Siddaramaiah: ಕೊಡಗು ಪ್ರತಿಭಟನೆ ಮುಂದೂಡಲು ಕಾಂಗ್ರೆಸ್ ನಿರ್ಧಾರ; ಸಿದ್ದರಾಮಯ್ಯ
ಕೊಡಗು ಜಿಲ್ಲೆಯಲ್ಲಿ ನಾನು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಜಿಲ್ಲಾಧಿಕಾರಿ ಆದೇಶ (DC Order) ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶವನ್ನು ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಾನು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiha) ಹೇಳಿದರು.
ಆಡಳಿತ ಪಕ್ಷದ ಷಡ್ಯಂತ್ರದೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಶ ಪಕ್ಷದ ನಾಯಕ ಸಿದ್ದರಾಮಯ್ಯ ನೇರ ಆರೋಪ ಮಾಡಿದರು. ನಗರದಲ್ಲಿ ಮಂಗಳವಾರ (ಆಗಸ್ಟ್ 23) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಹಂತದಲ್ಲಿಯೂ ಪೊಲೀಸರ ನಿಷ್ಕ್ರಿಯತೆ ಎದ್ದು ಕಾಣುವಂತಿತ್ತು ಎಂದು ಹೇಳಿದರು.
ಆಗಸ್ಟ್ 18ರಂದು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಯನ್ನು ಪರಿಶೀಲಿಸಲು ತೆರಳಿದ್ದೆ. ಹಲವೆಡೆ ಮಳೆ ಹೆಚ್ಚಾಗಿ ಬಿದ್ದು ಹಾನಿಯಾಗಿದೆ. ವಾಡಿಕೆಗಿತಂಲೂ ಎರಡು-ಮೂರು ಪಟ್ಟು ಹೆಚ್ಚು ಮಳೆ ಬಿದ್ದಿದೆ. ಇಡೀ ಕೊಡಗು ಜಿಲ್ಲೆಯಲ್ಲಿ ಮಣ್ಣು ಕುಸಿದಿದೆ. ಜನರು ವಾಸ ಮಾಡುತ್ತಿದ್ದ ಮನೆಗಳಿಗೆ ಹಾನಿಯಾಗಿದೆ. ಇನ್ನು ಕೆಲವು ಕಡೆ ರಸ್ತೆಯ ಮೇಲೆ ಮಣ್ಣು ಬಿದ್ದು ರಸ್ತೆಗಳು ಮುಚ್ಚಿ ಹೋಗಿ ಸಾರಿಗೆಗೆ ಬಹಳ ತೊಂದರೆ ಆಗಿದೆ ಎಂದರು.
ಕೊಡಗಿನ ತಿತಿಮತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಆಗ ಪೊಲೀಸರು ಸುಮ್ಮನಿದ್ದರು. ಯಾರೋ ಒಬ್ಬ ಬಂದು ಏನೋ ಕಾರಿನ ಒಳಗಡೆ ಬ್ಯಾನರ್ ಹಾಕಿದ. ಅವನನ್ನೂ ಪೊಲೀಸರು ಹಿಡಿಯಲಿಲ್ಲ. ಕೊನಾನು ಅಲ್ಲಿಗೆ ಭೇಟಿ ಕೊಟ್ಟಾಗ ಪ್ರತಿಭಟನೆ ಕೊಳೆ ಮೊಟ್ಟೆ ಎಸೆದರು. ಆಗಲೂ ಪೊಲೀಸರು ಏನೂ ಮಾಡಲಿಲ್ಲ. ಗಲಾಟೆ ಮಾಡಿದ ಆರ್ಎಸ್ಎಸ್ ಭಜರಂಗದದವರ ಮೇಲೆ ಏನೂ ಕ್ರಮ ಕೈಗೊಂಡಿಲ್ಲ. ನಮ್ಮ ಕಾರ್ಯಕರ್ತರು ಮೇಲೆ ಮಾತ್ರ ಲಾಠಿ ಚಾರ್ಜ್ ನಡೆಯಿತು ಎಂದರು.
