ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ: 8 ತಿಂಗಳಲ್ಲಿ ಐವರು ಸಾವು; ಮೆಗಾ ಆಪರೇಷನ್ ಶುರು

Kodagu elephant conflict: ಕಾಫಿಯ ನಾಡು ಕೊಡಗಿನಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ನಿತ್ಯವೂ ಜೀವಭಯದಲ್ಲೇ ಜೀವನ ಕಳೆಯುವ ಸ್ಥಿತಿ ಮಲೆನಾಡಿಗರದ್ದಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 3 ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷ: 8 ತಿಂಗಳಲ್ಲಿ ಐವರು ಸಾವು; ಮೆಗಾ ಆಪರೇಷನ್ ಶುರು
ಕಾಡಾನೆ
Image Credit source: Getty images
Edited By:

Updated on: Aug 19, 2026 | 10:52 PM

ಕೊಡಗು, ಆಗಸ್ಟ್​ 19: ಕೊಡಗು (kodagu) ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ (Human-Elephant Conflict) ತಾರಕ್ಕಕೇರಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಐವರು ಕಾಡಾನೆ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೊಡಗಿನಲ್ಲಿ ಆನೆ-ಮಾನವ ಸಂಘರ್ಷದಿಂದಾಗಿ ಬದುಕುವುದೇ ಸಾಧ್ಯವಿಲ್ಲ ಎಂಬಂತಾಗಿದೆ. ಹಾಗಾಗಿ ಪ್ರಾಣ ಹಾನಿ ಹಾಗೂ ಬೆಳೆ ನಾಶ ಮಾಡುತ್ತಿರುವ 3 ಕಾಡಾನೆಗಳನ್ನ ಹಿಡಿದು ಸ್ಥಳಾಂತರ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾಫಿ ತೋಟಗಳಲ್ಲೇ 300ಕ್ಕೂ ಹೆಚ್ಚು ಆನೆಗಳ ವಾಸ್ತವ್ಯ

ಕಾಫಿ ತೋಟ ಹಾಗೂ ಕಾಡಿನೊಳಗೆ ಬದುಕುವ ಕೊಡಗು ಜಿಲ್ಲೆಯ ಜನರ ಪಾಡು ಕಳೆದ ಎರಡು ದಶಕಗಳಿಂದ ಹೇಳತೀರದಾಗಿದೆ. 300ಕ್ಕೂ ಅಧಿಕ ಆನೆಗಳು ಕಾಡು ಬಿಟ್ಟು ಕಾಫಿ ತೋಟವನ್ನೇ ಆಶ್ರಯಿಸಿವೆ. ಇನ್ನು ಹುಲಿಗಳು ಬಿಡಾಡಿ ದನಗಳಂತೆ ಗ್ರಾಮದ ರಸ್ತೆ, ತೋಟಗಳಲ್ಲಿ ಬದುಕುತ್ತಿವೆ. ಕಾಡೆಮ್ಮೆ, ಕಾಡು ಕೋಣ, ಮಂಗಗಳು ಹೀಗೆ ಕಾಡು ಪ್ರಾಣಿಗಳ ಉಪಟಳದಿಂದ ಜಿಲ್ಲೆಯ ಬಹುಪಾಲು ಜನರು ಊರೇ ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ರೈತರು ಗದ್ದೆ, ತೋಟ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಬಲಿ; ಹಾಸನದಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ

ಕಾಡಾನೆಗಳು ಊರಿಗೆ ಬಾರದಂತೆ ತಡೆಯಲು ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿವೆ. ಇದರಿಂದಾಗಿ ಆನೆ-ಮಾನವ ಸಂಘರ್ಷ ಎಲ್ಲೆ ಮಿರಿದೆ. ಕಳೆದ 8 ತಿಂಗಳಲ್ಲಿ ಐದು ಮಂದಿ ಕಾಡಾನೆ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. 10ಕ್ಕೂ ಅಧಿಕ ಮಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ. ತಹಶೀಲ್ದಾರ್ ಅವರ ಮಾವ, ಐಜಿಪಿ ಪತ್ನಿ ಕೂಡ ಕಾಡಾನೆ ದಾಳಿಗೆ ಬಲಿಯಾಗಿರುವುದು ಸಮಸ್ಯೆಯ ಗಂಭೀರತೆಯನ್ನ ಎತ್ತಿ ಹಿಡಿದಿದೆ.

