಾಗ್ದಾಳಿ ಮಾಡಿದರು.

ಕೇಂದ್ರ ಜವಾಬ್ದಾರಿ ಹೊತ್ತುಕೊಂಡು ಸಮಸ್ಯೆ ಬಗೆಹರಿಸಬೇಕು: ಡಿಕೆ ಸುರೇಶ್​

ರಾಜ್ಯ ಸರ್ಕಾರ ಯೂರಿಯಾ ಉತ್ಪಾದನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಬೇಕು. ಕೇಂದ್ರ ಸರ್ಕಾರ ಜವಾಬ್ದಾರಿ ಹೊತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಈ ಸಂಬಂಧ ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಹೇಳಿದರು

ವರದಿ: ಈರಣ್ಣ ಬಸವ tv9 kannada

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