ಕೇತಗಾನಹಳ್ಳಿ ಭೂ ಒತ್ತುವರಿ ತೆರವು ಕಾರ್ಯಾಚರಣೆ: ಹೆಚ್​ಡಿ ಕುಮಾರಸ್ವಾಮಿ ಮುಂದಿನ ಪ್ಲಾನ್ ಹೀಗಿದೆಯಂತೆ!

|

Updated on: Mar 19, 2025 | 12:33 PM

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಂಬಂಧ ಇದೀಗ ಜಿಲ್ಲಾಡಳಿತ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಹೈಕೋರ್ಟ್ ಎಚ್ಚರಿಕೆಯ ನಂತರ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಆದರೆ, ಈ ವಿಚಾರವಾಗಿ ಕುಮಾರಸ್ವಾಮಿ ಹೇಳುವುದೇನು? ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಅವರ ಮುಂದಿನ ನಡೆ ಏನಿರಲಿದೆ? ವಿವರ ಇಲ್ಲಿದೆ.

ಕೇತಗಾನಹಳ್ಳಿ ಭೂ ಒತ್ತುವರಿ ತೆರವು ಕಾರ್ಯಾಚರಣೆ: ಹೆಚ್​ಡಿ ಕುಮಾರಸ್ವಾಮಿ ಮುಂದಿನ ಪ್ಲಾನ್ ಹೀಗಿದೆಯಂತೆ!
ಹೆಚ್​ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಮಾರ್ಚ್ 19: ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಸರ್ಕಾರಿ ಭೂ ಒತ್ತುವರಿ (Land encroachment) ಆರೋಪ ಸಂಬಂಧ ಕ್ರಮ ಕೈಗೊಳ್ಳಲು ರಾಮನಗರ (Ramanagara) ಜಿಲ್ಲಾಡಳಿತ ಈಗಾಗಲೇ ಮುಂದಾಗಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಜಮೀನು ಸರ್ವೆ ಮತ್ತು ಮಾರ್ಕಿಂಗ್ ಕಾರ್ಯವನ್ನು ಮಂಗಳವಾರವೇ ಆರಂಭಿಸಲಾಗಿತ್ತು. ಕರ್ನಾಟಕ ಹೈಕೋರ್ಟ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಮತ್ತೊಂದೆಡೆ ಕುಮಾರಸ್ವಾಮಿ ಅವರು ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಕುಮಾರಸ್ವಾಮಿ ರಾಜಕೀಯ ನಡೆ ಏನಿರಲಿದೆ?

ಭೂ ಒತ್ತುವರಿ ಆರೋಪವನ್ನು ಮುಂದಿಟ್ಟುಕೊಂಡು ಹೆಚ್​ಡಿ ದೇವೇಗೌಡ ಹಾಗೂ ನಮ್ಮ ಕುಟುಂಬವನ್ನು ರಾಜಕೀಯವಾಗಿ ಕೊನೆಗೊಳಿಸಲು ಕರ್ನಾಟಕ ಕಾಂಗ್ರೆಸ್ ಸಂಚು ಹೂಡಿದೆ ಎಂದು ಕುಮಾರಸ್ವಾಮಿ ಈಗಾಗಲೇ ಆರೋಪ ಮಾಡಿದ್ದಾರೆ. ರಾಜಕೀಯವಾಗಿ ನಮ್ಮನ್ನು ಮುಗಿಸಲು ಕಾಂಗ್ರೆಸ್ ಹೂಡಿರುವ ತಂತ್ರ ಇದು ಎಂದು ಅವರು ದೂರಿದ್ದಾರೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿಯೂ ಹೇಳಿದ್ದಾರೆ.

ಕುಮಾರಸ್ವಾಮಿ ಕಾನೂನು ಹೋರಾಟ ಹೇಗಿರಲಿದೆ?

