
ಬೆಂಗಳೂರು, ಮೇ 24: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ (Rain) ಚುರುಕುಗೊಂಡಿದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕದಲ್ಲಿ ಗುಡುಗು, ಬಿರುಗಾಳಿ ಸಹಿತ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿವೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಮೋಡಗಳು ದಟ್ಟವಾಗುವ ಸಾಧ್ಯತೆಯಿದ್ದು, ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಮಳೆಯ ಸಮಯದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳ ಕಾಲ ನಗರದ ಗರಿಷ್ಠ ಉಷ್ಣಾಂಶ 32°C ಹಾಗೂ ಕನಿಷ್ಠ ಉಷ್ಣಾಂಶ 22°C ಆಸುಪಾಸಿನಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.
ಮುಂದಿನ 7 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) ಕರ್ನಾಟಕ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ, ಹಾಗೂ ಇಂದು ಮತ್ತು ನಾಳೆ ಅಲ್ಲಲ್ಲಿ ಭಾರಿ ಮಳೆ. ಒಳನಾಡು ಜಿಲ್ಲೆಗಳಲ್ಲಿ ಮೇ 25 ರಂದು ಅಲ್ಲಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ.#KSNDMC pic.twitter.com/XvJt6F5cba
— Karnataka State Natural Disaster Monitoring Centre (@KarnatakaSNDMC) May 24, 2026
ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, ಹಸಿರು ಅಲರ್ಟ್ ಘೋಷಿಸಲಾಗಿದೆ. ಮೇ 25ರಂದು ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮೇ 26 ಮತ್ತು 27 ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಮೇ 28 ಮತ್ತು 30ರಂದು ಯಾವುದೇ ಮಳೆಯ ಮುನ್ಸೂಚನೆ ಇಲ್ಲ.
ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರಬೇಕು ಮತ್ತು ಸಿಡಿಲು ಬಡಿಯುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮೇ 25ರಂದು ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿಯುವ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 26 ಮತ್ತು ಮೇ 27ರಂದು ಮಳೆಯ ಆರ್ಭಟ ಮುಂದುವರಿಯಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಮೇ 28ರಿಂದ ಮೇ 30ರವರೆಗೆ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ನೀಡಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.