ಲಕ್ಷ್ಮಣ ತೀರ್ಥ ನದಿ ಬತ್ತಲು ಕಾರಣವಾಯ್ತು ಹವಾಮಾನ ವೈಪರೀತ್ಯ: ಹೇಗೆ ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Apr 15, 2024 | 10:11 PM

ಲಕ್ಷ್ಮಣ ತೀರ್ಥ ನದಿ ಬತ್ತಲು ಹವಾಮಾನ ವೈಪರೀತ್ಯವೇ ಕಾರಣವಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇಕಡಾ 60ರಷ್ಟು ಮಳೆ ಕೊರತೆಯಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಎಲ್ಲೂ ಅಂತರರ್ಜಲ ಹುಟ್ಟಲೇ ಇಲ್ಲ. ಇದರಿಂದಾಗಿ ದಕ್ಷಿಣ ಕೊಡಗಿನಲ್ಲಿ ಇದೇ ನದಿಯನ್ನ ಅವಲಂಬಿಸಿರುವ ಕಾಫಿ ತೋಟದ ಕೃಷಿಕರು ಇದೀಗ ನೀರಿಲ್ಲದೆ ಪರದಾಡುವಂತಾಗಿದೆ.

ಲಕ್ಷ್ಮಣ ತೀರ್ಥ ನದಿ ಬತ್ತಲು ಕಾರಣವಾಯ್ತು ಹವಾಮಾನ ವೈಪರೀತ್ಯ: ಹೇಗೆ ಗೊತ್ತಾ?
ಲಕ್ಷ್ಮಣ ತೀರ್ಥ ನದಿ
Follow us on

ಕೊಡಗು, ಏಪ್ರಿಲ್​ 15: ಕೊಡಗು ಜಿಲ್ಲೆ ಅಂದರೆ ಬೆಟ್ಟ, ಗುಡ್ಡ, ಕಾಡು, ಮೇಡು, ನದಿ ಜಲ ತೊರೆಗಳಿಗೆ ಪ್ರಸಿದ್ಧಿ. ಆದರೆ ಈ ಬಾರಿಯ ಭೀಕರ ಬರ ಮತ್ತು ಬಿಸಿಲತಾಪಕ್ಕೆ ಈ ಪ್ರಕೃತಿಯ ಖನಿಜ ತತ್ತರಿಸಿ ಹೋಗಿದೆ. ಕಾವೇರಿ ನದಿ ಹರಿಯುವಿಕೆ ನಿಲ್ಲಿಸಿದ ಬೆನ್ನಲ್ಲೇ ಇದೀಗ ಜಿಲ್ಲೆಯ ಮತ್ತೊಂದು ಪ್ರಮುಖ ನದಿ ಲಕ್ಷ್ಮಣ ತೀರ್ಥ (Lakshmana Tirtha) ನದಿ ಕೂಡ ಸಂಪೂರ್ಣ ಬತ್ತಿಹೋಗಿದೆ. ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಭಾಗದ ದಟ್ಟಾರಣ್ಯದಲ್ಲಿ ಜನ್ಮತಳೆದು ಮೈಸೂರಿನ ಪಿರಿಯಾಪಟ್ಟಣ, ಹುಣಸೂರು ಮೂಲಕ ಕಾವೇರಿ ಸೇರಿ ಅಲ್ಲಿಂದ ಕೆಆರ್ ಜಲಾಶಯದಲ್ಲಿ ಒಂದಾಗುತ್ತದೆ.

ಸುಮಾರು 180 ಕಿಮಿ ಹರಿಯುವ ಈ ನದಿ ದಕ್ಷಿಣ ಕೊಡಗು ಜನರ ಜೀವನಾಡಿ. ಬಹುತೇಕ ವರ್ಷ ಎಲ್ಲಾ ದಿನಗಳೂ ಈ ನದಿ ಹರಿಯುತ್ತದೆ. ಆದರೆ ಈ ವರ್ಷ ಮಾತ್ರ ಏಪ್ರಿಲ್ ಆರಂಭದಲ್ಲೇ ಸಂಪೂರ್ಣ ಭತ್ತಿ ಹೋಗಿದೆ. ನದಿಯಲ್ಲಿ ಎಲ್ಲೆಲ್ಲೂ ನೀರಿನ ಸುಳಿವೇ ಕಾಣಿಸುತ್ತಿಲ್ಲ.

