AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ: ಮತ್ತೆ ವಿವಾದ ಮೈಮೇಲೆ ಎಳೆದುಕೊಳ್ಳಲು ಮುಂದಾದ ಸರ್ಕಾರ

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯನ್ನು ಉಚಿತ ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿದ್ದು ಕಳೆದ ವರ್ಷ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಈ ವರ್ಷವೂ ಅಂಥದ್ದೇ ದುಃಸ್ಸಾಹಸಕ್ಕೆ ಸರ್ಕಾರ ಮುಂದಾಗಿದೆ. ಆಗಸ್ಟ್ 5 ರಂದು ಅಂತಿಮ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ.

ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ: ಮತ್ತೆ ವಿವಾದ ಮೈಮೇಲೆ ಎಳೆದುಕೊಳ್ಳಲು ಮುಂದಾದ ಸರ್ಕಾರ
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on: Jul 28, 2025 | 9:30 AM

Share

ಬೆಂಗಳೂರು, ಜುಲೈ 28: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ (SC ST) ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಿಂದ ಉಚಿತ ಗ್ಯಾರಂಟಿ ಯೋಜನೆಗಳಿಗೆ (Guarantee Schemes) ಹಣ ಬಳಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ ಇದೀಗ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದೆ. ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಎಸ್​ಸಿಎಸ್​​ಪಿ-ಟಿಎಸ್​​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲು ಮುಂದಾಗಿದೆ. ಎಸ್​ಸಿಎಸ್​​ಪಿ-ಟಿಎಸ್​​ಪಿ (ಪರಿಶಿಷ್ಟ ಜಾತಿ ಉಪ ಯಜನೆ ಮತ್ತು ಬುಡಕಟ್ಟು ಉಪಯೋಜನೆ) ಯೋಜನೆಯಡಿ 2025-26ರ ಸಾಲಿನಲ್ಲಿ 42,017.51 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ 11,896.84 ಕೋಟಿ ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲು ಸರ್ಕಾರ ಚಿಂತನೆ ನಡೆಸಿದೆ.

ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಹಣ?

ಎಸ್​ಸಿಎಸ್​​ಪಿ-ಟಿಎಸ್​​ಪಿ ಯೋಜನೆಯಿಂದ ಯುವನಿಧಿ ಯೋಜನೆಗೆ 162 ಕೋಟಿ ರೂಪಾಯಿ, ಗೃಹಲಕ್ಷ್ಮೀ ಯೋಜನೆಗೆ 7,438 ಕೋಟಿ ರೂ., ಗೃಹಜ್ಯೋತಿಗೆ 2,626 ಕೋಟಿ ರೂ., ಶಕ್ತಿ ಯೋಜನೆಗೆ 1,537 ಕೋಟಿ ರೂ. ಹಾಗೂ ಅನ್ನಭಾಗ್ಯಕ್ಕೆ 1,670 ಕೋಟಿ ರೂ. ಬಳಕೆಗೆ ಸರ್ಕಾರ ಮುಂದಾಗಿದೆ.

ಕಳೆದ ಹಣಕಾಸು ವರ್ಷದಲ್ಲಿಯೂ ಎಸ್​ಸಿಎಸ್​​ಪಿ-ಟಿಎಸ್​​ಪಿ ಅನುದಾನದಿಂದ ಒಂದು ಪಾಲನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿತ್ತು. ಸರ್ಕಾರದ ಈ ನಡೆಗೆ ದಲಿತ ಸಂಘಟನೆಗಳು, ವಿಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದವು. ಕಳೆದ ಬಾರಿಯ ಅಧಿವೇಶನದಲ್ಲಿ ಕೂಡ ಇದೇ ವಿಚಾರಕ್ಕೆ ಜಟಾಪಟಿ ಆಗಿತ್ತು.

ಇದನ್ನೂ ಓದಿ
Image
ಪಂಚಪೀಠಾಧ್ಯಕ್ಷರ ನಿರ್ಣಯಕ್ಕೆ ಲಿಂಗಾಯತ ಮಠಾಧಿಪತಿಗಳ ಸೆಡ್ಡು
Image
ರೈತರಿಗೆ ಗೊಬ್ಬರ ಕೊರತೆಯ ಬರೆ: ಇಂದು ಕರ್ನಾಟಕದಾದ್ಯಂತ ಬಿಜೆಪಿ ಹೋರಾಟ
Image
ಮನ್ ಕಿ ಬಾತ್ ಮಾತಿನಲ್ಲಿ ಮೋದಿ ಹೊಗಳಿದ ಕರ್ನಾಟಕದ ಕೋಟೆಯ ವಿಶೇಷತೆ ಏನು? 
Image
SCSP-TSPಯ 9 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿಕೊಂಡ ಸರ್ಕಾರ

ಆಗಸ್ಟ್ 5 ರಂದು ಎಸ್​​ಸಿ, ಎಸ್​ಟಿ ಅಭಿವೃದ್ಧಿ ಪರಿಷತ್ ಸಭೆ

ಆಗಸ್ಟ್ 5ರಂದು ಎಸ್​​ಸಿ, ಎಸ್​ಟಿ ಅಭಿವೃದ್ಧಿ ಪರಿಷತ್ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಸ್​ಸಿಎಸ್​​ಪಿ-ಟಿಎಸ್​​ಪಿ ಯೋಜನೆಯಿಂದ ಗ್ಯಾರಂಟಿಗಳಿಗೆ ಫಂಡ್ ಡೈವರ್ಟ್ ಮಾಡುವ ಬಗ್ಗೆ ಅಂತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಎಸ್​ಸಿಎಸ್​ಪಿ-ಟಿಎಸ್​ಪಿಯ 9 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿಕೊಂಡ ಸರ್ಕಾರ

2024-25 ರ ಸಾಲಿನಲ್ಲಿ ಎಸ್​ಸಿಎಸ್​ಪಿ-ಟಿಎಸ್​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ಬಗ್ಗೆ ಸದನದಲ್ಲಿ ಸರ್ಕಾರ ಮಾಹಿತಿ ನೀಡಿತ್ತು. ಎಸ್​ಸಿಎಸ್​ಪಿ-ಟಿಎಸ್​ಪಿ ಯೋಜನೆಗೆ ​2024-25 ರಲ್ಲಿ 42 ಕೋಟಿ ರೂ. ಮೀಸಲು ಇಡಲಾಗಿತ್ತು. ಇದರಲ್ಲಿ 14282 ಕೋಟಿ ರೂ. ಗ್ಯಾರಂಟಿಗೆ ಮೀಸಲು ಇಡಲಾಗಿತ್ತು. ಇದರಲ್ಲಿ 9,797 ಕೋಟಿ ರೂ. ಗ್ಯಾರಂಟಿಗೆ ಬಳಕೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಲಾಗಿತ್ತು. ಇದೀಗ ಸರ್ಕಾರ ಮತ್ತೆ ಆ ನಿರ್ಧಾರಕ್ಕೆ ಮುಂದಾಗಿರುವುದು ರಾಜಕೀಯವಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