KEA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ಲ್ಯಾನ್ ಎ ವಿಫಲವಾದರೆ ಪ್ಲ್ಯಾನ್ ಬಿ ರೆಡಿ ಮಾಡಿಟ್ಟುಕೊಂಡಿದ್ದ ಆರ್‌ಡಿ ಪಾಟೀಲ್

| Updated By: Rakesh Nayak Manchi

Updated on: Nov 12, 2023 | 8:17 PM

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಪ್ರಕರಣ ಸಂಬಂಧ ಕಿಂಗ್​ಪಿನ್ ಆರ್​ಡಿ ಪಾಟೀಲ್​ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ನಡುವೆ ಆತ ಅಕ್ರಮ ಎಸಗಲು ಮಾಡಿದ್ದ ಪ್ಲ್ಯಾನ್ ಎ ಮತ್ತು ಬಿ ವಿಚಾರ ಬೆಳಕಿಗೆ ಬಂದಿದೆ. ಜಾಮರ್‌ನಿಂದ ಮೊಬೈಲ್ ಕೈಕೊಟ್ಟರೆ ಮಿನಿ ವಾಕಿಟಾಕಿಯನ್ನು ಆರ್​ಡಿ ಪಾಟೀಲ್ ಖರೀದಿಸಿದ್ದ.

KEA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ಲ್ಯಾನ್ ಎ ವಿಫಲವಾದರೆ ಪ್ಲ್ಯಾನ್ ಬಿ ರೆಡಿ ಮಾಡಿಟ್ಟುಕೊಂಡಿದ್ದ ಆರ್‌ಡಿ ಪಾಟೀಲ್
ಆರ್​ಡಿ ಪಾಟೀಲ್
Follow us on

ಕಲಬುರಗಿ, ನ.12: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಎಫ್​ಡಿಎ ಪರೀಕ್ಷೆಯಲ್ಲಿನ (FDA Exam Scam) ಅಕ್ರಮ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು. ಅಕ್ರಮ ತಡೆಗಟ್ಟಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ ಎಂದು ಈ ಪ್ರಕರಣದ ಕಿಂಗ್​ಪಿನ್ ಆಗಿರುವ ಆರ್​ಡಿ ಪಾಟೀಲ್ (RD Patil), ಒಂದೊಮ್ಮೆ ಪ್ಲ್ಯಾನ್ ಎ ವಿಫಲವಾದರೆ ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.

ಪಿಎಸ್‌ಐ ಪರೀಕ್ಷೆ ಹಗರಣದಲ್ಲಿ ಹಲವು ಮಾರ್ಗಗಳ ಮೂಲಕ ಅಕ್ರಮ ಎಸಗಿ ಸಾವಿರಾರು ಅಭ್ಯರ್ಥಿಗಳ ಉದ್ಯೋಗದ ಆಸೆಗೆ ತಣ್ಣಿರು ಎರಚಿದ್ದ ಆರ್‌ಡಿ ಪಾಟೀಲ್, ಇದೀಗ ಕೆಇಎ ನಡೆಸಿದ್ದ ಎಫ್‌ಡಿಎ ಪರೀಕ್ಷೆಯಲ್ಲಿ ಸಹ ಹಲವು ರೀತಿಯ ಅಕ್ರಮ ಎಸಗಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಕೆಇಎ ಎಫ್‌ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನ ಮಾಯಜಾಲ ಬಗೆದಷ್ಟು ಬಯಲಾಗುತ್ತಲೇ ಇದೆ. ಪಿಎಸ್‌ಐ ಹಗರಣದ ನಂತರ ಎಚ್ಚೆತ್ತುಕೊಂಡಿರೋ ಆರ್‌ಡಿ ಪಾಟೀಲ್, ಎಕ್ಸಾಂ ಸೆಂಟರ್‌ನಲ್ಲಿ ಜಾಮರ್ ಹಾಕಿದರೆ, ವಾಕಿಟಾಕಿಯಿಂದ ಉತ್ತರ ರವಾನಿಸಲು ಪ್ಲ್ಯಾನ್ ಬಿ ರೆಡಿ ಮಾಡಿಟ್ಟುಕೊಂಡಿದ್ದ ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ.

