KIADB ಭೂ ಹಗರಣ: ತೀರ್ಪು ಕಾಯ್ದಿರಿಸಿದ ಕೋರ್ಟ್, ಖರ್ಗೆ ಕುಟುಂಬಕ್ಕೆ ಢವಢವ
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಪ್ರಕರಣದ ವಿಚಾರಣೆ ನಡೆಯಿತು. ಬಿಡಿಎ ಮತ್ತು ಕೆಐಎಡಿಬಿಯಿಂದ ಅನುಚಿತ ಲಾಭ ಪಡೆದ ಆರೋಪದ ಮೇಲೆ ವಿಚಾರಣೆ ನಡೆದಿದ್ದು, ಆಗಸ್ಟ್ 12ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಮತ್ತು ಬಿಟಿಎಂನಲ್ಲಿನ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಆರೋಪಗಳಿವೆ.

ಬೆಂಗಳೂರು, ಆಗಸ್ಟ್ 05: ಬಿಡಿಎ (BDA), ಕೆಐಎಡಿಬಿಯಿಂದ (KIADB) ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರಿನ ವಿಚಾರಣೆ ಮಂಗಳವಾರ (ಆ.05) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆಯಿತು.
“ತಮ್ಮ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಅನುಚಿತ ಲಾಭಕ್ಕೆ ಯತ್ನಿಸಿದ್ದಾರೆ. ದೇವನಹಳ್ಳಿಯಲ್ಲಿರುವ ” ಏರೋಸ್ಪೇಸ್ ಪಾರ್ಕ್‌ನಲ್ಲಿನ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್ ಹೆಸರಿನಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಮಂಜೂರು ಮಾಡಿಕೊಂಡಿಕೊಂಡಿದ್ದಾರೆ. ಏರೋಸ್ಪೇಸ್, ರಿಸರ್ಚ್ ಇತ್ಯಾದಿಗಳಲ್ಲಿ ಅನುಭವವಿಲ್ಲದಿದ್ದರೂ ಭರ್ತಿ ಮಾಡದ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಪಡೆದಿದ್ದಾರೆ.”
“ಅಲ್ಲದೆ, 2014ರಲ್ಲಿ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನವನ್ನು ಶೇ.50ರಷ್ಟು ಸಬ್ಸಿಡಿ ಪಡೆದು ಪರಭಾರೆ ಮಾಡಿಕೊಂಡಿದ್ದಾರೆ. ಈ ಕುರಿತು ತಮ್ಮ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಜಮೀನು ಹಿಂತಿರುಗಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರೂ ಕ್ರಮವಿಲ್ಲ” ಎಂದು ವಿಜಯರಾಘವ ಮರಾಠೆ ಖಾಸಗಿ ದೂರು ನೀಡಿದ್ದಾರೆ.
ದೂರುದಾರ ವಿಜಯರಾಘವ ಮರಾಠೆ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆಗಸ್ಟ್ 12ಕ್ಕೆ ಆದೇಶ ಕಾಯ್ದಿರಿಸಿದೆ.
ರಾಜ್ಯಪಾಲರ ಅಂಗಳ ತಲುಪಿದ್ದ ಪ್ರಕರಣ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಮಿ ಹಂಚಿಕೆ ಪ್ರಕರಣ ರಾಜ್ಯಪಾಲರ ಅಂಗಳ ತಲುಪಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದರು.
ತಜ್ಞರ ಅಭಿಪ್ರಾಯವೇನು?
ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಅಭಿಪ್ರಾಯದಲ್ಲಿ ತಜ್ಞರು, ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅರ್ಜಿ ಸಲ್ಲಿಕೆಯಾದ ಎರಡೇ ದಿನಗಳಲ್ಲಿ ಭೂ ಹಂಚಿಕೆ ಪ್ರಕ್ರಿಯೆ ಮಾಡಿರುವುದರಿಂದ ಪ್ರಶ್ನೆ ಮೂಡಿದೆ ಎಂದಿದ್ದರು.
ಇದನ್ನೂ ಓದಿ: ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ
ನಿವೇಶನ ವಾಪಸ್ ನೀಡಿದ್ದ ಟ್ರಸ್ಟ್
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ ಕೆಐಎಡಿಬಿಯಿಂದ ಅಕ್ರಮವಾಗಿ ನಿವೇಶನ ಪಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು. ಈ ಬೆನ್ನಲ್ಲೇ ರಾಹುಲ್ ಖರ್ಗೆ ಅವರು ಕೆಐಎಡಿಬಿಗೆ ಪತ್ರ ಬರೆದು ಕೌಶಲ ಅಭಿವೃದ್ಧಿ ತರಬೇತಿಗಾಗಿ ನಿವೇಶನ ಪಡೆಯಲಾಗಿತ್ತು. ಆದರೆ, ಅನಗತ್ಯ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ನಿವೇಶನವನ್ನು ವಾಪಸ್ ನೀಡಲಾಗುತ್ತಿದೆ ಎಂದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Tue, 5 August 25