ನಾನು ದೇವರನ್ನು ನಂಬ್ತೀನಿ, ದೇವಸ್ಥಾನಕ್ಕೆ ಹೋಗ್ತೀನಿ
ಮಾಂಸ ತಿನ್ನುವುದು ತಿನ್ನದಿರುವುದು ಅವರವರ ವೈಯಕ್ತಿಕ ಅಭ್ಯಾಸ. ಅದರಿಂದ ಸಮಾಜಕ್ಕೆ ಒಳ್ಳೆಯದೋ ಕೆಟ್ಟದ್ದೋ ಆಗುತ್ತಾ? ಅದು ಅಸಂಬಂಧ, ಅದೊಂದು ವಿಷಯವೇ ಇಲ್ಲ. ಅದರ ಬಗ್ಗೆ ಚರ್ಚಿಸುವುದು ಅಗತ್ಯವಿಲ್ಲ. ಬಿಜೆಪಿಗೆ ಬೇರೆ ಕೆಲಸವೇ ಇಲ್ಲ. ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಡೈವರ್ಟ್ ಮಾಡಲು ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಹೇಳಿದರು.
ನಾನು ದೇವಸ್ಥಾನಗಳಿಗೆ ಹೋಗುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ನಮ್ಮೂರಲ್ಲಿ ಇರುವ ದೇವರು ಸಿದ್ದರಾಮೇಶ್ವರ. ಅಲ್ಲಿಗೆ ನಿಯಮಿತವಾಗಿ ಹೋಗ್ತೀನಿ. ನಂಜನಗೂಡು, ತಿರುಪತಿ, ಚಾಮುಂಡೇಶ್ವರಿ ದರ್ಶನಕ್ಕೆ ಹೋಗ್ತೀನಿ. ನಾನು ದೇವಸ್ಥಾನಕ್ಕೆ ಹೋಗ್ತಾನೇ ಇರ್ತೀನಿ, ಆದರೆ ಅದೇ ಒಂದು ಕಸುಬಲ್ಲ. ನನಗೆ ದೇವರಲ್ಲಿ ನಂಬಿಕೆಯಿದೆ. ಎಲ್ಲ ದೇವರೂ ಒಂದೇ ಎಂದು ನಂಬುವವ ನಾನು ಎಂದು ವಿವರಿಸಿದರು.
ಎಷ್ಟೋ ದೇವರಿಗೆ ಮಾಂಸದ ಎಡೆ ಇಡುತ್ತಾರೆ. ನಾನು ಕೇವಲ ಕುರಿ, ಕೋಳಿ, ಮೇಕೆ ಮಾಂಸ ತಿನ್ನುತ್ತೇನೆ ಎಂದರು. ‘ಹಂದಿಮಾಂಸ ತಿಂದು ಮಸೀದಿಗೆ ಹೋಗಲಿ’ ಎಂಬ ಬಿಜೆಪಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹಂದಿಮಾಂಸ ತಿನ್ನಲ್ಲ. ಹಾಗೆಂದು ಹಂದಿಮಾಂಸ ತಿನ್ನುವವರ ವಿರುದ್ಧವೂ ಇಲ್ಲ. ನಾನು ಇನ್ನೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳುವವನಲ್ಲ ಎಂದು ತಿಳಿಸಿದರು.
ಕೊಡಗಿನಲ್ಲಿ ಅವತ್ತು ನಾನು ತಿಂದಿಲ್ಲ. ವೀಣಾ ಅಚ್ಚಯ್ಯ ಅವರು ನಾಟಿಕೋಳಿಯ ಅಡುಗೆ ಮಾಡಿಕೊಂಡು ಬಂದಿದ್ದು ನಿಜ. ಆದರೆ ನಾನು ಕೇವಲ ಅಕ್ಕಿರೊಟ್ಟಿ ತಿಂದಿದ್ದೆ ಅಷ್ಟೇ. ಅಂದು ಅಲ್ಲಿನ ಜನರೇ ನನ್ನನ್ನು ದೇವಸ್ಥಾನಕ್ಕೆ ಆಹ್ವಾನಿಸಿದ್ದರು. ಹೀಗಾಗಿ ಹೋಗಿದ್ದೆ. ಯಾರ ಭಾವನೆಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ ಎಂದರು. ಆದರೆ ನಾನು ಮಾಂಸಾಹಾರಿ. ಮಾಂಸಾಹಾರ ಸೇವಿಸಿದರೆ ತಪ್ಪೇನು ಎಂದು ವಾದಕ್ಕಾಗಿ ಪ್ರಶ್ನಿಸಿದ್ದೆ ಎಂದು ಹೇಳಿದರು.
