ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?: ಸರ್ಕಾರದ ದ್ವಂದ್ವ ನೀತಿ ವಿರುದ್ಧ ಸಿಟಿ ಜನ ಫುಲ್ ಗರಂ!

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ರೂಫ್‌ಟಾಪ್ ಸೌರ ವಿದ್ಯುತ್ ಗ್ರಿಡ್‌ಗೆ ರಫ್ತು ಮಾಡುವ ಹೆಚ್ಚುವರಿ ವಿದ್ಯುತ್ ದರ ಕಡಿತಕ್ಕೆ ಮುಂದಾಗಿದೆ. ಈ ಪ್ರಸ್ತಾಪವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸರ್ಕಾರಗಳು ಸೌರ ಇಂಧನ ಪ್ರೋತ್ಸಾಹಿಸುತ್ತಿರುವಾಗ, ಈ ನಿರ್ಧಾರ ಹೊಸ ಗ್ರಾಹಕರನ್ನು ನಿರುತ್ಸಾಹಗೊಳಿಸಿ ಹಸಿರು ಇಂಧನ ಪರಿವರ್ತನೆಗೆ ಹಿನ್ನಡೆ ಉಂಟುಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.

ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?: ಸರ್ಕಾರದ ದ್ವಂದ್ವ ನೀತಿ ವಿರುದ್ಧ ಸಿಟಿ ಜನ ಫುಲ್ ಗರಂ!
Kerc Proposes Rooftop Solar
Image Credit source: Google

Updated on: Jun 22, 2026 | 4:13 PM

ಬೆಂಗಳೂರು, ಜೂ.22: ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ಮುಕ್ತ ಹಸಿರು ಇಂಧನಕ್ಕೆ ಆದ್ಯತೆ ನೀಡಲು ಮನೆಗಳ ಮೇಲೆ ಸೌರ ವಿದ್ಯುತ್ (Rooftop Solar) ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಗ್ರಾಹಕರು ಗ್ರಿಡ್‌ಗೆ ರಫ್ತು ಮಾಡುವ ಹೆಚ್ಚುವರಿ ಸೌರ ವಿದ್ಯುತ್‌ನ ದರವನ್ನು (Tariff) ಕಡಿತಗೊಳಿಸಲು ಮುಂದಾಗಿದೆ. ನಿಯಂತ್ರಕರ ಈ ನೀತಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ವಾಸ್ತವದಿಂದ ದೂರವಿದ್ದಾರೆಯೇ? ಎಂಬ ಪ್ರಶ್ನೆ ಮೂಡಿಸಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​  ಎಂಬ ಎಕ್ಸ್​​ ಖಾತೆಯಲ್ಲಿ ಈ ಬಗ್ಗೆ ಒಂದು ವರದಿಯನ್ನು ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸ್ವಾವಲಂಬಿ ಇಂಧನ ಇಕೋಸಿಸ್ಟಮ್ ನಿರ್ಮಿಸಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಜನರು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಇಆರ್‌ಸಿ, ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ಗೆ ನೀಡಲಾಗುವ ಪ್ರೋತ್ಸಾಹಕ ದರವನ್ನು ಕಡಿಮೆ ಮಾಡಲು ಪ್ರಸ್ತಾಪಿಸಿದೆ. ಈ ನಿರ್ಧಾರವು ಸೌರ ಇಂಧನ ಅಳವಡಿಸಿಕೊಳ್ಳಲು ಮುಂದಾಗುವ ಹೊಸ ಗ್ರಾಹಕರನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಪರಿಸರ ಸ್ನೇಹಿ ಇಂಧನ ಪರಿವರ್ತನೆಗೆ ಭಾರಿ ಹಿನ್ನಡೆ ಉಂಟುಮಾಡುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್:

“ಸಾರ್ವಜನಿಕರನ್ನು ಆಸಕ್ತಿಯನ್ನು ಕುಗ್ಗಿಸುವ ಬದಲು, ಹೆಚ್ಚುತ್ತಿರುವ ಸೌರ ವಿದ್ಯುತ್ ಲೋಡ್ ಅನ್ನು ತಡೆದುಕೊಳ್ಳಲು ಮತ್ತು ವ್ಯವಸ್ಥೆಯನ್ನು ಬೆಂಬಲಿಸಲು ಸರ್ಕಾರಗಳು ನಮ್ಮ ಇಂಧನ ಗ್ರಿಡ್ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅದರಲ್ಲಿ ಹೂಡಿಕೆ ಮಾಡುವ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ಗ್ರಾಹಕರಿಗೆ ಸಿಗುವ ಲಾಭಾಂಶಕ್ಕೆ ಕತ್ತರಿ ಹಾಕುವುದು ಎಷ್ಟು ಸರಿ?” ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಇದು ಅಡವಿಯಲ್ಲ, ಸಿಲಿಕಾನ್ ಸಿಟಿ ಒಳಗಿನ ‘ಅರ್ಬನ್ ಫಾರೆಸ್ಟ್’: ಐಐಎಸ್‌ಸಿ ಕ್ಯಾಂಪಸ್‌ನ ಮನಮೋಹಕ ಹಸಿರು ಸೌಂದರ್ಯ ಹೇಗಿದೆ ನೋಡಿ?

ಸದ್ಯ ಈ ವಿವಾದಾತ್ಮಕ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೆಇಆರ್‌ಸಿ ಸಾರ್ವಜನಿಕರಿಂದ ಲಿಖಿತ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. “ನೀತಿ ನಿರೂಪಕರು ಕೇವಲ ಕಚೇರಿಗಳಲ್ಲಿ ಕುಳಿತು ನಿರ್ಧಾರ ಕೈಗೊಳ್ಳದೆ, ಸಾರ್ವಜನಿಕರ ಸಲಹೆಗಳು ಮತ್ತು ನೀತಿ ಸಲಹೆಗಳನ್ನು ಗಂಭೀರವಾಗಿ ಓದಬೇಕು. ಕೆಇಆರ್‌ಸಿ ಅಧ್ಯಕ್ಷರು ಈ ಬಾರಿ ಸಾರ್ವಜನಿಕರ ನೈಜ ಸಂದೇಶ ಮತ್ತು ಆಕ್ರೋಶವನ್ನು ಅರ್ಥಮಾಡಿಕೊಳ್ಳಲಿದ್ದಾರೆ” ಎಂದು ಆಶಿಸಿ ಗ್ರಾಹಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಸಜ್ಜಾಗುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:06 pm, Mon, 22 June 26

Follow Us