ತಲಕಾವೇರಿಯಲ್ಲಿ ಗುರುವಾರ ಕಾವೇರಿ ಜಾತ್ರೆ, ತೀರ್ಥೋದ್ಭವಕ್ಕೆ ಕ್ಷಣಗಣನೆ

| Updated By: Ganapathi Sharma

Updated on: Oct 16, 2024 | 2:36 PM

ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ತಲಕಾವೇರಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜತೆಗೆ, ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುವ ಕಾವೇರಿ ತೀರ್ಥೋದ್ಭವಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಎಷ್ಟು ಗಂಟೆಗೆ ತೀರ್ಥೋದ್ಭವವಾಗಲಿದೆ? ಎಷ್ಟು ಭಕ್ತರು ಈ ಬಾರಿ ಆಗಮಿಸುವ ನಿರೀಕ್ಷೆ ಇದೆ? ಏನೆಲ್ಲ ಸಿದ್ಧತೆ ಮಾಡಲಾಗಿದೆ ಎಂಬ ವಿವರ ಇಲ್ಲಿದೆ.

ತಲಕಾವೇರಿಯಲ್ಲಿ ಗುರುವಾರ ಕಾವೇರಿ ಜಾತ್ರೆ, ತೀರ್ಥೋದ್ಭವಕ್ಕೆ ಕ್ಷಣಗಣನೆ
ತಲಕಾವೇರಿ
Follow us on

ಮಡಿಕೇರಿ, ಅಕ್ಟೋಬರ್ 16: ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ತಲಕಾವೇರಿ ಕಾವೇರಿ ಜಾತ್ರೆ ಗುರುವಾರ ನಡೆಯಲಿದೆ. ಗುರುವಾರ ಬೆಳಗ್ಗೆ 7.40ಕ್ಕೆ ತೀರ್ಥೋದ್ಭವ ಪವಿತ್ರ ಕಾವೇರಿ ತೀರ್ಥೋದ್ಭವ ಆಗಲಿದೆ. ಆ ಸಂದರ್ಭದಲ್ಲಿ ಜೀವನದಿ ಕಾವೇರಿ ಜಲ ರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ ಎಂಬುದು ಭಕ್ತರ ನಂಬಿಕೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕ ವೃಂದ ಮತ್ತು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದೆ.

50 ಸಾವಿರ ಜನ ಆಗಮಿಸುವ ನಿರೀಕ್ಷೆ

ತೀರ್ಥೋದ್ಭವಕ್ಕೆ 50 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ದೇವಸ್ಥಾನ ಆವರಣದಲ್ಲಿ ಜನರ ನಿಯಂತ್ರಣಕ್ಕೆ ಹೆಚ್ಚುವರಿ ಬ್ಯಾರಿಕೇಡ್​​ಗಳನ್ನು ಅಳವಡಿಸಲಾಗಿದೆ. ಹಾಸನ ಹಾಗೂ ಮೈಸೂರಿನಿಂದ ಹೆಚ್ಚುವರಿ ಪೊಲೀಸ್ ತುಕಡಿ ಕರೆಸಲಾಗಿದ್ದು ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿಯೋಜಿಸಲಾಗುತ್ತದೆ.

ಆಯಾಕಟ್ಟಿನ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಸಿಸಿಟವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತಲಕಾವೇರಿಯ ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ವರುಣಾರ್ಭಟ; ಅಥಣಿಯಲ್ಲಿ ಯಲ್ಲಮ್ಮ ದೇವಿಗೆ ಜಲದಿಗ್ಬಂಧನ, ಚಿಕ್ಕಮಗಳೂರಲ್ಲಿ ಭೂ ಕುಸಿತ

ಕೊಡವ ಜನಾಂಗದವರ ಕುಲದೇವತೆಯಾದ ಕಾವೇರಿ ಪ್ರತಿವರ್ಷ ತುಲಾ ಸಂಕ್ರಮಣದಂದು ಭಾಗಮಂಡಲ ಸಮೀಪದ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ. ಕಾವೇರಿ ತೀರ್ಥೋದ್ಭವಕ್ಕೆ ಸಾಕಷ್ಟು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಗಳೂ ಇವೆ.

ಕಾವೇರಿ ತೀರ್ಥೋದ್ಭವದ ಸಂಭ್ರಮದ ಕ್ಷಣ ಕಣ್ತುಂಬಿಕೊಳ್ಳಲು ಪ್ರತಿ ವರ್ಷ ರಾಜ್ಯ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