ಬೆಂಗಳೂರು: ಕರ್ನಾಟಕದಲ್ಲಿ (Karnataka Weather Today) ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಬೆಂಗಳೂರು (Bengaluru Weather), ಮಲೆನಾಡು ಭಾಗಗಳಲ್ಲಿ ವಿಪರೀತ ಚಳಿ ಶುರುವಾಗಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ದಟ್ಟ ಮಂಜು ಕವಿಯಲಿದೆ. ಇಂದು ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಗಾಳಿಯ (Cold Wave) ಅಲೆ ಇರಲಿದೆ. ಇಂದಿನಿಂದ ಐದಾರು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಇಂದು ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಮಂಗಳವಾರ ಅತಿ ಕಡಿಮೆ ಉಷ್ಣಾಂಶ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಾಗಲಕೋಟೆ ಮತ್ತು ವಿಜಯಪುರದಲ್ಲಿ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಹೀಗಾಗಿ, ಹವಾಮಾನ ಇಲಾಖೆ ಶೀತ ಅಲೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಈ ಜೀವನಶೈಲಿ ಪಾಲಿಸಿ
ರಾಜ್ಯಾದ್ಯಂತ ಶೀತ ಅಲೆ ಹೆಚ್ಚಾಗಿರುವುದರಿಂದ ಕನಿಷ್ಠ ಮೂರರಿಂದ ನಾಲ್ಕು ಪದರಗಳ ಬಟ್ಟೆಗಳನ್ನು ಧರಿಸಬೇಕು, ಸಾಧ್ಯವಾದಾಗ ಮನೆಯೊಳಗೇ ಉಳಿಯಬೇಕು, ದೇಹವನ್ನು ಪೂರ್ತಿಯಾಗಿ ಕವರ್ ಮಾಡಿಕೊಳ್ಳಬೇಕು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಚಳಿ ಗಾಳಿ ಇತರ ಆರೋಗ್ಯ ಸಮಸ್ಯೆಗಳಾದ ಮೂಗು ಸೋರುವಿಕೆ, ಅಸ್ತಮಾ ಹದಗೆಡುವುದು, ಜ್ವರದ ಲಕ್ಷಣಗಳು ಮತ್ತು ಚರ್ಮದ ತುರಿಕೆ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಶೀತ ಅಲೆಯಿಂದ ಶಿಶುಗಳು, ಗರ್ಭಿಣಿ ಮಹಿಳೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು ಮುಂತಾದವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Health Tips: ಚಳಿಗಾಲದಲ್ಲಿ ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 13-14 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.