AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ: ಜೆಪಿ ನಡ್ಡಾಗೆ ಸಿಎಂ ಸಿದ್ದರಾಮಯ್ಯ ಪತ್ರ

ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ ತೀವ್ರ ಕೊರತೆಯಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ಅಗತ್ಯವಾದ ಗೊಬ್ಬರದ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ ಸಿದ್ದರಾಮಯ್ಯ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದು ಗೊಬ್ಬರ ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ: ಜೆಪಿ ನಡ್ಡಾಗೆ ಸಿಎಂ ಸಿದ್ದರಾಮಯ್ಯ ಪತ್ರ
ಸಿಎಂ ಸಿದ್ದರಾಮಯ್ಯ, ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 25, 2025 | 1:11 PM

Share

ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ (urea fertilizer) ಅಭಾವ ಸೃಷ್ಟಿ‌ ಆಗಿದೆ. ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಸಿಗದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ, ಗದಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದು, ರಾಜ್ಯಕ್ಕೆ ಹಂಚಿಕೆಯಾದ ರಸಗೊಬ್ಬರ ಪ್ರಮಾಣವನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ?

ಕೇಂದ್ರ ಸರ್ಕಾರವು 2025ರ ಖಾರಿಫ್‌ ಬೆಳೆಗೆ ರಾಜ್ಯಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದೆ. ಈವರೆಗೆ ಕೇವಲ 5,16,959 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಮಾಡಲಾಗಿದೆ. ಆದರೆ ಏಪ್ರಿಲ್​ನಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆ ಇದೆ. ಕೆಲ ರಸಗೊಬ್ಬರ ಕಂಪನಿಗಳು ಕೇಂದ್ರವು ಮಾಡಿದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರ ಪೂರೈಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Onion Price: ಈರುಳ್ಳಿ ದರ ಕುಸಿತ, ವಿಜಯಪುರದಲ್ಲಿ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ರೈತರ ಪ್ರತಿಭಟನೆ

ರಾಜ್ಯದಲ್ಲಿ ಯೂರಿಯಾ ಪೂರೈಕೆಯ ತುರ್ತು ಅವಶ್ಯಕತೆಯಿದೆ. ಏಕೆಂದರೆ ಕರ್ನಾಟಕಕ್ಕೆ ಈ ವರ್ಷದ ಆರಂಭದಲ್ಲಿಯೇ ಮಾನ್ಸೂನ್ ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿವಿಧ ಬೆಳೆಗಳ ವ್ಯಾಪ್ತಿಯು ಹೆಚ್ಚಾಗಿದೆ. ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ನದಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ನೀರನ್ನು ಮೊದಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಆರಂಭಿಕ ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಹೆಚ್ಚಿನ ಗೊಬ್ಬರ ಬಳಸುವ ಬೆಳೆಯಾದ ಮೆಕ್ಕೆಜೋಳದ ವಿಸ್ತೀರ್ಣವು ಸುಮಾರು 2 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ. ದ್ವಿದಳ ಧಾನ್ಯಗಳ ವಿಸ್ತೀರ್ಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಗಿದೆ ಎಂದಿದ್ದಾರೆ.

13,000 ಹೆಕ್ಟೇರ್ ಖಾರಿಫ್ ಪೂರ್ವ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಯೂರಿಯಾ ಕೊರತೆಯು ರೈತರಲ್ಲಿ ಅಶಾಂತಿ ಆತಂಕವನ್ನು ಸೃಷ್ಟಿಸುತ್ತಿದೆ. ರೈತರ ಹಿತದೃಷ್ಟಿಯಿಂದ ರಾಜ್ಯ ಹಂಚಿಕೆ ಪ್ರಕಾರ ರಸಗೊಬ್ಬರ ಪೂರೈಸಿ. ಬಾಕಿ ಕೊರತೆ ಇರುವ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರಸ್ತೆ ತಡೆದು ಧರಣಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ರಸ್ತೆ ತಡೆದು ಧರಣಿ ಮಾಡಲಾಗಿದೆ. ಕೆಲ ದಿನಗಳಿಂದ ಸಮರ್ಪಕವಾಗಿ ಗೊಬ್ಬರ ಸಿಗದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಣೆ ಮಾಡುವಂತೆ ಆಗ್ರಹಿಸಿದ್ದಾರೆ. 3 ದಿನಗಳ ಹಿಂದೆಯೂ ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದ.

ಗೊಬ್ಬರಕ್ಕಾಗಿ ಕ್ಯೂ ಹಚ್ಚಿದ ರೈತರು

ಅದೇ ರೀತಿಯಾಗಿ ಗದಗ ಜಿಲ್ಲೆಯಲ್ಲಿ ಕೂಡ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ನಗರದ ನಾಮಜೋಶಿ ರಸ್ತೆಯಲ್ಲಿನ ಗೋದಾಮಿಗೆ ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು ಸೇರಿದಂತೆ ರೈತ ಕುಟುಂಬಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗುತ್ತಿದೆ, ಆದರೆ ಗೊಬ್ಬರ ಸಿಗುತ್ತಿಲ್ಲಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗಾಯದ ಮೇಲೆ ಬರೆ: ಸಂಕಷ್ಟದಲ್ಲಿರುವ ಧಾರವಾಡದ ರೈತರಿಗೆ ಬ್ಯಾಂಕ್​ನಿಂದ ನೋಟಿಸ್​!

ಗೋದಾಮಿನಲ್ಲಿ ಕೇವಲ 150 ರೈತರಿಗೆ ಮಾತ್ರ ಟೋಕನ್​ ನೀಡುತ್ತಾರೆ. ಹೆಚ್ಚಿನ ಹಣ ಪಡೆದು ಯೂರಿಯಾ ಗೊಬ್ಬರ ಮಾರಾಟ ಆರೋಪ ಕೂಡ ಕೇಳಿಬಂದಿದೆ. ಗದಗ ಜಿಲ್ಲಾ ಕೇಂದ್ರದಲ್ಲಿಯೇ ರೈತರ ಶೋಷಣೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದು, ಸಮರ್ಪಕವಾಗಿ ಗೊಬ್ಬರ ವಿತರಿಸುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.