ಕರ್ನಾಟಕದಾದ್ಯಂತ ರಸಗೊಬ್ಬರದ ಬರ: ರೈತರು ಕಂಗಾಲು, ಎಲ್ಲಿಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಬೋರ್ಡ್
ಕರ್ನಾಟಕದ ರೈತರು ಉತ್ತಮ ಮಳೆಯ ಹೊರತಾಗಿಯೂ ಗೊಬ್ಬರದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಯೂರಿಯಾ ಮತ್ತು ಡಿಎಪಿ ದರಗಳು ದ್ವಿಗುಣಗೊಂಡಿದ್ದು, ರೈತರು ದುಪ್ಪಟ್ಟು ಬೆಲೆ ಕೊಟ್ಟು ಗೊಬ್ಬರ ಖರೀದಿಸುವಂತಾಗಿದೆ. ಸಹಕಾರ ಸಂಘಗಳಲ್ಲಿ ಗೊಬ್ಬರಕ್ಕಾಗಿ ಉದ್ದದ ಸಾಲುಗಳು ಕಾಣಿಸುತ್ತಿವೆ. ರೈತರ ಆಕ್ರೋಶ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

ಬೆಂಗಳೂರು, ಜುಲೈ 26: ‘ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ’ ಎಂಬ ನಾಣ್ನುಡಿಯಂತಾಗಿದೆ ಕರ್ನಾಟಕದ ರೈತರ ಸ್ಥಿತಿ. ಈ ವರ್ಷ ರಾಜ್ಯದಾದ್ಯಂತ ಉತ್ತಮ ಮುಂಗಾರು (Monsoon) ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ. ಆದರೆ, ರೈತರಿಗೆ ಗೊಬ್ಬರವೇ (Fertilizer Shortage) ಸಿಕ್ಕಿಲ್ಲ, ಸಿಗುತ್ತಿಲ್ಲ. ಮಳೆ ಬಂದಾಗ ಗೊಬ್ಬರ ಸಿಗುವುದಿಲ್ಲ, ಗೊಬ್ಬರ ಸಿಕ್ಕಾಗ ಮಳೆ ಬರುವುದಿಲ್ಲ ಎಂಬ ಸ್ಥಿತಿ ಎದುರಿಸುತ್ತಿರುವ ರೈತರು, ಬೆಳಗ್ಗೆ 5 ಗಂಟೆಯಿಂದಲೇ ಸಹಕಾರ ಸಂಘಗಳ ಮುಂದೆ ರಸಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ಗೊಬ್ಬರ ಸಿಗದ್ದಕ್ಕೆ ಮಣ್ಣು ತಿಂದು ರೈತನ ಆಕ್ರೋಶ
ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ಇರುವ ಹುಟ್ಟುವಳಿ ಸಹಕಾರಿ ಸಂಘದ ಮುಂಭಾಗ ರೈತರು ಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ. ಗೊಬ್ಬರ ಸಿಗದ್ದಕ್ಕೆ ರೈತರು ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಕೃತಕ ಅಭಾವ ಸೃಷ್ಟಿಯಾಗಿದೆ. ದುಪ್ಪಟ್ಟು ಬೆಲೆ ವಸೂಲಿ ಮಾಡಲಾಗುತ್ತಿದೆ. ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ.
ದುಬಾರಿ ಬೆಲೆಗೆ ಗೊಬ್ಬರ, ಬಿತ್ತನೆ ಬೀಜ ಮಾರಾಟ
900 ರೂಪಾಯಿ ಇರುವ ಹತ್ತಿ ಬೀಜದ ಪ್ಯಾಕೆಟ್ ಅನ್ನು 1,200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. 258 ರೂ. ಇರುವ ಯೂರಿಯಾ 400 ರಿಂದ 500 ರೂ.ಗೆ ಮಾರಾಟ ಆಗುತ್ತಿದೆ. 1,200 ರೂ. ಬೆಲೆಯ ಡಿಎಪಿ ಗೊಬ್ಬರ 1,800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ರೈತರು ದುಪ್ಪಟ್ಟು ಬೆಲೆ ತೆರಬೇಕಾಗಿದೆ.
ಗದಗದಲ್ಲೂ ರಸಗೊಬ್ಬರ ಸಿಗದೆ ರೈತರ ಪರದಾಡುತ್ತಿದ್ದಾರೆ. ಮಳೆಯನ್ನೂ ಲೆಕ್ಕಿಸದೇ ಸರದಿಯಲ್ಲಿ ನಿಂತಿದ್ದಾರೆ. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬೆಳೆಗೆ ರಸಗೊಬ್ಬರ ಹಾಕದಿದ್ದರೆ ಹಾನಿಯಾಗುವ ಸಾಧ್ಯತೆ ಇದ್ದು, ಗೊಬ್ಬರ ಪೂರೈಕೆ ಮಾಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ನ್ಯಾನೋ ಯೂರಿಯಾ ಬಳಸಿ ಮಾದರಿಯಾದ ಹೆಬ್ಬಾಳ್ ಸ್ವಾಮೀಜಿ
ಈ ಗೊಬ್ಬರ ಸಮಸ್ಯೆ ಮಧ್ಯೆ ದಾವಣಗೆರೆಯಲ್ಲಿ ಹೆಬ್ಬಾಳ್ ಸ್ವಾಮೀಜಿ ನ್ಯಾನೋ ಯೂರಿಯಾ ಬಳಸಿ ಮಾದರಿಯಾಗಿದ್ದಾರೆ. ಮೆಕ್ಕೇಜೋಳಕ್ಕೆ ನ್ಯಾನೋ ಯೂರಿಯೋ ಬಳಸಿದ್ದು, ಮೆಕ್ಕೆಜೋಳ ಫಸಲು ಉತ್ತಮವಾಗಿ ಬಂದಿದೆ. ನ್ಯಾನೋ ಯೂರಿಯಾ ಬಳಸುವಂತೆ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ: ಜೆಪಿ ನಡ್ಡಾಗೆ ಸಿಎಂ ಸಿದ್ದರಾಮಯ್ಯ ಪತ್ರ
ಮತ್ತೊಂದೆಡೆ, ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ಅಗತ್ಯವಾದ ಗೊಬ್ಬರದ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರವು 2025ರ ಖಾರಿಫ್ ಬೆಳೆಗೆಂದು ಕರ್ನಾಟಕಕ್ಕೆ ಹಂಚಿಕೆ ಮಾಡಿರುವ 11,17,000 ಮೆಟ್ರಿಕ್ ಟನ್ ಯೂರಿಯಾ ಪೈಕಿ 5,16,959 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಬಾಕಿ ಇರುವ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.




