AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

‘ಕೊರಗಜ್ಜ’ ಸಿನಿಮಾ ತಂಡ ಆಯೋಜಿಸಿರುವ ರೀಲ್ಸ್ ಸ್ಪರ್ಧೆ ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿದೆ. ದೈವದ ಹೆಸರಲ್ಲಿ ವೇಷ ಹಾಕಿ ಕುಣಿಯುವುದರಿಂದ ದೈವ ನಿಂದನೆಯಾಗುತ್ತದೆ, ಭಕ್ತರ ನಂಬಿಕೆ ಘಾಸಿಯಾಗುತ್ತದೆ ಎಂದು ಕೊಡಗಿನ ದೈವ ನರ್ತಕರು ಮತ್ತು ಆರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರ ತಂಡದ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?
ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಆಕ್ರೋಶ
Gopal AS
| Edited By: |

Updated on: Jan 03, 2026 | 4:13 PM

Share

ಕೊಡಗು, ಜನವರಿ 03: ಕೊರಗಜ್ಜ (Koragajja) ತುಳುನಾಡು ಸೇರಿದಂತೆ ಕೊಡಗು (Kodagu) ಜಿಲ್ಲೆಯ ಆರಾಧ್ಯ ದೈವ. ಆದರೆ ಇದೇ ದೈವದ ಹೆಸರಲ್ಲಿ ರೀಲ್ಸ್​ ಸ್ಪರ್ಧೆಗೆ ‘ಕೊರಗಜ್ಜ’ ಸಿನಿಮಾ ತಂಡ ಕರೆ ನಿಡಿದೆ. ಗೆದ್ದವರಿಗೆ ವಿದೇಶ ಪ್ರವಾಸದ ಜೊತೆ ಒಂದು ಕೋಟಿ ರೂ ಬಹುಮಾನದ ಆಮಿಷವನ್ನೂ ಒಡ್ಡಿದೆ. ‘ಕೊರಗಜ್ಜ’ ಸಿನಿಮಾ ತಂಡ ಆಯೋಜಿಸಿರುವ ರೀಲ್ಸ್ ಸ್ಪರ್ಧೆಗೆ ಇದೀಗ ಕೊಡಗಿನಲ್ಲಿ ದೈವ ನರ್ತಕರ ಮತ್ತು ಆರಾಧಕರಿಂದ ತೀವ್ರ ಖಂಡನೆ ವ್ಯಕ್ಯವಾಗಿದೆ.

ಇತ್ತೀಚೆಗೆ ಮಲೆನಾಡು ಭಾಗದ ಸ್ಥಳೀಯ ದೈವಗಳನ್ನ ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ಸು ಗಳಿಸುವುದು ಹೆಚ್ಚಾಗಿದೆ. ‘ರಂಗಿತರಂಗ’, ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್-1’ ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳು. ಇದರ ಬೆನ್ನಲ್ಲೇ ಇದೀಗ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತುಳನಾಡಿನ ಆರಾಧ್ಯ ದೈವವಾಗಿರುವ ಕೊರಗಜ್ಜನನ್ನ ಇಟ್ಟುಕೊಂಡು ಈ ಸಿನಿಮಾದಲ್ಲಿ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ. ಸದ್ಯ ಈ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಕೊರಗಜ್ಜನ ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದೆ. ಇದಕ್ಕೆ ಭರ್ಜರಿ ಬಹುಮಾನವನ್ನೂ ಇಟ್ಟಿದೆ.

ಇದನ್ನೂ ಓದಿ: ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು?

ಈಗಾಗಲೇ ಸಾವಿರಾರು ರೀಲ್ಸ್​ಗಳು ಕೂಡ ಸಿದ್ಧವಾಗಿವೆ. ಆದರೆ ಸಿನಿಮಾ ತಂಡದ ಈ ಪ್ರಚಾರದ ಗಿಮಿಕ್ಕ್​ ಅನ್ನ ಕೊಡಗಿನ ದೈವ ಆರಾಧಕರು ಹಾಗೂ ದೈವ ನರ್ತಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಘದ ಸದಸ್ಯರು ಸಿನಿಮಾ ತಂಡ ಕೀಳು ಅಭಿರುಚಿಗಾಗಿ ಈ ರೀಲ್ಸ್ ಸ್ಪರ್ಧೆಗೆ ಕರೆ ಕೊಟ್ಟಿದೆ ಎಂದು ಟೀಕಿಸಿದೆ.

ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಈ ರೀಲ್ಸ್ ಸ್ಪರ್ಧೆ ಆಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೇವರ ಅಪಹಾಸ್ಯ ಮಾಡಿದಂತಾಗುತ್ತದೆ. ಇದು ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗುತ್ತದೆ ಎಂದು ದೈವ ಆರಾಧಕರು ಆಕ್ರೋಶ ಹೊರ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಮ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?

ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾದ ಕೊರಗಜ್ಜ ಹಾಡುಗಳನ್ನ ಬಳಸಿ ರೀಲ್ಸ್ ಮಾಡುವಂತೆ ಸಿನಿಮಾ ತಂಡ ಕರೆ ನೀಡಿದೆ. ಇದಕ್ಕಾಗಿ ಒಂದು ಕೋಟಿ ರೂ ಬಹುಮಾನ ಮೀಸಲಿಟ್ಟಿದೆ. ಅಂತಿಮ ಮೂರು ಸ್ಪರ್ಧಿಗಳಿಗೆ ವಿದೇಶ ಪ್ರವಾಸದ ಬಹುಮಾನವನ್ನೂ ಘೋಷಿಸಿದೆ. ಅತಿಹೆಚ್ಚು ಲೈಕ್ಸ್ ಗಳಿಸುವ ಸ್ಪರ್ಧಿಗಳಿಗೆ ಈ ಎಲ್ಲಾ ಬಹುಮಾನ ಲಭಿಸಲಿವೆ ಎಂದು ಚಿತ್ರ ತಂಡ ಆಫರ್ ನೀಡಿದೆ. ಆದರೆ ನಂಬಿದವರಿಗೆ ಇಂಬು ನೀಡುವ ದೇವರೆಂದೇ ಖ್ಯಾತಿಯಾಗಿರುವ ಕೊರಗಜ್ಜನನ್ನ ಬಳಸಿ ರೀಲ್ಸ್ ಮಾಡಲು ಹೊರಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.