ಪ್ರಾತಿನಿಧಿಕ ಚಿತ್ರ
Image Credit source: tv9 kannada
ಮುಖ್ಯಾಂಶಗಳು
- ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
- ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ
- ರಾಜ್ಯದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ
ಬೆಂಗಳೂರು, ಜೂನ್ 25: ಸ್ಪೆಷಲ್ ಇಂಟೇನ್‌ಸೀವ್ ರಿವಿಜನ್ ಅಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಕರ್ನಾಟಕದಲ್ಲಿ (Karnataka) ಎಸ್ಐಆರ್ (SIR) ನಡೆಸಲಾಗುತ್ತಿದೆ. ಇದೇ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಿ, ಗಣತಿ ಕಾರ್ಯ ನಡೆಸಲಿದ್ದಾರೆ. ಹೀಗಾಗಿ ಈ ವೇಳೆ ದಾಖಲೆಗಳನ್ನು ತೋರಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಖಚಿತ ಪಡಿಸಿಕೊಳ್ಳುವುದು ಮುಖ್ಯ.
ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು ಏಕೆ?
ದೇಶಾದ್ಯಂತ ಚುನಾವಣಾ ಆಯೋಗ, ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡುತ್ತಿದೆ. ಅಕ್ರಮ ಹಾಗೂ ನಕಲಿ ಮತದಾನ ತಡೆಯುವುದು. ಒಂದಕ್ಕಿಂತ ಹೆಚ್ಚು ಕಡೆ, ಅಂದರೆ ಊರಿನಲ್ಲಿ ಒಂದು ವೋಟರ್ ಐಡಿ, ನಗರದಲ್ಲಿ ಒಂದು ವೋಟರ್ ಐಡಿ ಹೊಂದಿರುವವರನ್ನ ಪತ್ತೆ ಹಚ್ಚುವುದು. ಸತ್ತವರು ಹಾಗೂ ಕಾಯಂ ಆಗಿ ಬೇರೆಡೆಗೆ ವಲಸೆ ಹೋದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು. ಜೊತೆಗೆ ಹೊಸದಾಗಿ ಅರ್ಹತೆ ಪಡೆದ ಯುವ ಮತದಾರರನ್ನು ಪಟ್ಟಿಗೆ ಸೇರಿಸಲು ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಈ ಎಸ್ಐಆರ್ ಶುರು ಮಾಡಿದೆ.
ಜಿಬಿಎ ಟ್ವೀಟ್
ಗಣತಿ ನಮೂನೆ ಭರ್ತಿ ಮಾಡುವ ವಿಧಾನ
- ಗಣತಿ ಪ್ರತಿಯ ಒಂದು ಭಾಗದಲ್ಲಿ ಮತದಾರರ ಹೆಸರು, ಎಪಿಕ್ (EPIC) ಸಂಖ್ಯೆ, ವಿಳಾಸ, ವಿಧಾನಸಭಾ ಕ್ಷೇತ್ರದ ವಿವರಗಳು ಹಾಗೂ ಹಳೆಯ ಭಾವಚಿತ್ರವನ್ನು ಈಗಾಗಲೇ ಮುದ್ರಿಸಲಾಗಿರುತ್ತದೆ. ಇದರೊಂದಿಗೆ ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇರುತ್ತದೆ. ಒಂದು ವೇಳೆ ಫಾರ್ಮ್‌ನಲ್ಲಿ ಮುದ್ರಿತವಾಗಿರುವ ಹಳೆಯ ಭಾವಚಿತ್ರವು ಅಸ್ಪಷ್ಟವಾಗಿದ್ದರೆ ಅಥವಾ ಹಳೆಯದಾಗಿದ್ದರೆ ಮಾತ್ರ, ಹೊಸದಾದ ಸ್ಪಷ್ಟ ಭಾವಚಿತ್ರವನ್ನು ಅದರ ಪಕ್ಕದ ಜಾಗದಲ್ಲಿ ಅಂಟಿಸಬೇಕು.
