ಕೋಲಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಲದ ಕಂತು ಮರುಪಾವತಿಗೆ ಸಂಕಷ್ಟ ಎದುರಾಗಿದ್ದು, ಕೃಷಿ ಕ್ಷೇತ್ರ ಸೇರಿದಂತೆ ಕೂಲಿ ಸಿಗದೆ ಮಹಿಳೆಯರು ಹಾಗೂ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರೈತರು, ಮಹಿಳೆಯರು ಸಾಲ ಮರು ಪಾವತಿ ಮುಂದೂಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡುತ್ತಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬಗೆಯ ಸಾಲದ ಕಂತು ಪಾವತಿಗೆ ಕೆಲವು ತಿಂಗಳುಗಳ ಕಾಲ ವಿನಾಯಿತಿ ನೀಡಿತ್ತು. ಆದರೆ ಈ ಬಾರಿ ಆರ್‌ಬಿಐ ಈವರೆಗೆ ಯಾವುದೇ ವಿನಾಯಿತಿ ಘೋಷಿಸಿಲ್ಲ. ಹೀಗಾಗಿ ಸಾಲ ಮರು ಪಾವತಿ ಅವಧಿ ವಿಸ್ತರಣೆ ಮಾಡುವಂತೆ ಲಕ್ಷಾಂತರ ಮಹಿಳೆಯರು ಮನವಿ ಮಾಡುತ್ತಿದ್ದಾರೆ.
ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 25 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ 550 ಕೋಟಿ ಸಾಲ ನೀಡಲಾಗಿದೆ. ಇದೀಗ ಸಾಲ ವಸೂಲಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬ್ಯಾಂಕ್ ಸಿಬ್ಬಂದಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಕರೆ ಮಾಡಿ ಸಾಲದ ಕಂತು ಕಟ್ಟುವಂತೆ ಮೌಖಿಕ ಸೂಚನೆ ನೀಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಂಕಷ್ಟದಿಂದ ಎಲ್ಲೆಡೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲದ ಕಂತು ಕಟ್ಟಲಾಗದೆ ಗೊಂದಲಕ್ಕೆ ಸಿಲುಕಿದ್ದು, ಸರ್ಕಾರದ ಮೊರೆ ಹೋಗಿದ್ದಾರೆ.
ಕೊರೊನಾದಿಂದಾಗಿ ಮಹಿಳೆಯರಿಗೆ ಕೂಲಿ ಸಿಗುತ್ತಿಲ್ಲ ಹಾಗಾಗಿ ಆದಾಯವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಈ ಮಧ್ಯೆ ಪ್ರತಿ ವಾರ ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾಲದ ಕಂತಿನ ಹಣ ಸಂಗ್ರಹ ಮಾಡುವುದು ಕಷ್ಟವಾಗಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಸಂಘಗಳ ಮೇಲೆ ಬಡ್ಡಿಯ ಹೊರೆ ಬೀಳಲಿದೆ. ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಾಲ ಪಾವತಿ ಅವಧಿ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ತ್ರೀಶಕ್ತಿ ಸಂಘದ ಸದಸ್ಯೆ ಗೀತಾ ತಿಳಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಿಂದಿನ ವರ್ಷದಂತೆಯೇ ಸಾಲದ ಕಂತು ಪಾವತಿ ಅವಧಿಯನ್ನು ಕನಿಷ್ಠ 3 ತಿಂಗಳವರೆಗೆ ಮುಂದೂಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಇನ್ನೂ ಲಾಕ್‌ಡೌನ್‌ನಿಂದ ಜನರು ಅನುಭವಿಸುತ್ತಿರುವ ಕಷ್ಟದ ಅರಿವಿದೆ, ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಪಾವತಿ ಅವಧಿ ಮುಂದೂಡುವ ಅಧಿಕಾರವಿಲ್ಲ ಹಾಗಾಗಿ ಸರ್ಕಾರದ ಮಟ್ಟದಲ್ಲೇ ನಿರ್ಧಾರವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದ್ದಾರೆ.
ಒಟ್ಟಾರೆ ರೈತರ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಮರು ಪಾವತಿ ಮುಂದೂಡಲು ಸರ್ಕಾರ ಮುಂದಾಗಿದೆ. ಅದರಂತೆ ಸಹಕಾರಿ ಬ್ಯಾಂಕ್‌ಗಳ ಸ್ತ್ರೀ ಶಕ್ತಿ ಸಂಘಗಳ ಸಾಲ ಮರು ಪಾವತಿಯೂ ಮುಂದೂಡಿ ಕೋಟ್ಯಾಂತರ ಹೆಣ್ಣು ಮಕ್ಕಳಿಗೆ ನೆರವಾಗಬೇಕು ಎಂಬುದು ಸ್ತ್ರೀ ಶಕ್ತ ಸಂಘಟನೆಗಳ ಒತ್ತಾಯವಾಗಿದೆ.
ಇದನ್ನೂ ಓದಿ:
ಕೆನರಾ ಬ್ಯಾಂಕ್‌ನಿಂದ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್; ಕೊರೊನಾ ಸಂಕಷ್ಟದಲ್ಲೂ ಸಾಲ ಮರುಪಾವತಿಗೆ ಸೂಚನೆ
‘ಕೊರೊನಾ ಒತ್ತಡ ನಿರ್ವಹಣೆಗೆ ಬ್ಯಾಂಕ್ಗಳು ಸಶಕ್ತ, ಅವೇ ತೀರ್ಮಾನ ತೆಗೆದುಕೊಳ್ಳಬಹುದು’