ಕೊಡಗು, ಆ.07: ಕೊಡಗು ಪ್ರವಾಸಿಗರ(Tourist) ಹಾಟ ಸ್ಪಾಟ್, ದೇಶ-ವಿದೇಶಗಳಿಂದ ಹಾರಿ ಬರುವ ಟೂರಿಸ್ಟ್ಗಳಿಗೆ ಕೊಡಗು(Kodagu) ಜಿಲ್ಲೆಯ ಬೆಟ್ಟ-ಗುಡ್ಡಗಳು, ಪ್ರಕೃತಿ ಸೌಂದರ್ಯ, ನದಿ-ತೊರೆಗಳು, ಕೂಲ್ ಕೂಲ್ ಪರಿಸರ ಎಲ್ಲವೂ ಬಹಳ ಇಷ್ಟ. ಹಾಗಾಗಿಯೇ ಜಿಲ್ಲೆಗೆ ವಾರ್ಷಿಕ ಕನಿಷ್ಟ 40 ಲಕ್ಷ ಪ್ರವಾಸಿಗರು ಭೇಟಿ ನೀಡ್ತಾರೆ. ವಾಸ್ತವವಾಗಿ ನೋಡುವುದಾದರೆ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸೀಸನಲ್ ಟೂರಿಸಂ ಎನ್ನುವ ಕಲ್ಪನೆಯೇ ಮಾಯವಾಗಿದೆ. ವಿಪರೀತ ಮಳೆ ಇದ್ದಾಗಲೂ ಕೂಡ ಪ್ರವಾಸಿಗರು ಅದೇ ಪ್ರಮಾಣದಲ್ಲಿ ಬರುತ್ತಿದ್ದರು. ಆದ್ರೆ, ವಯನಾಡು ಭೀಕರ ದುರಂತದ ಬಳಿಕ ಇದೀಗ ಜಿಲ್ಲೆಯಲ್ಲಿ ಎಲ್ಲವೂ ಸ್ತಬ್ಧವಾಗಿದೆ.
ಹೌದು, ಯಾವಾಗ ವಯನಾಡಿನಲ್ಲಿ ಬೆಟ್ಟ-ಗುಡ್ಡಗಳು ಕೊಚ್ಚಿ ಬಂದು ಅಲ್ಲಿನ ಜನ ಜೀವನ ಪ್ರವಾಸೋಧ್ಯಮವನ್ನ ಬುಡಮೇಲು ಮಾಡಿತೋ ಇದೀಗ ಕೊಡಗು ಜಿಲ್ಲೆಯತ್ತ ಮುಖ ಮಾಡಲೂ ಪ್ರವಾಸಿಗರು ಭಯಪಡುತ್ತಿದ್ದಾರೆ. ಕೊಡಗು ಜಿಲ್ಲೆಯ ಬಹುತೇಕ ಹೋಮ್ಸ್ಟೇ, ರೆಸಾರ್ಟ್ಗಳು ಇರುವುದೇ ಬೆಟ್ಟಗುಡ್ಡಗಳ ಮೇಲೆ. ಹಾಗಾಗಿ ಇಲ್ಲಿ ಯಾವಾಗ ಈ ಬೆಟ್ಟ-ಗುಡ್ಡಗಳು ಕುಸಿಯುತ್ತದೆಯೋ ಎಂದು ಪ್ರವಾಸಿಗರು ಬರುವುದನ್ನೇ ಬಿಟ್ಟಿದ್ದಾರೆ.
ಇದನ್ನೂ ಓದಿ:ಕೊಡಗು: 104 ಕಡೆಗಳಲ್ಲಿ ಭೂಕುಸಿತದ ಭೀತಿ, 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್
ವಾಸ್ತವವಾಗಿ ಆಗಸ್ಟ್ನಲ್ಲಿ ಬಹಳಷ್ಟು ಸರ್ಕಾರಿ ರಜೆಗಳಿರುವ ಹಿನ್ನೆಲೆ ಜಿಲ್ಲೆಯ ಹೋಮ್ಸ್ಟೇ, ರೆಸಾರ್ಟ್ಗಳು ಬುಕಿಂಗ್ ಆಗಿದ್ದವು. ಆದ್ರೆ, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆ ವಿಪರೀತ ಅಬ್ಬರಿಸಿದ್ದರಿಂದ, ಇದೇ ವೇಳೆ ವಯನಾಡು ದುರಂತ ಸಂಭವಿಸಿದ್ದರಿಂದ ಎಲ್ಲಾ ಬುಕಿಂಗ್ಗಳು ರದ್ದಾಗಿವೆ. ಸೆಪ್ಟಂಬರ್ ಬಳಿಕವೇ ಕೊಡಗಿನತ್ತ ಬರುವ ಬಗ್ಗೆ ಪ್ರವಾಸಿಗರು ಯೋಚಿಸುತ್ತಿದ್ದಾರಂತೆ. ಇದೀಗ ಕಳೆದ ನಾಲ್ಕು ದಿನಗಳಿಂದ ಮಳೆ ಸಂಪೂರ್ಣ ಇಳಿದಿದೆ. ಆದರೂ ಕೂಡ ಪ್ರವಾಸಿಗರು ಧೈರ್ಯ ಮಾಡುತ್ತಿಲ್ಲ. ಅತಿಯಾದ ಮಳೆ, ಭೂ ಕುಸಿತದ ಆತಂಕ ಇರುವಾಗ ಪ್ರವಾಸಿಗರು ಕೆಲ ದಿನಗಳ ಮಟ್ಟಿಗೆ ಪ್ರವಾಸ ಕೈಗೊಳ್ಳದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ.
ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕೂಡ ಕಳೆದ ವಾರ ಪ್ರವಾಸಿಗರು ತಮ್ಮ ಪ್ರವಾಸವನ್ನ ಕೆಲ ದಿನಗಳ ಮಟ್ಟಿಗೆ ಮುಂದೂಡಿ ಎಂದು ಕೆರೆ ಕೊಟ್ಟಿತ್ತು. ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆ ಅಬ್ಬರ ಇನ್ನಷ್ಟೇ ಆರಂಭವಾಗಬೇಕಿದೆ. ಆಗಸ್ಟ್ 10 ರ ಬಳಿಕ ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. ಹಾಗಾಗಿ ಈ ತಿಂಗಳಂತೂ ಪ್ರವಾಸೋಧ್ಯಮ ಚೇತರಿಸಿಕೊಳ್ಳುವ ಸಾಧ್ಯತೆ
ಕಡಿಮೆ ಎಂದು ಹೇಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 pm, Wed, 7 August 24