ಇದನ್ನೂ ಓದಿ: ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುತ್ತೆ ಮತದಾರರ ಪಟ್ಟಿ ಪರಿಷ್ಕರಣೆ: ರಾಜ್ಯ ಚುನಾವಣಾ ಆಯೋಗ
- ನಿಮ್ಮ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಆ ಪಟ್ಟಿಯಲ್ಲಿರುವ ನಿಮ್ಮದೇ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು. ಒಂದು ವೇಳೆ 2002ರಲ್ಲಿ ನಿಮ್ಮ ಹೆಸರು ನೋಂದಣಿಯಾಗಿರದಿದ್ದರೆ, ನಿಮ್ಮ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯ 2002ರ ಮತದಾರರ ಪಟ್ಟಿಯ ವಿವರಗಳನ್ನು ಒದಗಿಸಬೇಕಾಗುತ್ತದೆ.
- ಈ 2002ರ ಮತದಾರರ ಪಟ್ಟಿಯ ವಿವರಗಳು ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಬಳಿ ಲಭ್ಯವಿರುತ್ತವೆ ಅಥವಾ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್ ceo.karnataka.gov.in, ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ voters.eci.gov.in ಮತ್ತು ECINET ಮೊಬೈಲ್ ಆ್ಯಪ್ ಮೂಲಕವೂ ನೀವು ಪಡೆದುಕೊಳ್ಳಬಹುದು.
- ಇನ್ನು ಗಣತಿ ಪ್ರತಿಯಲ್ಲಿ ಪ್ರಸ್ತುತ ವಿವರಗಳನ್ನು ನಮೂದು ಮಾಡಬೇಕು. ನಿಮ್ಮ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬಹುದು ಅಥವಾ ಬಿಡಬಹುದು, ಕಡ್ಡಾಯವಲ್ಲ.
- ಕುಟುಂಬದ ಸದಸ್ಯರೊಬ್ಬರ ಅಂದರೆ ಪೋಷಕರು ಅಥವಾ ವಿವಾಹಿತರಾಗಿದ್ದರೆ ಪತಿ/ಪತ್ನಿ ಹೆಸರನ್ನು ಬರೆಯಬೇಕು. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ, ಫಾರ್ಮ್‌ನ ಕೆಳಗೆ ಸಹಿ ಮಾಡಬೇಕು ಅಥವಾ ಎಡಗೈ ಹೆಬ್ಬೆರಳಿನ ಗುರುತನ್ನು ಹಾಕಬೇಕು.
ಇದನ್ನೂ ಓದಿ: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ: ಕಾರಣ ಏನೂ ಗೊತ್ತಾ?
- ಇನ್ನು ಈ ಗಣತಿ ನಮೂನೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಲಗತ್ತಿಸುವ ಅಗತ್ಯವಿರುವುದಿಲ್ಲ. ಗಣತಿದಾರರು ಪ್ರತಿ ಮನೆಗೆ ಮೂರು ಸಲ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅವರ ಹೆಸರು ಪಟ್ಟಿಗೆ ಸೇರ್ಪಡೆಯಾಗುವುದಲ್ಲ.
- ಇನ್ನು ಕೊನೆಯದಾಗಿ ಸಹಿ ಮಾಡಿದ ಫಾರ್ಮ್ ಅನ್ನು ನಿಮ್ಮ ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಫಾರ್ಮ್ ಅನ್ನು ಪರಿಶೀಲಿಸಿ ಅವರು ಸಹಿ ಮಾಡುತ್ತಾರೆ. ತದನಂತರ, ಒಂದು ಪ್ರತಿಯನ್ನು ಕಚೇರಿಯ ದಾಖಲೆಗಾಗಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ನಿಮಗ ನೀಡುತ್ತಾರೆ. ಹೀಗೆ ಹಿಂತಿರುಗಿಸಿದ ಪ್ರತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.