7 ಸಾಕಾನೆಗಳು, 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಂಬಿಂಗ್

ಕಳೆದ ಮೂರು ದಿನಗಳನ ಹಿಂದೆ ಬಾಂಗ್ಲಾ ಕಾರ್ಮಿಕನೊಬ್ಬ ಕಾಡಾನೆ ದಾಳಿಗೆ ಜೀವ ತೆತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಕಾಡಾನೆಗಳನ್ನ ಸೆರೆ ಹಿಡಿಯಲು ಆದೇಶಿಸಲಾಗಿದೆ. ಈ ಹಿನ್ನೆಲೆ ಸಿದ್ದಾಪುರ, ಒಂಟಿಯಂಗಡಿ, ಅಮ್ಮತ್ತಿ, ಕರಡಿಗೋಡು, ಹಾಲುಗುಂದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆನೆ-ಮಾನವ ಸಂಘರ್ಷ ತಡೆಗೆ ಒಂದು ವಾರ ಗಡುವು

ಇನ್ನು ಕಾರ್ಯಾಚರಣೆಯಲ್ಲಿ 70ಕ್ಕೂ ಅಧಿಕ ಸಿಬ್ಬಂದಿ, 7 ಸಾಕಾನೆಗಳು ಪಾಲ್ಗೊಂಡಿವೆ. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಕಾಡಿನ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಈಗಾಗಲೇ ನೂರಾರು ಕೋಟಿ ರೂ ವ್ಯಯಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಲು ಸಾಧ್ಯವಾಗದ ಕಡೆಗಳಲ್ಲಿ ಸೋಲಾರ್ ವಿದ್ಯುತ್ ತಂತಿ ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲಿ ಆನೆ ಕಂದಕ ತೋಡಿ, ಹಳೆಯ ಕಂದಕಗಳನ್ನ ದುರಸ್ಥಿತಿ ಪಡಿಸಲಾಗುತ್ತಿದೆ. ಆದರೂ ಕಾಡಿನಿಂದ ಪ್ರತಿ ನಿತ್ಯ ನೂರಾರು ಆನೆಗಳು ನಾಡಿನತ್ತ ಬರುತ್ತಿವೆ. ಸುಮಾರು 300ಕ್ಕೂ ಅಧಿಕ ಕಾಡಾನೆಗಳು ಆಗಮಿಸುತ್ತಿದ್ದು, ಕಾಫಿ ತೋಟಗಳಲ್ಲೇ ಹುಟ್ಟಿ ಬೆಳೆಯುವ ಇವುಗಳು ಕಾಡಿಗೆ ಒಗ್ಗಿಕೊಳ್ಳುವುದಿಲ್ಲ. ಬದಲಿಗೆ ಕಾಫಿ ತೋಟಗಳನ್ನೇ ತಮ್ಮ ಆವಾಸ ಸ್ಥಾನವನ್ನಾಗಿಸಿಕೊಂಡು ಅಲ್ಲೇ ಸಂಸಾರ ಮಾಡುತ್ತವೆ. ಇವುಗಳ ಸಂಖ್ಯೆ ಪ್ರತಿ ವರ್ಷ ಜಾಸ್ತಿ ಆಗುತ್ತಲೇ ಇದೆ. ಇದೇ ಆನೆಗಳು ಕಾಫಿ ಬೆಳೆಗಾರರಿಗೆ ಮರಣ ಮೃದಂಗವಾಗ ಪರಿಣಮಿಸಿದೆ. ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾ ಬಿಜೆಪಿ, ಆನೆ ಮಾನವ ಸಂಘರ್ಷ ತಡೆಗೆ ಒಂದು ವಾರದ ಗಡುವು ನೀಡಿದೆ.

ಇದನ್ನೂ ಓದಿ: ಕರೆಯಲ್ಲಿ ಸಿಲುಕಿದ್ದ ಕಾಡಾನೆ ಬಚಾವ್, 2 ದಿನ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ

ಆನೆಗಳನ್ನ ಕಾಡಿಗೆ ಅಟ್ಟುವುದು ಮಾತ್ರವಲ್ಲ, ಅಲ್ಲಿ ಆನೆಗಳಿಗೆ ಸಾಕಷ್ಟು ನೀರು, ಆಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಇದೇ ವೇಳೆ ಆನೆ ಆಹಾರ ಕೊರತೆ ತಪ್ಪಿಸಲು ಒಂದಷ್ಟು ಅರಣ್ಯಗಳಿಗೆ ಬೇಲಿ ಹಾಕಿ ಅಲ್ಲಿ 10 ವರ್ಷಗಳ ಕಾಲ ಹಲಸು, ಬಾಳೆ, ಬಿದಿರು ಸೇರಿದಂತೆ ವಿವಿಧ ಜಾತಿಯ ಮರಗಿಡಗಳನ್ನ ನೆಟ್ಟು ಪೋಷಿಸಿ ಆನೆಗಳಿಗೆ ಆಹಾರ ಸೃಷ್ಟಿಸುವುದು, ಬಳಿಕ ಅಲ್ಲಿಗೆ ಆನೆಗಳನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us