ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ: ಆರೋಗ್ಯ ಇಲಾಖೆ ಕೊಟ್ಟ ಸಿಹಿ ಸುದ್ದಿ ಇದೇ ನೋಡಿ

Infant deaths: ಕರ್ನಾಟಕ ಆರೋಗ್ಯ ಇಲಾಖೆ ಶಿಶು ಮರಣ ವಿಚಾರಕ್ಕೆ ಸಂಬಂಧಪಟ್ಟಂತೆ ಶುಭ ಸುದ್ದಿ ನೀಡಿದೆ. 2023ರ ಏಪ್ರಿಲ್ ನಿಂದ 2024ರ ಜನವರಿ ಅವಧಿಯ ದತ್ತಾಂಶವನ್ನು ಪರಿಗಣಿಸಿ ಇಲಾಖೆ ಮಾಹಿತಿ ನೀಡಿದ್ದು, ಪ್ರಮಾಣ 4 ವರ್ಷಗಳ ಕನಿಷ್ಠಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಶಿಶು ಮರಣ ಪ್ರಮಾಣ? ಇಲ್ಲಿದೆ ವಿವರ.

ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ: ಆರೋಗ್ಯ ಇಲಾಖೆ ಕೊಟ್ಟ ಸಿಹಿ ಸುದ್ದಿ ಇದೇ ನೋಡಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 27, 2024 | 9:55 AM

ಬೆಂಗಳೂರು, ಫೆಬ್ರವರಿ 27: ಕರ್ನಾಟಕದಲ್ಲಿ ಶಿಶು ಮರಣ (Infant deaths) ಪ್ರಮಾಣದಲ್ಲಿ ನಾಲ್ಕು ವರ್ಷಗಳ ಇಳಿಕೆ ಕಂಡುಬಂದಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ರಾಜ್ಯ ಆರೋಗ್ಯ ಇಲಾಖೆ (Karnataka Health department) ಕೈಗೊಂಡಿರುವ ಹಲವು ಉಪಕ್ರಮಗಳ ಹಿನ್ನೆಲೆಯಲ್ಲಿ 2023ರ ಏಪ್ರಿಲ್ 1ರಿಂದ ಈ ವರ್ಷದ ಜನವರಿ 31ರವರೆಗೆ 10 ತಿಂಗಳ ಅವಧಿಯಲ್ಲಿ 4,546 ಮಂದಿ ಶಿಶು ಮರಣ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಕನಿಷ್ಠ ಶಿಶು ಮರಣವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನ ದತ್ತಾಂಶವನ್ನು ಏಪ್ರಿಲ್ ಆರಂಭದಲ್ಲಿ ಒಟ್ಟುಗೂಡಿಸಿ ಪಟ್ಟಿ ಮಾಡಲಾಗುವುದು. ಆಗ ಸಂಪೂರ್ಣ ಚಿತ್ರಣವು ದೊರೆಯಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಈಗಿನ ಮಾಹಿತಿ ಪ್ರಕಾರ, ಶಿಶು ಮರಣ ಪ್ರಮಾಣ ಸುಮಾರು ಶೇ 40 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ ಮತ್ತು 2021-22 ಮತ್ತು 2022-23 ಅಂಕಿಅಂಶಗಳಿಗಿಂತ ಇದು ಉತ್ತಮವಾಗಿದೆ ಎಂದು ಮೂಲಗಳು ಹೇಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಶಿಶು ಮರಣ?

2023-24ಕ್ಕೆ (ಜನವರಿ ಅಂತ್ಯದವರೆಗೆ) ಮೈಸೂರಿನಲ್ಲಿ 437, ಕೊಪ್ಪಳ (371), ರಾಯಚೂರು (365) ಮತ್ತು ಕಲಬುರಗಿಯಲ್ಲಿ (363) ಹೆಚ್ಚಿನ ಶಿಶು ಮರಣ ಪ್ರಕರಣ ದಾಖಲಾಗಿವೆ. ಮತ್ತೊಂದೆಡೆ, ಬೆಂಗಳೂರು ಗ್ರಾಮಾಂತರದಲ್ಲಿ ಎಂಟು, ರಾಮನಗರದಲ್ಲಿ 13 ಮತ್ತು ಹಾವೇರಿಯಲ್ಲಿ 18 ಕನಿಷ್ಠ ಶಿಶು ಮರಣ ಸಂಭವಿಸಿವೆ. ಮೈಸೂರು ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಅಂಕಿಅಂಶಗಳು ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಂತಹ ನೆರೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿದ ಶಿಶುಗಳ ಮರಣವನ್ನೂ ಒಳಗೊಂಡಿವೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಪ್ರಸ್ತುತ 1,000 ಜನನಗಳಿಗೆ 14 ಆಗಿದೆ. 2020-21ರಲ್ಲಿ ಮೈಸೂರಿನಲ್ಲಿ 598 ಶಿಶು ಮರಣಗಳು ದಾಖಲಾಗಿದ್ದವು. 2021-22ರಲ್ಲಿ 695 ಇದ್ದು, 2022-23ರಲ್ಲಿ 578ಕ್ಕೆ ಇಳಿದಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಫಿಟ್ ಆಗಿದ್ದರೂ ಪಾರ್ಶ್ವವಾಯುಗೊಳಗಾದ ಝೆರೋಧಾ ಸಿಇಓ ನಿತಿನ್ ಕಾಮತ್​​; ಇಲ್ಲಿದೆ ಕಾರಣ

ಮೈಸೂರು ಜಿಲ್ಲೆಯ ಶಿಶು ಮರಣ ಪ್ರಮಾಣ ಈಗ 1000 ಜನನಗಳಿಗೆ 10.5ಕ್ಕೆ ಇಳಿಕೆಯಾಗಿದೆ. ಇದು ನಮ್ಮ ಅನೇಕ ಉಪಕ್ರಮಗಳ ಉತ್ತಮ ಫಲಿತಾಂಶವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಪಿಸಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