ವಯನಾಡು ಗುಡ್ಡ ಕುಸಿತ: ನಿಮ್ಮೊಂದಿಗೆ ನಾವಿದ್ದೇವೆ, ಕೇರಳಕ್ಕೆ ಸಿದ್ದರಾಮಯ್ಯ ಅಭಯ ಹಸ್ತ

|

Updated on: Jul 31, 2024 | 11:06 AM

Wayanad Landslide: ಕೇರಳದ ವಯನಾಡು ಜಿಲ್ಲೆಯಲ್ಲಿ ಸರಣಿ ಭೂಕುಸಿತ ಉಂಟಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಯನಾಡು ಜಿಲ್ಲೆ ಚೂರಲ್​ಮಲನಲ್ಲಿ ಗುಡ್ಡ ಕುಸಿದಿದ್ದು, ದೊಡ್ಡ ದುರಂತ ಸಂಭವಿಸಿದೆ. ಅಗತ್ಯ ನೆರವು ನೀಡುವುದಾಗಿ ಸಿದ್ದರಾಮಯ್ಯ ಕೇರಳ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ವಯನಾಡು ಗುಡ್ಡ ಕುಸಿತ: ನಿಮ್ಮೊಂದಿಗೆ ನಾವಿದ್ದೇವೆ, ಕೇರಳಕ್ಕೆ ಸಿದ್ದರಾಮಯ್ಯ ಅಭಯ ಹಸ್ತ
ಕೇರಳಕ್ಕೆ ಸಿದ್ದರಾಮಯ್ಯ ಅಭಯ ಹಸ್ತ
Follow us on

ಬೆಂಗಳೂರು, ಜುಲೈ 31: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಘೋರ ಗುಡ್ಡ ಕುಸಿತದಲ್ಲಿ (Kerala Wayanad Landslide) ಹಲವರು ಮೃತಪಟ್ಟಿದ್ದು, ಅನೇಕರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್​, ಸ್ಥಳೀಯ ಪೊಲೀಸರು ಮತ್ತು ಸೈನ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇರಳದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿ​​ಗೆ ಕರೆ ಮಾಡಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಕ್ಷಣಾ ಕಾರ್ಯಾಚರಣೆಯಲ್ಲಿ ನಮ್ಮ ಸರ್ಕಾರ ನಿಮ್ಮೊಂದಿಗೆ ಕೈಜೋಡಿಸಲಿದೆ. ರಕ್ಷಣಾ ತಂಡ, ಅಗತ್ಯ ಸಾಮಗ್ರಿ ಕಳುಹಿಸಲಾಗುತ್ತಿದೆ ಎಂದು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಸಂತೋಷ್ ಲಾಡ್ ವಾಯನಾಡಿಗೆ

ದುರಂತದಲ್ಲಿ ಸಿಲುಕಿಕೊಂಡವರ ರಕ್ಷಣೆ ಸಂಬಂಧ ಸಚಿವ ಸಂತೋಷ್ ಲಾಡ್ ಅಧಿಕಾರಿಗಳ ಜೊತೆ ವಾಯನಾಡಿಗೆ ತೆರಳುತ್ತಿದ್ದು, ಮಧ್ಯಾಹ್ನದ ವೇಳೆಗೆ ವಾಯನಾಡ್​ಗೆ ತಲುಪಲಿದ್ದಾರೆ. ರೈಲು ದುರಂತದ ವೇಳೆ ಕೂಡ ​ಕನ್ನಡಿಗರ ರಕ್ಷಣೆಗಾಗಿ ಸಂತೋಷ್​ ಲಾಡ್ ಒಡಿಶಾಗೆ ತೆರಳಿದ್ದರು.

ವಯನಾಡಿಗೆ ಬೆಂಗಳೂರಿನ ಎನ್​ಡಿಆರ್​ಎಫ್​

ಬೆಂಗಳೂರಿನಲ್ಲಿರುವ ಎನ್​ಡಿಆರ್​ಎಫ್​​ ತಂಡ ಹಾಗೂ ಮದ್ರಾಸ್​ ಎಂಜಿನಿಯರ್​ ಗ್ರೂಪ್​ ಸೇನಾ ಪಡೆಯ ತಂಡಗಳು ಈಗಾಗಲೆ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದತೆ

ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಕೇರಳದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎರಡು ಕೊಠಡಿ ಮೀಸಲು ಇಡಲಾಗಿದೆ. ಈ ಬಗ್ಗೆ ಕೆಆರ್​ ಆಸ್ಪತ್ರೆ ಮುಖ್ಯಸ್ಥರು, ಮೈಸೂರು ಮೆಡಿಕಲ್ ಕಾಲೇಜು ಡೀನ್ ದ್ರಾಕ್ಷಾಯಿಣಿ ಮಾತನಾಡಿ, ಒಟ್ಟು 15 ಬೆಡ್‌ಗಳನ್ನು ಕಾಯ್ದಿರಿಸಿದ್ದೇವೆ. ಅಗತ್ಯವಾದ ಔಷಧಿಗಳು, ಎರಡು ಆಕ್ಸಿಜನ್ ಸಿಲಿಂಡರ್, 24×7 ಒಬ್ಬ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ತುರ್ತು ಚಿಕಿತ್ಸಾ ಘಟಕದಲ್ಲಿ ಮೂರು ಬೆಡ್‌ಗಳು ಇವೆ. ಮೊದಲು ಇಲ್ಲಿ ಪ್ರಾಥಮಿಕ ಚಿಕಿತ್ಸೆ‌ ನೀಡಲಾಗುವದು. ಅವಶ್ಯಕತೆ ಇದ್ದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ನೆರವಿಗಾಗಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ನಿಯೋಜನೆ: ಸಿಎಂ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಗುಡ್ಡ ಕುಸಿತ: ಹೊಸ ಮನೆ ಕೊಂಡ ಸಂತಸದಲ್ಲೇ ಜಲಸಮಾಧಿಯಾದ ಕರ್ನಾಟಕದ ದಂಪತಿ

ಐಎಎಸ್​ ಅಧಿಕಾರಿಗಳ ಮೊಬೈಲ್​ ಸಂಖ್ಯೆ

ಸಿ.ಜಾಫರ್​-9448355577

ದಿಲೀಶ್​ ಶಶಿ-9556000514

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳು:

08226-223163

08226-223161

08226-223160

ವಾಟ್ಸಪ್​​ ಸಂಖ್ಯೆ:

9740942901

ಈ ಮಾಹಿತಿಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಿ, ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ನೆರವು ಸಿಗಲು ಕಾರಣರಾಗಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:03 am, Wed, 31 July 24