ಕಿಟಕಿ ಬಾಗಿಲು ಮುಚ್ಚಿದ ಪುಟ್ಟ ಕೋಣೆಯಲ್ಲಿ ಏಳೆಂಟು ವರ್ಷದಿಂದ ಜೀವನ; ಮಗಳ ಕರುಣಾಜನಕ ಸ್ಥಿತಿಗೆ ಪೋಷಕರೇ ಕಾರಣ?

ಕಿಟಕಿ ಬಾಗಿಲು ಮುಚ್ಚಿದ ಪುಟ್ಟ ಕೋಣೆಯಲ್ಲಿ ಏಳೆಂಟು ವರ್ಷದಿಂದ ಜೀವನ; ಮಗಳ ಕರುಣಾಜನಕ ಸ್ಥಿತಿಗೆ ಪೋಷಕರೇ ಕಾರಣ?
ಕಿಟಕಿ ಬಾಗಿಲು ಮುಚ್ಚಿದ ಪುಟ್ಟ ಕೋಣೆಯಲ್ಲಿ ಏಳೆಂಟು ವರ್ಷದಿಂದ ಜೀವನ

ಯುವತಿ ಈ ರೀತಿ ಆಗಲು ಕಾರಣವೇನು? ಪೋಷಕರು ಕತ್ತಲ ಕೋಣೆಯಲ್ಲಿ ಏಕೆ ಇಟ್ಡಿದ್ದರು? ಆರೋಗ್ಯ ಕಾರ್ಯಕರ್ತೆಯರು ಏಕೆ ನಿರ್ಲಕ್ಷ್ಯ ಮಾಡಿದ್ದರು? ಎಂಬುವುದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಜೊತೆಗೆ ಸೂಕ್ತ ಚಿಕಿತ್ಸೆ ನೀಡಿ ಈಕೆ ಎಲ್ಲರಂತಾಗಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿ ಎಂಬುದು ಎಲ್ಲರ‌ ಆಶಯ.

TV9kannada Web Team

| Edited By: ganapathi bhat

Jan 27, 2022 | 9:47 AM

ಮಡಿಕೇರಿ: ಹೆತ್ತವರಿಗೆ ಹೆಗ್ಗಣನೂ ಮುದ್ದು ಅಂತಾರೆ. ತಮ್ಮ ಮಕ್ಕಳು ಹೇಗೇ ಇದ್ರೂ ಪೋಷಕರಿಗೆ ಮಕ್ಕಳ‌ ಮೇಲಿನ ಪ್ರೀತಿ ಅಕ್ಕರೆ ಕಡಿಮೆಯಾಗಲ್ಲ. ಆದರೆ ಇಲ್ಲಿ ಯುವತಿಯೊಬ್ಬಳ ವ್ಯಥೆ ನೋಡಿದರೆ ಮುಗ್ದ ಜೀವದ ಪೋಷಕರ ಬಗ್ಗೆ ಅಸಹ್ಯ ಹುಟ್ಟುವುದಂತೂ ಸತ್ಯ. ಐದಡಿ ಉದ್ದದ ಪುಟ್ಟದಾದ ಕೋಣೆ. ಕಿಟಕಿ ಬಂದ್. ಬಾಗಿಲು ಬಂದ್. ಉಸಿರುಗಟ್ಟಿಸುವ ಕೋಣೆಯೊಳಗೊಂದು ಪುಟ್ಟ ಜೀವದ ನರಳಾಟ. ಅಬ್ಬಾ! ನೋಡಿದ್ರೆ ಎಂಥವರ ಕರುಳು ಕೂಡಾ ಚುರುಕ್ ಅನ್ನದಿರದು. ಸರಿಯಾಗಿ ಮಾತು ಬರುತ್ತಿಲ್ಲ, ಏನೋ ಹೇಳಬೇಕು. ಆದರೆ ಅದನ್ನು ಹೇಳೋದಕ್ಕಾಗ್ತಿಲ್ಲ. ತನ್ನ ತೊದಲು ಮಾತಿನಲ್ಲೇ ಮನದೊಳಗಿನ ಭಾವನೆಯನ್ನ ವ್ಯಕ್ತಪಡಿಸೋಕೆ ಮುಂದಾದ್ರೂ ಅದು ಸಾಧ್ಯವಾಗುತ್ತಿಲ್ಲ. ಈ ಮುಗ್ದ ಹೆಣ್ಣು ಮಗಳ ಈ ಸ್ಥಿತಿಗೆ ಕಾರಣ ಈಕೆಯ ಪೋಷಕರೇ ಎಂಬೂದು ದೊಡ್ಡ ದುರಂತ.

ಇಂಥದ್ದೊಂದು ಅಮಾನವೀಯ, ಕರುಳು ಹಿಂಡುವ ಘಟನೆ ನಡೆದದ್ದು ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮದಲ್ಲಿ. ಈ ಯುವತಿಗೆ ಸುಮಾರು 27 ವರ್ಷ ಪ್ರಾಯ. ಈಕೆಯ ತಂದೆ ಧನಂಜಯ, ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಏಳೆಂಟು ವರ್ಷದಿಂದ ಇವಳಿಗೆ ಈ ಕೋಣೆಯೇ ಪ್ರಪಂಚ. ಈಕೆಯ ಊಟ, ಶೌಚ, ನಿದ್ದೆ ಎಲ್ಲವೂ ಇಲ್ಲೆ‌ ನಡೆಯುತ್ತದೆ.

