ವಿಜಯಪುರ, ಅಕ್ಟೋಬರ್ 30: ಕರ್ನಾಟಕದಲ್ಲಿ ವಕ್ಫ್ (Waqf) ಬೋರ್ಡ್ ಆಸ್ತಿ ವಿವಾದ ಭುಗಿಲೆದ್ದಿದೆ. ಇಂದು ಸಾಕಷ್ಟು ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪಹಣಿಯಲ್ಲಿ ನಮೂದಾಗಿದ್ದ ಕರ್ನಾಟಕ ವಕ್ಫ್ ಬೋರ್ಡ್ ಪದವನ್ನು ರಾತ್ರೋ ರಾತ್ರಿ ಕಂದಾಯ ಇಲಾಖೆಯ ಅಧಿಕಾರಿಗಳು ತೆರವು ಮಾಡಿದ್ದಾರೆ. ಆ ಮೂಲಕ ಜಿಲ್ಲೆಯ ರೈತರ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.
ರೈತರ ಪಹಣಿಯ ಕಾಲಂ ನಂಬರ್ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದ ಪದವನ್ನು ಕಂದಾಯ ಅಧಿಕಾರಿಗಳು ಬದಲಾವಣೆ ಮಾಡಿದ್ದಾರೆ. ಅಕ್ಟೋಬರ್ 9ರಂದು ತೆನೆಹಳ್ಳಿ ಗ್ರಾಮದ ರೈತ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ನೋಟೀಸ್ ನೀಡದೇ ಪಹಣಿಯ ಕಾಲಂ ನಂಬರ್ 11ರಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ನಮೂದಿಸಿದ್ದರು. ಇದೀಗ ಯಮನಪ್ಪ ಕೆಂಗನಾಳ ಜಮೀನಿನಲ್ಲಿದ್ದ ಕರ್ನಾಟಕ ವಕ್ಫ್ ಬೋರ್ಡ್ ಎಂಬ ಪದವನ್ನು ಅಧಿಕಾರಿಗಳು ಕೈಬಿಟ್ಟಿದ್ದಾರೆ. ಹೀಗಾಗಿ ರೈತರಲ್ಲಿ ಸಂತಸ ಮೂಡಿದೆ.
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ರೈತರಿಗೆ ನೀಡಿದ ನೋಟಿಸ್ ಸಮರ್ಥಿಸಿಕೊಂಡ ಸಚಿವ ಜಮೀರ್
ಇಂಡಿ ತಾಲ್ಲೂಕಿನ 41 ರೈತರ ಜಮೀನಿಗಳ ನೋಟಿಸ್ ನೀಡದೇ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ತಹಶೀಲ್ದಾರ್ ನಮೂದಿಸಿದ್ದಾರೆ. ಇತರೆ ರೈತರ ಪಹಣಿಯಲ್ಲಿಯೂ ಇದೇ ರೀತಿ ವಕ್ಪ್ ಬೋರ್ಡ್ ಎಂಬುದನ್ನು ತೆಗೆಯಲು ಮನವಿ ಮಾಡಿದ್ದಾರೆ.
ಇನ್ನು ನಿನ್ನೆ ಸಾಯಂಕಾಲದಿಂದಲೇ ಡಿಸಿ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಓರ್ವ ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ, ಇಬ್ಬರು ಡಿವೈಎಸ್ಪಿ, ನಾಲ್ವರು ಪೊಲೀಸ್ ಇನ್ಸ್‌ಪೆಕ್ಟರ್, ಆರು ಜನ ಸಬ್‌ಇನ್ಸ್‌ಪೆಕ್ಟರ್ ಎಚ್ಪಿಸಿ ಹಾಗೂ 50 ಪಿಸಿ ಸಿಬ್ಬಂದಿ ಮತ್ತು ಎರಡು ಡಿಆರ್ ತುಕಡಿಗಳನ್ನು ಬದ್ಧತೆಗಾಗಿ ನಿಯೋಜನೆ ಮಾಡಲಾಗಿದೆ.
ಬಿಜೆಪಿ ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗ ನಿನ್ನೆ ವಿಜಯಪುರಕ್ಕೆ ಭೇಟಿ ಕೊಟ್ಟಿದೆ. ಸಿಂದಗಿ ವಿರಕ್ತ ಮಠದಲ್ಲಿ ರೈತರ ಅಹವಾಲು ಸ್ವೀಕರಿಸಿದೆ. ಬಿಜೆಪಿ ಶಾಸಕ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ ರೈತರ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಬಳಿಕ ಡಿಸಿಯೊಂದಿಗೆ ಚರ್ಚೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:24 am, Wed, 30 October 24