ಇದನ್ನೂ ಓದಿ: ನಿರ್ಜೀವವಾದ ಜೀವನದಿ: ಸಂಪೂರ್ಣ ಬತ್ತಿ ಬರಡಾಗುತ್ತಿರೋ ಕಾವೇರಿ ಒಡಲು, ಜನರಲ್ಲಿ ಆತಂಕ

ಲಕ್ಷ್ಮಣ ತೀರ್ಥ ನದಿ ಬತ್ತಲು ಹವಾಮಾನ ವೈಪರೀತ್ಯವೇ ಕಾರಣವಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇಕಡಾ 60ರಷ್ಟು ಮಳೆ ಕೊರತೆಯಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಎಲ್ಲೂ ಅಂತರರ್ಜಲ ಹುಟ್ಟಲೇ ಇಲ್ಲ. ಪರಿಣಾಮ ಬೆಟ್ಟಗುಡ್ಡಗಳಲ್ಲಿ ಹರಿಯುವ ಸಣ್ಣಪುಟ್ಟ ಜರಿ ತೊರೆಗಳು ನೀರಿಲ್ಲದೆ ಫೆಬ್ರವರಿಯಲ್ಲೇ ಬತ್ತಿಹೋಗಿವೆ. ಪರಿಣಾಮ ನದಿಗಳಿಗೆ ಎಲ್ಲಿಂದಲೂ ನೀರು ಹರಿದು ಬರುತ್ತಿಲ್ಲ ಜೊತೆಗೆ ಅಂತರ್ಜದಿಂದಲೂ ನೀರು ಉಕ್ಕುತ್ತಿಲ್ಲ. ಹಾಗಾಗಿ ಕಾವೇರಿ ಜೊತೆ ಲಕ್ಷ್ಮಣ ತೀರ್ಥ ನದಿಗಳು ಬತ್ತಿಹೋಗಿದೆ.

ಇದರಿಂದಾಗಿ ದಕ್ಷಿಣ ಕೊಡಗಿನಲ್ಲಿ ಇದೇ ನದಿಯನ್ನ ಅವಲಂಬಿಸಿರುವ ಕಾಫಿ ತೋಟದ ಕೃಷಿಕರು ಇದೀಗ ನೀರಿಲ್ಲದೆ ಪರದಾಡುವಂತಾಗಿದೆ. ಜೊತೆಗೆ ಕುಡಿಯಲು, ಜನ ಜಾನುವಾರುಗಳಿಗೂ ನೀರಿಲ್ಲದೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಕೊಡಗು: ಹರಿಹರ ಗ್ರಾಮದ ಕೆರೆಯ ಬಳಿಯೇ ವಾಸ್ತವ್ಯ ಹೂಡಿದ ಹುಲಿ; ಆತಂಕದಲ್ಲಿ ಜನ

ಏಪ್ರಿಲ್ ಎರಡನೇ ವಾರದಲ್ಲೇ ಜಿಲ್ಲೆಯಲ್ಲಿ ನದಿಗಳು ಒಂದೊಂದಾಗಿ ಬತ್ತಲಾರಂಭಿಸಿವೆ. ಜನವರಿಯಿಂದ ಇಲ್ಲಿಯವರೆಗೆ ಬರಬೇಕಾಗಿದ್ದ ವಾಡಿಕೆ ಮಳೆಯೂ ಬಾರದೇ ಇರುವುದು ನದಿ ಬತ್ತಲು ಮತ್ತೊಂದು ಕಾರಣವಾಗಿದೆ. ಈ ನದಿಗಳು ಮತ್ತೆ ಪುನಶ್ಚೇತನಗೊಳ್ಳಲು ಮಳೆಯೇ ಬರಬೇಕಾಗಿದೆ. ಆದರೆ ಸದ್ಯಕ್ಕಂತೂ ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಕೊಡಗು-ಮೈಸೂರು ಭಾಗದ ಜನರು ತೀವ್ರ ಬವಣೆಪಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.