ಎಲ್ಲ ಕಡೆ ಗೊಬ್ಬರ ಕೊರತೆ: ಕಲಬುರಗಿಯಲ್ಲಿ ಸಾಕಷ್ಟಿದ್ದರೂ ಸಮಸ್ಯೆ! ಯಾಕೆ? ಇಲ್ಲಿದೆ ಕಾರಣ
ಕಲಬುರಗಿಯ ರೈತರು ಕಳೆದ ಹಲವಾರು ದಿನಗಳಿಂದ ಮಳೆಯಿಲ್ಲದೇ ಕಂಗಾಲಾಗಿದ್ದರು. ಆದರೆ, ಈಗ ಮಳೆ ಕೃಪೆ ತೋರಿದೆ. ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ರಾಜ್ಯದ ಉಳಿದೆಡೆ ಗೊಬ್ಬರದ ಕೊರತೆ ಇದ್ದರೆ, ಕಲಬುರಗಿಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.

ಕಲಬುರಗಿ, ಜುಲೈ 28: ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ದಿನ ಬೆಳಗಾದರೆ ರಸಗೊಬ್ಬರದ ರಗಳೆ ಶುರುವಾಗಿದೆ. ಕೊಪ್ಪಳ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಗೊಬ್ಬರಕ್ಕಾಗಿ ರೈತರ ಗಲಾಟೆ ಶುರುವಾಗಿದೆ. ದಿನವಿಡೀ ಸರದಿ ಸಾಲಿನಲ್ಲಿ ನಿಂತರೂ ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕಳೆದ ವಾರದಿಂದ ರಾಜ್ಯದಲ್ಲಿ ಮತ್ತೊಮ್ಮೆ ಮುಂಗಾರು ಚುರಕುಕೊಂಡಿದ್ದು, ಅನ್ನದಾತರ ಕೃಷಿ ಚಟುವಟಿಕೆ ಜೋರಾಗಿದೆ. ಬಿತ್ತನೆ ಮಾಡಿರುವ ಬೆಳೆ ಸಖತ್ ಆಗಿ ಚಿಗುರೊಡೆಯಲು ರಸಗೊಬ್ಬರದ ಅವಶ್ಯಕತೆ ಎದುರಾಗಿದೆ. ಅದರಲ್ಲೂ ಯೂರಿಯಾಕ್ಕಾಗಿ ಅನ್ನದಾತರು ಬೀದಿ ಬೀದಿ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಲಬುರಗಿಯ (Kalabuargi) ಕೆಲ ರಸಗೊಬ್ಬರ ಮಾರಾಟ ಆಗ್ರೋ ಏಜೆನ್ಸಿಗಳು ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲು ಕೃತಕ ಅಭಾವ ಸೃಷಿಸುತ್ತಿವೆ.
ಕಲಬುರಗಿ: ರಸಗೊಬ್ಬರ ಮಾರಾಟ ಹೆಸರಿನಲ್ಲಿ ಹಗಲು ದರೋಡೆ
ಕಲಬುರಗಿಯಲ್ಲಿ ದುಪ್ಪಟ್ಟು ಬೆಲೆಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳು ಮಾರಾಟವಾಗುತ್ತಿವೆ. 258 ರೂಪಾಯಿ ಎಂಆರ್ಪಿ ಇರುವ ಯೂರಿಯಾವನ್ನ 400-500 ರೂಪಾಯಿ, 1300 ರೂಪಾಯಿ ಇರುವ ಡಿಎಪಿ ಗೊಬ್ಬರವನ್ನು 1800 ರಿಂದ 2000 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಹತ್ತಿ ಬಿತ್ತನೆ ಬೀಜವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹೀಗಾಗಿ ಸರ್ಕಾರ ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ರೈತರು ಅಗ್ರಹಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಎಲ್ಲಾ ಆಗ್ರೋ ಮಾಲೀಕರು ರಸಗೊಬ್ಬರ ‘‘ನೋ ಸ್ಟಾಕ್’’ ಎನ್ನುತ್ತಿದ್ದಾರೆ. ದುಪ್ಪಟ್ಟು ಹಣ ಕೊಡುತ್ತೆವೆ ಎಂದರೆ ಎಲ್ಲಾ ರೀತಿಯ ರಸಗೊಬ್ಬರವನ್ನು ಟ್ರಕ್ಗಟ್ಟಲೇ ನೀಡುತ್ತಾರೆ. ಇಷ್ಟೆಲ್ಲ ವಸೂಲಿ ಮಾಡುತ್ತಿದ್ದರೂ ಅಧಿಕಾರಿಳಿಗೆ ಮಾಹಿತಿ ಇಲ್ವಾ ಅಥವಾ ಮಾಹಿತಿ ಇದ್ದರೂ ಸುಮ್ಮನೆ ಕುಳಿತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ: ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ಕರ್ನಾಟಕದಾದ್ಯಂತ ಬಿಜೆಪಿ ಹೋರಾಟ
ಒಟ್ಟಿನಲ್ಲಿ, ಕಲಬುರಗಿಯ ಕೆಲ ರಸಗೊಬ್ಬರ ಮಾರಾಟ ಕೇಂದ್ರಗಳ ಮಾಲೀಕರು, ಅನ್ನದಾತರ ಸುಲಿಗೆಗೆ ನಿಂತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.







