ಮಂಗಳೂರು: ವಿದ್ಯಾರ್ಥಿನಿಗೆ ಹೃದಯಾಘಾತವಾದಾಗ ಬಸ್ಸೇ ಎಮರ್ಜೆನ್ಸಿ ವಾಹನವಾಯ್ತು!
ಮಂಗಳೂರಿನ ಕೂಳೂರು ಎಂಬಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಚಾಲಕ ಹಾಗೂ ನಿರ್ವಹಾಕ ಸಿನಿಮೀಯ ಮಾದರಿಯಲ್ಲಿ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ. ಚಾಲಕ, ನಿರ್ವಾಹಕನ ಮಾನವೀಯತೆಗೆ ಮತ್ತು ಸಮಯಪ್ರಜ್ಞೆಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮಂಗಳೂರು, ಜುಲೈ 31: ಚಲಿಸುತ್ತಿದ್ದ ಬಸ್ನಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದ ಅಪರೂಪದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೂಳೂರು ಮಾರ್ಗ 13ಎಫ್ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿವೆ.
ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಬಸ್ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು ಕೇವಲ 6 ನಿಮಿಷಗಳಲ್ಲಿ 6 ಕಿಲೋಮೀಟರ್ ದೂರ ಕ್ರಮಿಸಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿದರು.
ಸಂದರ್ಭವನ್ನು ಅರಿತುಕೊಂಡು ತಕ್ಷಣವೇ ಬಸ್ಸನ್ನು ಆಸ್ಪತ್ರೆಯತ್ತ ಚಲಾಯಿಸಿದ ಕಾರಣ ವಿದ್ಯಾರ್ಥಿನಿಯನ್ನು ರಕ್ಷಿಸಲು ಸಾಧ್ಯವಾಯಿತು. ಪರಿಣಾಮವಾಗಿ ವಿದ್ಯಾರ್ಥಿನಿಯ ಜೀವ ಉಳಿಯಿತು. ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಗೆ ಮತ್ತು ಮಾನವೀಯತೆಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರಾವಳಿ ಭಾಗದ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಮಾನವೀಯತೆ ಮತ್ತು ಸಹಾನುಭೂತಿಯ ಸಾಕಾರರು ಎಂಬುದನ್ನು ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮುಂದುವರಿದ ಮಳೆ
ಮಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಮಳೆಗೆ ಕೊಟ್ಟಾರ ಚೌಕಿ ಬಳಿ ಕಟ್ಟಡವೊಂದರ ಮೇಲ್ಛಾವಣಿ ತಾರಸಿಯಿಂದ ರಸ್ತೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್, ಸಾವುನೋವುಗಳ ವರದಿಯಾಗಿಲ್ಲ.
ಇದನ್ನೂ ಓದಿ: ಬಂಟ್ವಾಳದಲ್ಲಿ ನೇತ್ರಾವತಿ ನದಿ ಪ್ರವಾಹ, ಪುರಸಭಾ ವಾಣಿಜ್ಯ ಸಂಕೀರ್ಣ ಸೇರಿ ಹಲವೆಡೆ ಜಲಾವೃತ
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಪಾವೂರು ಗ್ರಾಮದ ಕಡವಿನ ಬಲಿಯ ಹರೇಕಳ ಭಾಗದ 15 ಕುಟುಂಬಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಅಗ್ನಿಶಾಮಕ ದಳದ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ. ಕಡೇಂಜದೋಟ, ಬೈತಾರು, ಉಳಿಗುದ್ದು ಭಾಗದಲ್ಲಿ ನೇತ್ರಾವತಿ ನದಿ ತೀರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Wed, 31 July 24