ಕೊಡಗು: ವಸತಿಹೀನರಿಗೆ ಕುಡಿಯುವ ನೀರು ಸ್ಥಗಿತಗೊಳಿಸಿದ ಚೆಟ್ಟಳ್ಳಿ ಪಂಚಾಯಿತಿ, ಜನರಿಗೆ ಕೊಳಚೆ ನೀರೇ ಗತಿ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆಯಲ್ಲಿ ವಸತಿಹೀನ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆರೆಯ ಕೊಳಚೆ ನೀರನ್ನೇ ಬಳಸುತ್ತಿರುವ ಕುಟುಂಬಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ನೀರಿನ ಸೌಲಭ್ಯ ಮರುಸ್ಥಾಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಡಗು: ವಸತಿಹೀನರಿಗೆ ಕುಡಿಯುವ ನೀರು ಸ್ಥಗಿತಗೊಳಿಸಿದ ಚೆಟ್ಟಳ್ಳಿ ಪಂಚಾಯಿತಿ, ಜನರಿಗೆ ಕೊಳಚೆ ನೀರೇ ಗತಿ
ಕುಡಿಯಲು ನೀರಿಲ್ಲದೆ ಕುಡಿಯುವುದಕ್ಕಾಗಿ ಕೆರೆಯ ಕೊಳಚೆ ನೀರು ಒಯ್ಯುತ್ತಿರುವ ಗ್ರಾಮಸ್ಥರು
Image Credit source: tv9
Edited By:

Updated on: Oct 12, 2026 | 2:22 PM

ಮುಖ್ಯಾಂಶಗಳು

  • ವಸತಿಹೀನ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ
  • ಕೆರೆಯ ಕೊಳಚೆ ನೀರನ್ನೇ ಬಳಸುತ್ತಿರುವ ನಿವಾಸಿಗಳು
  • ಪಂಚಾಯಿತಿ ವಿರುದ್ಧ ಸಂತ್ರಸ್ತರಿಂದ ಗಂಭೀರ ಆರೋಪ

ಮಡಿಕೇರಿ, ಅಕ್ಟೋಬರ್ 12: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಪ್ರದೇಶದಲ್ಲಿ ವಾಸಿಸುತ್ತಿರುವ ವಸತಿಹೀನ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮನೆ ನಿರ್ಮಿಸಿಕೊಳ್ಳಲು ಜಾಗ ನೀಡುವಂತೆ ಒತ್ತಾಯಿಸಿ ಸರ್ಕಾರಿ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಪಂಚಾಯಿತಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕೆರೆಯ ಕೊಳಚೆ ನೀರೇ ಆಸರೆ

ಈ ಡಿಜಿಟಲ್ ಯುಗದಲ್ಲೂ ಗಾಳಿ ಬೀಸಿದರೆ ಹಾರಿಹೋಗುವ ಸ್ಥಿತಿಯಲ್ಲಿರುವ ಶೆಡ್‌ಗಳಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ. ಪೊನ್ನತ್ ಮೊಟ್ಟೆ ಪ್ರದೇಶದಲ್ಲಿ ಸುಮಾರು 29ರಿಂದ 30 ಕುಟುಂಬಗಳು ನೆಲೆಸಿದ್ದು, ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಪರದಾಡುತ್ತಿವೆ. ಅನಿವಾರ್ಯವಾಗಿ ಸ್ಥಳೀಯ ಕೆರೆಯಿಂದ ಕೊಳಚೆ ನೀರನ್ನು ಸಂಗ್ರಹಿಸಿ ಮನೆಗಳಿಗೆ ಕೊಂಡೊಯ್ದು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರದೇಶದ ಮಕ್ಕಳು ಸೇರಿದಂತೆ ನಿವಾಸಿಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಈ ಹಿಂದೆ ಈ ಕುಟುಂಬಗಳಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂಬ ಆರೋಪವಿದೆ. ಪಂಚಾಯಿತಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನೀರು ಪೂರೈಕೆ ಸ್ಥಗಿತಗೊಳಿಸಿದ್ದಾರೆ ಎಂಬುದು ಸಂತ್ರಸ್ತರ ಆರೋಪವಾಗಿದೆ.

ಮನೆಗಾಗಿ ಹೋರಾಟ: ನೀರು ಕಡಿತದ ಆರೋಪ

ಈ ಕುಟುಂಬಗಳು ಹಿಂದೆ ಗ್ರಾಮದ ವಿವಿಧೆಡೆ ತೋಟದ ಮನೆಗಳಲ್ಲಿ ವಾಸಿಸುತ್ತಿದ್ದವು. ಬಳಿಕ ವಸತಿಹೀನರಿಗೆ ಮೀಸಲಿಟ್ಟಿದೆ ಎನ್ನಲಾದ ಸುಮಾರು ಎರಡು ಎಕರೆ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು, ಮನೆ ಕಟ್ಟಿಕೊಳ್ಳಲು ಜಾಗ ನೀಡುವಂತೆ ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳ ಖಾಲಿ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

ಪ್ರದೇಶದ ಇತರ ಭಾಗಗಳಿಗೂ ಎಸ್ಟೇಟ್ ಮಾಲೀಕರಿಗೂ ಪಂಚಾಯಿತಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ, ತಮ್ಮ ಕುಟುಂಬಗಳಿಗೆ ಮಾತ್ರ ನೀರು ನೀಡುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮನೆಗಳ ಮೇಲ್ಭಾಗದಲ್ಲೇ 11 ಕೆವಿ ವಿದ್ಯುತ್ ಮಾರ್ಗವನ್ನು ಎಳೆದು ತೊಂದರೆ ನೀಡಲಾಗುತ್ತಿದೆ ಎಂಬ ದೂರೂ ಕೇಳಿಬಂದಿದೆ.

ಇದರ ಜೊತೆಗೆ, ಬಡಾವಣೆಯ ಪಕ್ಕದಲ್ಲಿ ಗ್ರಾಮದ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ವಾಯುಮಾಲಿನ್ಯದ ಸಮಸ್ಯೆಯೂ ಎದುರಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಒಂದೆಡೆ ಕೆರೆಯ ಕೊಳಚೆ ನೀರನ್ನು ಬಳಸುವ ಅನಿವಾರ್ಯತೆ, ಮತ್ತೊಂದೆಡೆ ಹೊಗೆಯಿಂದ ಉಂಟಾಗುವ ತೊಂದರೆ—ಇವೆಲ್ಲವೂ ಕುಟುಂಬಗಳ ಬದುಕನ್ನು ಸಂಕಷ್ಟಕ್ಕೆ ದೂಡಿವೆ.

ಸಂತ್ರಸ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಒತ್ತಾಯ

ಮನೆಗಾಗಿ ಒತ್ತಾಯಿಸಿ ಸರ್ಕಾರಿ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವುದು ತಪ್ಪಾಗಿರಬಹುದು. ಆದರೆ, ಅದಕ್ಕಾಗಿ ಜನರಿಗೆ ಶುದ್ಧ ಕುಡಿಯುವ ನೀರನ್ನೇ ನಿರಾಕರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ಕೊಳಚೆ ನೀರು ಬಳಸುವಂತೆ ಮಾಡಿ ವಯಸ್ಕರು ಹಾಗೂ ಮುಗ್ಧ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್​ ಸೋಮಯ್ಯ
Loading...
Unable to load recommendations.
Follow Us