ಹತ್ತು ವರ್ಷದ ಹಿಂದೆ ತನ್ನ ಪ್ರೀತಿಯ ಅಮ್ಮ ಕಣ್ಣೆದುರೇ ಪ್ರಾಣ ಬಿಟ್ಟಿದ್ದು ನೋಡಿ ಉಂಟಾದ ಮಾನಸಿಕ ಆಘಾತ ಮುಂದೆ ಇವಳನ್ನು ಸಹಜ ಸ್ಥಿತಿಗೆ ತರಲೇ ಇಲ್ಲ. ಚೇತರಿಕೆಗೆ ಬೇಕಾದ ಆರೈಕೆ, ಪ್ರೀತಿಯೂ ಈಕೆಗೆ ಸಿಗಲಿಲ್ಲ ಅನ್ನುತ್ತಾರೆ ನೆರೆಹೊರೆಯವರು. ಆರಂಭದಲ್ಲೊಮ್ಮೆ ಚಿಕಿತ್ಸೆ ಕೊಡಿಸೋಕೆ ಮುಂದಾದ ತಂದೆ ನಂತರದಲ್ಲಿ ಈಕೆಯ ಅಸಹಜ ವರ್ತನೆಯಿಂದ ಮನೆಯೊಳಗೆ ಹೀಗೆ ಕೂಡಿ ಹಾಕಿದ್ದಾರಂತೆ.

ಹಲವು ವರ್ಷದಿಂದ ಈ ಮುಗ್ದ ಬಾಲಕಿಯ ಈ ಸ್ಥಿತಿಯ ಬಗ್ಗೆ ಅಕ್ಕಪಕ್ಕದ ಸಾರ್ವಜನಿಕರು ಸರ್ಕಾರದ ವ್ಯವಸ್ಥೆಗಳಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಈ ಬಗ್ಗೆ ಸಮಾಜ ಸೇವಕ ಮಾದೇಟಿರ ತಿಮ್ಮಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಅಧಿಕಾರಿಗಳು ಧನಂಜಯ ಅವರ ಮನೆಗೆ ತೆರಳಿ ನೋಡಿದಾಗಲೇ ಗೊತ್ತಾಗಿದ್ದು ಈಕೆಯ ಕರಾಳ ಸ್ಥಿತಿ.

ಪುಟ್ಟ ಕೋಣೆಯಲ್ಲಿ ಒಬ್ಬಳೇ ಇದ್ದ ಯುವತಿಗೆ ಮೈಯಲ್ಲಿ ಹಳೆಯ ಬಟ್ಟೆ, ಒಂದು ಚಾಪೆ ಬಿಟ್ಟರೆ ಬೇರೇನೂ ಇರಲಿಲ್ಲ. ಕನಿಷ್ಟ ಹೊದ್ದುಕೊಳ್ಳೋದಕ್ಕೆ ಕಂಬಳಿಯೂ ಈಕೆಗೆ ಇರಲಿಲ್ಲ. ಸಣ್ಣದೊಂದು ಕಿಟಕಿ ಇದ್ರೂ, ಅದೂ ಬಂದ್ ಆಗಿತ್ತು. ಈಕಡೆಯಿಂದ ಬಾಗಿಲು ಬಂದ್ ಮಾಡಿ ಲೈಟ್ ಆಫ್ ಮಾಡಿದ್ರೆ ಸಂಪೂರ್ಣ ಕತ್ತಲೆಯ ಕೂಪ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ ಪ್ರಭಾವತಿ ಮಾತನಾಡಿಸಿದಾಗ ಜೋರಾಗಿ ಅಳೋದಕ್ಕೆ ಶುರುಮಾಡಿದ್ದಳು ಈಕೆ. ಮನೆಯಲ್ಲಿದ್ದ ಯುವತಿಯ ತಂದೆಯ ಎರಡನೇ ಪತ್ನಿ ಹಾಗೂ ಮಗಳನ್ನು ಎಷ್ಟೇ ವಿಚಾರಿಸಿದ್ರೂ, ನಿಜಾಂಶ ಗೊತ್ತಾಗಲಿಲ್ಲ. ಇದೀಗ ಆಕೆಯನ್ನು ರಕ್ಷಣೆ ಮಾಡಿರುವ ಅಧಿಕಾರಿಗಳು ಯುವತಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಯುವತಿ ಈ ರೀತಿ ಆಗಲು ಕಾರಣವೇನು? ಪೋಷಕರು ಕತ್ತಲ ಕೋಣೆಯಲ್ಲಿ ಏಕೆ ಇಟ್ಡಿದ್ದರು? ಆರೋಗ್ಯ ಕಾರ್ಯಕರ್ತೆಯರು ಏಕೆ ನಿರ್ಲಕ್ಷ್ಯ ಮಾಡಿದ್ದರು? ಎಂಬುವುದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಜೊತೆಗೆ ಸೂಕ್ತ ಚಿಕಿತ್ಸೆ ನೀಡಿ ಈಕೆ ಎಲ್ಲರಂತಾಗಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿ ಎಂಬುದು ಎಲ್ಲರ‌ ಆಶಯ.

ವಿಶೇಷ ವರದಿ: ಗೋಪಾಲ್ ಸೋಮಯ್ಯ, ಟಿವಿ9 ಕೊಡಗು

ಇದನ್ನೂ ಓದಿ: ಜೀವನದ ಹಂಗು ತೊರೆದು ಕೆರೆಗೆ ಹಾರಿ ವ್ಯಕ್ತಿಯ ರಕ್ಷಣೆ ಮಾಡಿದ ಕೊಡಗು ಕಾಲೇಜು ವಿದ್ಯಾರ್ಥಿನಿ!

ಇದನ್ನೂ ಓದಿ: ಕೊಡಗು: ಪ್ರವಾಸಿಗರಿಗೆ ಖುಷಿಯ ಸುದ್ದಿ; ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ ಒಮ್ಮೆ ಭೇಟಿ ನೀಡಿ

Follow us on

Related Stories

Most Read Stories

Click on your DTH Provider to Add TV9 Kannada