ಹೈಕೋರ್ಟ್ ನೀಡಿದ ಎಸಿಬಿ ತೀರ್ಪು ಪ್ರಶ್ನಿಸುವುದಿಲ್ಲ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದತಿಗೆ ಸಂಬಂಧಿಸದಂತೆ ಹೈಕೋರ್ಟ್ ನೀಡಿದ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಅದನ್ನು ಪ್ರಶ್ನಿಸಿದ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕೊಡಗು ಪ್ರವಾಸ ನೆನಪಿಸಿಕೊಂಡ ಸಿದ್ದರಾಮಯ್ಯ
ಕೊಡಗಿನಲ್ಲಿ ವೆಂಟೆಡ್ ಡ್ಯಾಂನಿಂದ ಬಹಳ ತೊಂದರೆ ಆಗಿದೆ ಅಂತ ಜನ ಹೇಳುತ್ತಲೇ ಇದ್ದರು. ಮನೆ ಕಳೆದುಕೊಂಡವರಿಗೆ ಇದುವರೆಗೂ ಸರ್ಕಾರ ಮನೆ ಕೊಟ್ಟಿಲ್ಲ. ಮಡಿಕೇರಿ ಡಿಸಿ ಕಚೇರಿಯ ರಿಟೇನಿಂಗ್ ವಾಲ್ ಹಾಕಿದ್ದು ಬಿದ್ದು ಹೋಗ್ತಿದೆ. ಎಂಎಲ್ಎ ಗುತ್ತಿಗೆದಾರರು ಸಿಎಂ ಹೋದಾಗಲೂ ಅವಾಯ್ಡ್ ಮಾಡಿದ್ದಾರೆ ಎಂದು ಹೇಳಿದರು. ಕೊಡಗಿನಲ್ಲಿ ಏನು ನಡೆಯುತ್ತದೆ ಎನ್ನುವುದು ಪೊಲೀಸರಿಗೆ ಗೊತ್ತಿತ್ತು. ಅವರಿಗೆ ಗುಪ್ತಚರ ಮೂಲಗಳಿಂದ ಮಾಹಿತಿ ಬಂದಿರುತ್ತೆ. ಆದರೂ ನನ್ನ ವಿರುದ್ಧ ಪ್ರತಿಭಟನೆ ನಡೆಯುವಾಗ ಅವರು ಸುಮ್ಮನಿದ್ದರು ಎಂದು ದೂರಿದರು. ಪೊಲೀಸರು ಮನಸ್ಸು ಮಾಡಿದ್ದರೆ ಪ್ರತಿಭಟನೆ ತಡೆಯಬಹುದಾಗಿತ್ತು. ಒಂದು ಕಡೆ ಬಟ್ಟೆಗೆ ಕಲ್ಲು ಹಾಕಿಕೊಂಡು ಕಲ್ಲು ಎಸೆದಿದ್ದಾರೆ. ಎರಡು ಕಡೆ ಮೊಟ್ಟೆ ಎಸೆದಿದ್ದಾರೆ. ಎಲ್ಲ ಕಡೆಯೂ 20ರಿಂದ 25 ಜನರಿದ್ದರು ಅಷ್ಟೇ. ಅವರು ಭಜರಂಗದಳ ಆರ್ಎಸ್ಎಸ್ ಬಿಜೆಪಿ ಕಾರ್ಯಕರ್ತರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
Published On - 12:44 pm, Tue, 23 August 22