ಇದನ್ನೂ ಓದಿ: ಸ್ಥಳ ಮಹಜರುಗೆ ಕರೆದೊಯ್ಯುವ ವೇಳೆ ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್​ಡಿ ಪಾಟೀಲ್

ಜಾಮರ್‌ನಿಂದ ಮೊಬೈಲ್ ಕೈಕೊಟ್ಟರೆ ವಾಕಿಟಾಕಿಯಿಂದ ಉತ್ತರ ರವಾನಿಸಲು ಅತ್ಯಂತ ಚಿಕ್ಕ ಮಾಡೇಲ್‌ನ ಹಲವು ವಾಕಿಟಾಕಿಗಳನ್ನ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಖರೀದಿ ಮಾಡಿಟ್ಟುಕೊಂಡಿದ್ದ ಅಂತಾ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಕಲಬುರಗಿ ಜಿಲ್ಲೆಯಲ್ಲಿ ಕೆಇಎ ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿಗೆ ಕೆಸ್ ಹಸ್ತಾಂತರ ಮಾಡಿದ್ದ ಬೆನ್ನಲ್ಲೆ, ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಪರಾರಿಗೆ ಸಹಕರಿದ ಪೊಲೀಸರ ಎದೆಯಲ್ಲೂ ಢವ ಢವ ಶುರುವಾಗಿದೆ.

ಕಲಬುರಗಿ ನಗರದ ವರ್ಧಾ ಲೇಔಟ್‌ನ ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿ ಮತ್ತು ನೇಲೋಗಿ ಗ್ರಾಮದಲ್ಲಿ ಆರ್‌ಡಿ ಪಾಟೀಲ್‌ ಪರಾರಿಯಾಗಲು ಕೆಲ ಪೊಲೀಸರು ಪಾಟೀಲ್​ಗೆ ವಾಟ್ಸ್​ಆ್ಯಪ್ ಕಾಲ್ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದ್ದು, ಇದೀಗ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದ್ದರಿಂದ ಮಾಹಿತಿದಾರ ಪೊಲೀಸರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ‌‌.

ಇತ್ತ ಬಂಧಿತ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಪೊಲೀಸ್ ತನಿಖೆ ವೇಳೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವ ಬಗ್ಗೆಯಷ್ಟೇ ಬಾಯಿಬಿಟ್ಟಿದ್ದು, ಎಲ್ಲಿ ಲೀಕ್ ಮಾಡಲಾಗಿತ್ತು? ಯಾರಿಂದ ಲೀಕ್ ಮಾಡಲಾಗಿತ್ತು ಎಂಬ ಗುಟ್ಟು ರಟ್ಟು ಮಾಡದೇ ಇರುವುದು ಪೊಲೀಸರಿಗೆ ತಲೆ ನೋವಾಗಿದೆ. ಇನ್ನೂ ಕಾಲೇಜು ಆಡಳಿತ ಮಂಡಳಿಯ ಕೈವಾಡದಿಂದ ಪರೀಕ್ಷಾ ಕೇಂದ್ರದಲ್ಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಉತ್ತರಗಳನ್ನ ಬ್ಲೂಟುತ್ ಡಿವೈಸ್ ಮೂಲಕ ಕಳುಹಿಸುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಒಟ್ಟಾರೆಯಾಗಿ, ಕೆಇಎ ಎಫ್‌ಡಿಎ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಖಾಕಿ ಒಂದೊಂದೆ ಸ್ಫೋಟಕ ಸತ್ಯಗಳನ್ನ ಬಯಲಿಗೆಳೆಯುತ್ತಿದೆ. ಇತ್ತ ಆರ್‌ಡಿ ಪಾಟೀಲ್ ಪರಾರಿಗೆ ಸಹಕಾರ ನೀಡಿದ್ದ ಕೆಲ ಪೊಲೀಸರ ನೆತ್ತಿ ಮೇಲೆ ಸಿಐಡಿ ತೂಗುಕತ್ತಿ ನೇತಾಡುತ್ತಿರುವುದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