ಪಂಚಪೀಠಗಳ ಸಭೆಗೆ ಟಾಂಗ್: ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ
ಲಿಂಗಾಯತ ವೀರಶೈವರಲ್ಲಿ ಮತ್ತೆ ಸಂಘರ್ಷ ಶುರುವಾಗಿದೆ. ಇತ್ತೀಚಿಗೆ ಪಂಚಪೀಠದ ಸ್ವಾಮೀಜಿಗಳು ವೀರಶೈವ ಶೃಂಗ ಸಮ್ಮೇಳನ ನಡೆಸಿ ರಾಜ್ಯದ ಗಮನ ಸೆಳೆದಿದ್ದರು. ಇದಾದ ಮೇಲೆ ಹೇಳಿಕೆ ಕಾರಣಕ್ಕೆ ವಿವಿಧ ಜಾತಿಗಳ ಸ್ವಾಮೀಜಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ, ಇನ್ನೊಂದು ಸಂಘರ್ಷ ಶುರುವಾಗಿದೆ. ಅದು ಬಸವ ಭಕ್ತರದ್ದು, ಬಸವ ಸಂಸ್ಕೃತಿ ಅಭಿಯಾನ ಹೆಸರಿನಲ್ಲಿ ಪಂಚಪೀಠಗಳಿಗೆ ತಿರುಗೇಟು ಕೊಡಲು ವಿರಕ್ತರು ಸಂಕಲ್ಪ ಮಾಡಿದ್ದಾರೆ.

ದಾವಣಗೆರೆ, ಆಗಸ್ಟ್ 05: ವೀರಶೈವರಲ್ಲಿನ ಪಂಚಪೀಠಗಳಾದದ ಕಾಶಿ, ಕೇದಾರ, ರಂಭಾಪುರಿ, ಶ್ರೀಶೈಲ ಹಾಗೂ ಉಜ್ಜಯಿನಿ ಪೀಠಗಳ ಜಗದ್ಗುರುಗಳು ಇತ್ತೀಚಿಗೆ ದಾವಣಗೆರೆಯಲ್ಲಿ (Davangere) ಶೃಂಗ ಸಮ್ಮೇಳನ ನಡೆಸಿದ್ದರು. ಈ ಶೃಂಗಸಭೆಯಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು (Swamiji) ಭಾಗಿಯಾಗಿದ್ದರು. ಈ ಸಮ್ಮೇಳನದ ಉದ್ದೇಶವೇ ವೀರಶೈವ ಲಿಂಗಾಯತ ಎರಡು ಒಂದೇ ಎಂದು ಸಾರುವುದು. ಬರುವ ಜಾತಿ ಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತ ಬರೆಸಿ. ಈ ಮೂಲಕ ಒಂದುವರೆ ಕೋಟಿ ಲಿಂಗಾಯತರು ಒಂದೇ ವೇದಿಕೆ ಮೇಲೆ ಬಂದಂತಾಗುತ್ತದೆ ಎಂದು ಶೃಂಗ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ವೀರಶೈವ ಲಿಂಗಾಯತರಿಗೆ ಗುರಿವಿನ ಸ್ಥಾನದಲ್ಲಿರುವ ಪಂಚಪೀಠಗಳು ಒಂದಾಗಿ ಸಮಾಜದ ನೇತೃತ್ವ ವಹಿಸುವ ಸಂಕಲ್ಪ ಮಾಡಿದ್ದವು. ಇದಾದ ಕೆಲ ದಿನಗಳಲ್ಲಿಯೇ ಇದಕ್ಕೆ ಕೌಂಟರ್ ಕೊಡಲು ವಿರಕ್ತರು ಅಂದ್ರೆ ವಿಶ್ವಗುರು ಬಸವಣ್ಣನ ಅನುಯಾಯಿಗಳು ಬಸವ ಸಂಸ್ಕೃತಿ ಅಭಿಯಾನ ಆರಂಭಿಸಲಿದ್ದಾರೆ. ಸೆಪ್ಟಂಬರ್ 1ರಿಂದ ಅಕ್ಟೋಬರ್ 1 ವರೆಗೆ ಇಡೀ ರಾಜ್ಯದಲ್ಲಿ ಈ ಅಭಿಯಾನ ನಡೆಯಲಿದೆ.
