ಕಾವೇರಿ ತೀರ್ಥೊದ್ಭವ: ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ, ಕಥಾಸಾರ ಇಲ್ಲಿದೆ
ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ನಡೆಯುವ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ಕಾವೇರಿ ತೀರ್ಥೋದ್ಭವ ಇಂದು ರಾತ್ರಿ ನಡೆಯಲಿದೆ. ರಾತ್ರಿ 1.27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಶುಭ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ. ಆದರೆ, ನಿಮಗೆ ತಿಳಿದಿರದ ಈ ಕಾವೇರಿ ತೀರ್ಥೋದ್ಭವದ ಕಥಾಸಾರ ಇಲ್ಲಿದೆ.
ಕೊಡಗಿನ ಬ್ರಹ್ಮಗಿರಿ ಎಂಬ ತಪೋ ಭೂಮಿಯಲ್ಲಿ ನೆಲೆಸಿದ್ದ ಕವೇರ ಮುನಿಗೆ ಮಕ್ಕಳಿರಲಿಲ್ಲ. ಮಕ್ಕಳಿಗಾಗಿ ಬ್ರಹ್ಮದೇವನನ್ನು ತಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿದ ಬ್ರಹ್ಮ, ಪ್ರತ್ಯಕ್ಷನಾಗಿ ಏನು ವರ ಬೇಕು ಎಂದು ಕೇಳಿದಾಗ ಸಂತಾನ ಪ್ರಾಪ್ತಿಯನ್ನು ಕೇಳುತ್ತಾನೆ. ಇದಕ್ಕೆ ತಥಾಸ್ತು ಎಂದ ಬ್ರಹ್ಮ, ತನ್ನ ಮಗಳಾದ ಲೋಪಮುದ್ರೆಯನ್ನು ಕವೇರನಿಗೆ ದತ್ತು ನೀಡುತ್ತಾನೆ. ಈಕಯೇ ಮುಂದಿನ ದಿನಗಳಲ್ಲಿ ಕಾವೇರಿಯಾಗುತ್ತಾಳೆ (Cauvery).
ಒಮ್ಮೆ ಅಗಸ್ತ್ಯ ಮುನಿ ಬ್ರಹ್ಮಗಿರಿಗೆ ಬಂದಾಗ ಬಹಳ ರೂಪವತಿಯಾಗಿದ್ದ ಕಾವೇರಿಗೆ ಮನಸೋಲುತ್ತಾನೆ. ವಿವಾಹ ಮಾಡಿಕೊಡುವಂತೆ ಕವೇರ ಮುನಿ ಬಳಿ ಮನವಿ ಮಾಡುತ್ತಾನೆ. ಆದರೆ ಕಾವೇರಿಗೆ ಲೋಕ ಕಲ್ಯಾಣ ಮಾಡುವಾಸೆ. ವಿವಾಹಕ್ಕೆ ಒಪ್ಪುವುದಿಲ್ಲ. ಕೊನೆಗೆ ಒಂದು ಷರತ್ತಿನೊಂದಿಗೆ ಅಗಸ್ತ್ಯ ಮುನಿಯ ಪತ್ನಿಯಾಗಲು ಒಪ್ಪುತ್ತಾಳೆ.
ಅಗಸ್ತ್ಯ ಮುನಿ ಯಾವುದೇ ಕಾರಣಕ್ಕೂ ನನ್ನನ್ನು ಒಂದು ಕ್ಷಣವೂ ಬಿಟ್ಟಿರಕೂಡದು ಎಂಬ ಷರತ್ತು ಹಾಕುತ್ತಾಳೆ. ಷರತತಿಗೆ ಒಪ್ಪಿದ ಅಗಸ್ತ್ಯ ಬಳಿಕ ಕಾವೇರಿಯನ್ನ ವಿವಾಹವಾಗುತ್ತಾನೆ. ಆದರೆ ಒಂದು ದಿನ ಸಂಧ್ಯಾವಂದನೆ ಮಾಡಲು ತೆರಳುವಾಗ ಕಾವೇರಿಯನ್ನ ಮಂತ್ರಿಸಿ ನೀರಿನ ರೂಪ ಮಾಡಿ ತನ್ನ ಕಮಂಡಲಿನಲ್ಲಿ ಮುಚ್ಚಿಟ್ಟು ಹೊಗುತ್ತಾನೆ.
