ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?

ಕೊಡಗು ಜಿಲ್ಲೆಯ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ನಿರ್ಧಾರಕ್ಕೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಇವರೊಂದಿಗೆ ಸಂಭಾಷಣೆ ನಡೆಸಬಾರದೆಂದೂ, ಸಾಮಾಜಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದೆಂದೂ ಹಾಗೂ ಕಾರ್ಮಿಕ ಸಹಕಾರವನ್ನು ನೀಡಬಾರದೆಂದೂ ಆದೇಶಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಬಹಿಷ್ಕೃತ ಕುಟುಂಬಗಳು ಮಾನಸಿಕ-ಆರ್ಥಿಕ ಸಂಕಷ್ಟದಲ್ಲಿವೆ. ಆದರೆ ಗ್ರಾಮ ಸಮಿತಿಯು ಬಹಿಷ್ಕಾರದ ಆರೋಪಗಳನ್ನು ನಿರಾಕರಿಸಿದೆ.

ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ?
ಸಮಿತಿಯ ಮಾತು ಕೇಳದಿದ್ದಕ್ಕೆ ಸಾಮಾಜಿಕ ಬಹಿಷ್ಕಾರ!
Edited By:

Updated on: Jan 10, 2026 | 12:13 PM

ಕೊಡಗು, ಜನವರಿ 10: ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿ ವಿಷಯವಾಗಿ ಹೊರಹೊಮ್ಮಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ತೀರ್ಮಾನದ ಹೆಸರಿನಲ್ಲಿ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸಾವು-ಸಮಾರಂಭಕ್ಕೂ ಬಾರದಂತೆ ಆದೇಶ

ಗ್ರಾಮದ ಅಜಂತ ಮತ್ತು ನವೀನ್ ಎಂಬುವವರ ಎರಡು ಕುಟುಂಬಗಳನ್ನು ಸಮಿತಿಯ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಹಿಷ್ಕಾರದ ಪರಿಣಾಮವಾಗಿ ಗ್ರಾಮಸ್ಥರು ಆ ಕುಟುಂಬಗಳೊಂದಿಗೆ ಮಾತನಾಡುವಂತಿಲ್ಲ, ಸಾವು–ಸಮಾರಂಭ, ಸಭೆ, ಮದುವೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೆ, ಈ ಕುಟುಂಬಗಳ ತೋಟದ ಕೆಲಸಗಳಿಗೆ ಕಾರ್ಮಿಕರು ತೆರಳದಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೋ ಓದಿ ‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

ಆರೋಪ ತಳ್ಳಿಹಾಕಿದ ಸಮಿತಿ

ಬಹಿಷ್ಕಾರದ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಂಪರ್ಕ ಕಡಿತಗೊಂಡ ಪರಿಣಾಮ ಈ ಎರಡು ಕುಟುಂಬಗಳು ಮಾನಸಿಕ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕೂತಿ ಗ್ರಾಮ ಸಮಿತಿಯು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಗ್ರಾಮ ಕಟ್ಟುಪಾಡುಗಳನ್ನು ಮೀರಿ ನಡೆದುಕೊಂಡ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿತ್ತು. ಆದರೆ ದಂಡವನ್ನು ಕಟ್ಟದೆ ಇರುವುದರಿಂದ ಗ್ರಾಮಸ್ಥರು ಸ್ವಯಂಸ್ಪೂರ್ತಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.