
ಬೆಂಗಳೂರು, ಜನವರಿ 29: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ ಕೆಜೆ ಜಾರ್ಜ್ (KJ George) ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ನಡೆದ ಕೆಲ ಅಧಿಕಾರಿಗಳ ವರ್ಗಾವಣೆ ಹಾಗೂ ಅಮಾನತು ವಿಚಾರ ಸರ್ಕಾರದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯಿಂದ ಇಂಧನ ಸಚಿವ ಜಾರ್ಜ್ ಬೇಸತ್ತಿದ್ದರು ಎಂಬುದು ತಿಳಿದುಬಂದಿದೆ. ಇಂಧನ ಇಲಾಖೆಯ ಕಾರ್ಯವೈಖರಿಯಲ್ಲಿ ಯತೀಂದ್ರ ಹಸ್ತಕ್ಷೇಪವಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ.
ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕಚೇರಿಯಿಂದ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ, ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸುವ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್, ‘ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲದಿದ್ದರೆ ನಾನು ಏಕೆ ಈ ಸರ್ಕಾರದಲ್ಲಿ ಇರಬೇಕು’ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದರು ಎನ್ನಲಾಗಿದೆ.
ಜಾರ್ಜ ಅವರು ‘ನಾನು ನಿಮ್ಮ ಜತೆಗೆ ಇರುತ್ತೇನೆ, ಆದರೆ ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ, ಘಟನೆಯಿಂದ ಮನನೊಂದು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ. ಈ ಬೆಳವಣಿಗೆಗಳು ಸರ್ಕಾರದೊಳಗಿನ ಅಸಮಾಧಾನ ಬಹಿರಂಗವಾಗುವಂತೆ ಮಾಡಿದ್ದವು.
ಘಟನೆಯ ಗಂಭೀರತೆ ಅರಿತ ಸಿಎಂ ಸಿದ್ದರಾಮಯ್ಯ ಆಪ್ತರು ತಕ್ಷಣ ಮಧ್ಯಪ್ರವೇಶಿಸಿದ್ದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮೂಲಕ ಕೆಜೆ ಜಾರ್ಜ್ ಅವರೊಂದಿಗೆ ಸಂಧಾನ ನಡೆಸಲಾಗಿತ್ತು. ಜಾರ್ಜ್ ಅವರ ಅಸಮಾಧಾನವನ್ನು ಆಲಿಸಿದ ಪೊನ್ನಣ್ಣ ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.
ಜಾರ್ಜ್ ಜತೆ ಪೊನ್ನಣ್ಣ ಸಂಧಾನದ ಬಳಿಕ, ಇಂಧನ ಇಲಾಖೆಯ ಕೆಲ ಅಧಿಕಾರಿಗಳ ಅಮಾನತು ಆದೇಶವನ್ನು ಮುಖ್ಯಮಂತ್ರಿ ಹಿಂಪಡೆದಿದ್ದರು. ಇದರಿಂದಾಗಿ ಸರ್ಕಾರದೊಳಗಿನ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು ನೋಡಿ
ಆದರೆ, ಇಂಧನ ಇಲಾಖೆಯಲ್ಲಿ ನಡೆದ ಈ ಘಟನೆ ಸರ್ಕಾರದ ಒಳಜಗಳ ಮತ್ತು ಅಧಿಕಾರ ಹಂಚಿಕೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವಂತೆ ಮಾಡಿವೆ. ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 11:34 am, Thu, 29 January 26