ಇದನ್ನೂ ಓದಿ: ತೀರ್ಥೋದ್ಭವಕ್ಕೆ ತಲಕಾವೇರಿ ಸಕಲ ರೀತಿ ಸಜ್ಜು, ವಿಸ್ಮಯ ಕಣ್ತುಂಬಿಕೊಳ್ಳಲು ಜನ ಕಾತುರ
ಇದೇ ಸಂದರ್ಭ ಕಾಗೆ ರೂಪದಲ್ಲಿ ಬಂದ ಗಣೇಶ, ಕಮಂಡಲಿಯನ್ನು ಬೀಳಿಸುತ್ತಾನೆ. ಅಲ್ಲಿಂದ ಕಾವೇರಿ ಬ್ರಹ್ಮಗಿರಿಯಿಂದ ನೀರಿನ ರೂಪದಲ್ಲಿ ನದಿಯಾಗಿ ಹರಿಯುತ್ತಾಳೆ. ತಲಕಾವೇರಿಯಿಂದ ಭಾಗಮಂಡಲದವರೆಗೆ ಗುಪ್ತಗಾಮಿನಿಯಾಗಿ ಹರಿದು ಲೋಕ ಕಲ್ಯಾಣಕ್ಕೆ ತೆರಳುತ್ತಾಳೆ.
ಕಾವೇರಿಗೂ ಕೊಡಗಿನ ಮುಲನಿವಾಸಿಗಳ ಸೀರೆ ನೆರಿಗೆಗೂ ಇದೆ ಸಂಬಂಧ
ಕೊಡಗಿನ ಮೂಲ ನಿವಾಸಿಗಳ ಸೀರೆ ನೆರಿಗೆ ಹಿಂದಕ್ಕೆ ಇದೆ. ಇದಕ್ಕೂ ಒಂದು ಪೌರಾಣಿಕ ಕಥೆ ಇದೆ. ಕಾವೇರಿ ಲೋಕಪಾವನಿಯಾಗಲು ನದಿಯಾಗಿ ಹರಿಯುವ ಸಂದರ್ಭ ಬಲಮುರಿ ಎಂಬಲ್ಲಿ ಕೊಡಗಿನ ಮಹಿಳೆಯರು ಕಾವೇರಿಯನ್ನು ತಡೆಯುತ್ತಾರೆ. ಕಾವೇರಿ ರಭಸವಾಗಿ ಹರಿಯುವ ಸಂದರ್ಭದಲ್ಲಿ ಸೀರೆಯ ನೆರಿಗೆ ಮುಂದೆ ಇದ್ದಿದ್ದು ಹಿಂದಕ್ಕೆ ಸರಿಯುತ್ತದೆ. ಅಂದಿನಿಂದ ಇಂದಿನವರೆಗೂ ಕೊಡಗಿನ ಮಹಿಳೆಯರ ಸೀರೆ ನೆರಿಗೆ ಹಿಂದಕ್ಕೆ ಇದೆ.
ಅಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ಕಾವೇರಿ ಅಭಯ ನಿಡುತ್ತಾಳೆ. ಪ್ರತಿ ವರ್ಷ ತುಲಾ ಸಂಕ್ರಮಣದ ಮೊದಲ ದಿನ ತಾನು ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡುವುದಾಗಿ ಅಭಯ ನೀಡುತ್ತಾಳೆ. ಅದೇ ರೀತಿ ಪ್ರತಿ ವರ್ಷ ತುಲಾ ಮಾಸದ ಮೊದಲದಿನ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ ಎಂಬ ನಂಬಿಕೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