ಕೊಡಗು ಅ.18: ದಕ್ಷಿಣ ಮಂದಾಕಿನಿ, ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ, ಕೊಡರವ ಖ್ಯಾತ ಯಾತ್ರಾ ತಾಣ ತಲಕಾವೇರಿಯಲ್ಲಿ “ಕಾವೇರಿ” (Cauvery) ಮಾತೆ ತೀರ್ಥರೂಪಿಣಿಯಾಗಿ (Theerthodbhava) ಆವಿರ್ಭವಿಸಿದ್ದಾಳೆ. ತಡರಾತ್ರಿ 1 ಗಂಟೆ 27 ನಿಮಿಷಕ್ಕೆ ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವವಾಗಿದೆ. ಈ ತೀರ್ಥೋದ್ಭವದ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಮೇಲೆ ಅರ್ಚಕರು ಕಾವೇರಿ ನೀರನ್ನು ಎರಚಿದ್ದು, ತೀರ್ಥ ಪ್ರೋಕ್ಷಣೆಯಿಂದ ಭಕ್ತರು ಪುನೀತರಾದರು.
ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಮುಂಜಾಗ್ರತಾ ಕ್ರಮವಾಗಿ ಸಂಜೆ 4 ಗಂಟೆಯಿಂದಲೇ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದು, ಭಕ್ತರ ಪ್ರಯಾಣಕ್ಕೆ ಉಚಿತ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ಪ್ರಧಾನ ಅರ್ಚಕರಾದ ಪ್ರಶಾಂತ್ ಆಚಾರ್, ಗುರುರಾಜ ಅಚಾರ, ರವಿರಾಜ್ ಆಚಾರ್ ನೇತೃತ್ವದಲ್ಲಿ ಬ್ರಹ್ಮ ಕುಂಡಿಕೆ ಮತ್ತು ಕಾವೇರಿ ಮೂರ್ತಿಗೆ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಸೂಕ್ತಾಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಲಾಯ್ತು. ಬಳಿಕ ಕುಂಕುಮಾರ್ಚನೆ, ಗಂಗಾ ಸಹಸ್ರನಾಮಾರ್ಚನೆ, ಮಹಾಅರ್ಘ್ಯ ಅರ್ಚನೆ ಪೂಜೆ ನೆರವೇರಿತು. ಈ ವೇಳ ಭಕ್ತರ ಝೇಂಕಾರ ಮುಗಿಲುಮುಟ್ಟಿತು.
ಇದನ್ನೂ ಓದಿ: ಕಾವೇರಿ ತೀರ್ಥೊದ್ಭವ: ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ, ಕಥಾಸಾರ ಇಲ್ಲಿದೆ
ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥೋದ್ಭವವಾಗುತ್ತದೆ. ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 am, Wed, 18 October 23