ಕೊಡಗು: ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢ ನಾಪತ್ತೆ: ತಾಯಿ ಮೇಲೆ ಶಂಕೆ
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢ ನಾಪತ್ತೆ ಆಗಿರುವಂತಹ ಘಟನೆ ನಡೆದಿದೆ. ಅ.17ರಂದು ಅಪ್ರಾಪ್ತೆ ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೊಡಗು, ಅಕ್ಟೋಬರ್ 20: ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢ ನಾಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ನಾಪೋಕ್ಲು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅ.17ರಂದು ಅಪ್ರಾಪ್ತೆ ಬಾಲಕಿ ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯಾಗಿ 4 ದಿನ ಕಳೆದರೂ ನವಜಾತ ಶಿಶು ಪತ್ತೆಯಾಗಿಲ್ಲ. ತಾಯಿಯೇ ಮಗುವನ್ನು ನಾಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೆರಿಗೆ ನಂತರ ಚಿಕಿತ್ಸೆ ಇಲ್ಲದೆ ಬಾಲಕಿ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಹದಗೆಟ್ಟ ನಂತರ ಅಧಿಕಾರಿಗಳು ಬಾಲಕಿಯನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ನವಜಾತ ಶಿಶು ಹುಡುಕದೆ ಅಧಿಕಾರಿಗಳು ಮತ್ತು ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು ಮಾರಾಟ; ತಾಯಿ ಸೇರಿ ಐವರ ಬಂಧನ
ಇನ್ನು ಗರ್ಭಿಣಿಯಾಗಲು 13 ವರ್ಷದ ಬಾಲಕ ಕಾರಣ ಎಂದು ಬಾಲಕಿ ಹೇಳಿದ್ದು, ಸದ್ಯ ಬಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಶಿಶುವಿನ ಡಿಎಸ್ಎ ಪರೀಕ್ಷೆಗೆ ಬಾಲಕನ ಪೋಷಕರು ಆಗ್ರಹಿಸಿದ್ದಾರೆ.
ಮಣ್ಣಿನಲ್ಲಿ ಜೀವಂತ ಹೂತಿದ್ದ ಗಂಡು ಮಗು ಪತ್ತೆ
ಬೆಂಗಳೂರು: ನಗರದ ಹೊರವಲಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿನ್ನೆ ಗ್ರಾಮದ ನೀಲಗಿರಿಯ ತೋಪಿನ ನಿರ್ಜನ ಪ್ರದೇಶದಲ್ಲಿ ಮಗುವೊಂದನ್ನು ಜೀವಂತವಾಗಿ ಹೂತು ಹಾಕಿದ್ದ ಘಟನೆ ನಡೆದಿತ್ತು. ಮಗು ಬೇಕು ಎಂದುಕೊಂಡ ಅದೇಷ್ಟೋ ದಂಪತಿಗಳಿಗೆ ಮಕ್ಕಳಿಲ್ಲದ ಕೊರಗಿನಲ್ಲಿ ಜೀವನ ಕಳೆಯುತ್ತಾರೆ. ಆದರೆ ಜೀವಂತವಾಗಿ ಮಣ್ಣಲ್ಲಿ ಮಗು ಹೂತ ಇಂಥ ಹೇಯ ಕೃತ್ಯ ಮಾಡಿದ್ದರು.
ಆಟೋ ಚಾಲಕರು ಬಹಿರ್ದೆಸೆಗೆ ತೆರಳಿದ್ದ ವೇಳೆ ಮಗು ಅಳುವ ಶಬ್ದ ಕೇಳಿ ವಿಷಯ ಗೊತ್ತಾಗಿತ್ತು. ಕೂಡಲೇ ಮಗುವನ್ನು ರಕ್ಷಿಸಿದ ಸ್ಥಳೀಯರು ಮಕ್ಕಳ ರಕ್ಷಣಾ ವೇದಿಕೆಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ: ಆರೋಗ್ಯ ಇಲಾಖೆ ಕೊಟ್ಟ ಸಿಹಿ ಸುದ್ದಿ ಇದೇ ನೋಡಿ
ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಗು ಜೀವಂತವಾಗಿ ಸಿಕ್ಕಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದವು. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಮಗುವನ್ನ ಸಂರಕ್ಷಣೆ ಮಾಡಿ ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆ ಕರೆತಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.