ಭೂ ಒತ್ತುವರಿ ಸಂಬಂಧ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ನಿಜ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದಕ್ಕಾಗಿ ಕಂದಾಯ ಇಲಾಖೆಯನ್ನು ಹೈಕೋರ್ಟ್ ಪ್ರಶ್ನಿಸಿತ್ತು. ಆದರೆ, ಭೂ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಜಿಲ್ಲಾಡಳಿತ ಕುಮಾರಸ್ವಾಮಿಯವರಿಗೆ ನೋಟಿಸ್ ನೀಡಿಲ್ಲ. ನೋಟಿಸ್ ನೀಡದೇ ಕೇತಗಾನಹಳ್ಳಿಯಲ್ಲಿ ಸರ್ವೇ ಹಾಗೂ ಮಾರ್ಕಿಂಗ್ ಕಾರ್ಯ ಆರಂಭಿಸಿದೆ. ಇದನ್ನೇ ಮುಂದಿಟ್ಟುಕೊಂಡು ವಿಶೇಷ ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುವ ಕಾರ್ಯವನ್ನು ಕೂಡ ಕುಮಾರಸ್ವಾಮಿ ಈಗಾಗಲೇ ಆರಂಭಿಸಿದ್ದಾರೆ.

ಇದನ್ನೂ ಓದಿ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ

ನೋಟಿಸ್ ನೀಡಲು ಮುಂದಾದ ಜಿಲ್ಲಾಡಳಿತ

ಏತನ್ಮಧ್ಯೆ, ಭೂ ಒತ್ತುವರಿ ಸಂಬಂಧ ಕುಮಾರಸ್ವಾಮಿಗೆ ನೋಟಿಸ್ ನೀಡಲು ರಾಮನಗರ ಜಿಲ್ಲಾಡಳಿತ ಮುಂದಾಗಿದೆ. ಏಳು ದಿನ‌ ಒಳಗೆ ಉತ್ತರ ನೀಡಲು ಅವಕಾಶ ಕೊಡಲಾಗುತ್ತದೆ. ಸರ್ಕಾರಿ ಭೂಮಿ ಒತ್ತುವರಿ ಆಗಿದೆ, ನಿಮ್ಮ ಬಳಿ ಏನಾದರೂ ದಾಖಲೆಗಳು, ತಕರಾರು ಇದ್ದರೆ ಅಕ್ಷೇಪಣೆ ಸಲ್ಲಿಸಿ ಎಂದು ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ಸಮರ್ಪಕ ಉತ್ತರ ದೊರೆಯದಿದ್ದಲ್ಲಿ ಕಾರ್ಯಾಚರಣೆ ಮುಂದುವರಿಲಿದೆ.

ಇದನ್ನೂ ಓದಿ: ತೋಟದ ಮನೆ ಸುತ್ತ ಸರ್ಕಾರಿ ಭೂಮಿ ಒತ್ತುವರಿ ತೆರವು: ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ಹೀಗಿದೆ

ಸರ್ವೆ ನಂಬರ್ 7,8,9 ರಲ್ಲಿ ಸುಮಾರು 11 ಎಕರೆಗೆ ಮಾರ್ಕಿಂಗ್ ಮಾಡಲಾಗಿದೆ. 14 ಎಕರೆಗೂ ಹೆಚ್ಚು ಒತ್ತುವರಿ ಆಗಿರುವ ಅಂಶ ಈಗಾಗಲೇ ಸರ್ವೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಮಂಗಳವಾರ ಒತ್ತುವರಿ ಜಾಗದ ಮಾರ್ಕಿಂಗ್ ಕಾರ್ಯ ನಡೆದಿತ್ತು. ಉಳಿದ ಜಾಗದ ಮಾರ್ಕಿಂಗ್ ಕಾರ್ಯ ನಡೆಯಬೇಕಿದೆ. ಏಳು ದಿನದ ಒಳಗೆ ಕುಮಾರಸ್ವಾಮಿ ಉತ್ತರ ನೀಡದೇ ಇದ್ದರೇ ತೆರವು ಕಾರ್ಯವನ್ನು ಜಿಲ್ಲಾಡಳಿತ ಮುಂದುವರಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