ದಾವಣಗೆರೆಯ ವಿರಕ್ತಮಠದ ಶಿವಯೋಗಿ ಮಂದಿರಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವ ಸಿದ್ಥತಾ ಸಭೆ ನಡೆಯಿತು. ಸಭೆಯಲ್ಲಿ, ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಯವರು ಬಸವ ಸಂಸ್ಕೃತಿಯಲ್ಲಿ ಗುರು ವಿರಕ್ತ ಎಂದು ಬರುವುದಿಲ್ಲ. ಅರಿವು ಯಾರಿಗೆ ಇದೆಯೋ ಅವರೆಲ್ಲ ಬಸವ ಸಂಸ್ಕೃತಿಗೆ ಬರಬೇಕು. ಅರಿವು ಇಲ್ಲ ಎಂದರೆ ಬರುವುದಿಲ್ಲ. ಬಸವಣ್ಣ ಯಾರಿಗೆ ಬೇಡ ಹೇಳಿ. ಬಸವಣ್ಣ ಸಕಲ ಜೀವಗಳ ಲೇಸನ್ನು ಬಯಸಿದವರು. ಜೀವಗಳ ಲೇಸನ್ನು ಬಯಸುವ ಗುಣ ಕಾವಿ ತೊಟ್ಟವರಿಗೆ, ನಿಮ್ಮಂತಹ ಗೃಹಸ್ಥರಿಗೆ ಇದೆ. ಆದ್ದರಿಂದ ಇಲ್ಲಿ ಗುರು ವಿರಕ್ತ ಅನ್ನೋದೇ ಬರುವುದಿಲ್ಲ ಎಂದು ರಂಭಾಪುರಿ ಶ್ರೀಗಳಿಗೆ ಟಾಂಗ್ ನೀಡಿದರು.
ಜಾತಿಗಣತಿಯಲ್ಲಿ ಲಿಂಗಾಯತ, ವೀರಶೈವ ಲಿಂಗಾಯತ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಮಠಾಧೀಪತಿಗಳ ಒಕ್ಕೂಟ ಈಗಾಗಲೇ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು ಎಂದು ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಓದಿ: 3 ದಶಕಗಳ ನಂತರ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ
ರಂಭಾಪುರಿ ಸ್ವಾಮೀಜಿಗಳು ವೀರಶೈವ ಎಂದು ಬರೆಸಬೇಕು ಅಂದ್ರೆ, ಲಿಂಗಾಯತ ಅಂತ ಬರೆಸಿ ಎಂದು ಸಾಣೇಹಳ್ಳಿ ಸ್ವಾಮೀಜಿ ಹೇಳುತ್ತಿದ್ದಾರೆ. ಆದರೆ, ಈಗ ಜಾತಿ ಗಣತಿ ವೇಳೆ ಆನ್ಲೈನ್ನಲ್ಲಿ ಧರ್ಮ ಎಂದು ಆಯ್ಕೆ ಮಾಡಿದರೆ, ಅಲ್ಲಿ ಹಿಂದೂ, ಜೈನ್, ಕ್ರೈಸ್ತ, ಇಸ್ಲಾಂ ಎಂದು ಬರುತ್ತದೆ. ಇದರಲ್ಲಿ ವೀರಶೈವ ಆಗಲಿ ಲಿಂಗಾಯತ ಆಗಲಿ ಇಲ್ಲ. ಅನಿವಾರ್ಯವಾಗಿ ಹಿಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಶತಶತಮಾನಗಳಿಂದ ನಡೆಯುತ್ತ ಬಂದ ಗುರು ವಿರಕ್ತ ಸಂಘರ್ಷ ಇನ್ನೂ ಜೀವಂತ ಇರುವುದು ಮಾತ್ರ ವಿಚಿತ್ರವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Tue, 5 August 25



