AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಕಿ ಕೊಲೆ ಕೇಸ್: ಸಾಯಿಸಿ ಬಲಗೈ ಹೆಬ್ಬೆಟ್ಟು ತೆಗೆದುಕೊಂಡು ಬಾ, ಹಂತಕರ ಕಾಲ್ ರೆಕಾರ್ಡ್ ವೈರಲ್

ಅವರಿಗೆಲ್ಲಾ ಇನ್ನೂ ಮುಖದ ಮೇಲೆ ಮೀಸೆ ಕೂಡ ಬಂದಿರಲಿಲ್ಲ. ಆದರೂ ಅವರಿಗೆ ಐಷಾರಾಮಿ ಬದುಕಿನ ಕನಸು, ಕೋಟಿ ಕೋಟಿ ಹಣ ಬೇಕಿನ್ನುವ ಆಸೆ. ಅದೇ ಕಾರಣಕ್ಕೆ ಯಾರೋ ಕಟ್ಟಿದ್ದ ಸುಂದರವಾದ ಮನೆಯ ಮೇಲೆ ಕಣ್ಣಾಕಿ, ಸಿನಿಮಾ ಸ್ಟೈಲ್​ನಲ್ಲಿ ಆ ಹುಡುಗರ ತಂಡ ಮನೆ ಮಾಲಿಕರನ್ನು ಕೊಂದು ಬಾಂಡ್​ ಪೇಪರ್​ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳೋ ಪ್ಲಾನ್​ ಮಾಡಿದ್ದ ಹುಡುಗರು, ಶಿಕ್ಷಕಿಯ ಕುತ್ತಿಗೆ ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರು ಮಾತನಾಡಿರುವ ಆಡಿಯೋ ಒಂದು ವೈರಲ್​ ಆಗಿದ್ದು, ಸ್ಪೋಟಕ ವಿಚಾರ  ಹೊರಬಿದ್ದಿದೆ.

ಶಿಕ್ಷಕಿ ಕೊಲೆ ಕೇಸ್: ಸಾಯಿಸಿ ಬಲಗೈ ಹೆಬ್ಬೆಟ್ಟು ತೆಗೆದುಕೊಂಡು ಬಾ, ಹಂತಕರ ಕಾಲ್ ರೆಕಾರ್ಡ್ ವೈರಲ್
ಶಿಕ್ಷಕಿ ಕೊಲೆ ಕೇಸ್: ಸಾಯಿಸಿ ಬಲಗೈ ಹೆಬ್ಬೆಟ್ಟು ತೆಗೆದುಕೊಂಡು ಬಾ, ಹಂತಕರ ಕಾಲ್ ರೆಕಾರ್ಡ್ ವೈರಲ್
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Aug 21, 2024 | 6:52 PM

Share

ಕೋಲಾರ, ಆ.21: ಜಿಲ್ಲೆಯ ಮುಳಬಾಗಿಲು(Mulabagilu) ನಗರದ ಸುಂಕು ಬಡಾವಣೆಯಲ್ಲಿ ಆಗಸ್ಟ್​.14 ರಂದು ಅಪ್ರಾಪ್ತ ಬಾಲಕರು ಸೇರಿಕೊಂಡು ಸರ್ಕಾರಿ ಶಾಲಾ ಶಿಕ್ಷಕಿಯ ದಿವ್ಯಶ್ರೀ ಎಂಬಾಕೆಯನ್ನು ಕುತ್ತಿಗೆ ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಕೊಲೆ ಮಾಡುವ ಹಿಂದಿನ ದಿನ ಕೊಲೆಯ ಮಾಸ್ಟರ್​ ಮೈಂಡ್ ರಂಜಿತ್,​ ಯುವರಾಜ್​ ಜೊತೆಗೆ ಮಾತನಾಡಿರುವ ಕಾಲ್​ ರೆಕಾರ್ಡಿಂಗ್ ವೈರಲ್​ ಆಗಿದೆ.

ಆಡಿಯೋದಲ್ಲಿ ಏನಿದೆ?

‘ಅವರನ್ನು ಸಾಯಿಸಿ ಬಲಗೈ ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ಬಾ, ಮನೆಯಲ್ಲಿರುವ ಹಣ, ಒಡವೆ, ಮೊಬೈಲ್​, ಎಲ್ಲವನ್ನೂ ದೋಚಿಕೊಂಡು ಬರುವಂತೆ ಸೂಚನೆ ನೀಡಿದ್ದಾನೆ. ಜೊತೆಗೆ ಎಲ್ಲರಿಗೂ ಐದು ಲಕ್ಷ ರೂಪಾಯಿ ಹಂಚಿಕೊಳ್ಳಬೇಕು ಅದಕ್ಕಾಗಿ ಬೇಕಾಗುವಷ್ಟು ಹಣ ಬೇಕೇ ಬೇಕು. ನನಗೆ 15 ಲಕ್ಷ ಸಾಲ ಇದೆ. ಅದನ್ನು ತೀರಿಸಿಕೊಳ್ಳಬೇಕು ಹಾಗಾಗಿ ಏನನ್ನೂ ಬಿಡಬೇಡ, ಮನೆಯ ಲಾಕರ್ ಒಡೆಯ ಬೇಡ, ಮತ್ತೆ ನಾನು ಮನೆ ರಿಪೇರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಆರೋಪಿ ರಂಜಿತ್ ಹೇಳಿರುವ ಆಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:ಶಿಕ್ಷಕಿ ಕೊಲೆಗೆ ಕಾರಣವೇನು? ಹತ್ಯೆಗೆ ಮುನ್ನ ಆರೋಪಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದ? ಮಾಹಿತಿ ಬಿಚ್ಚಿಟ್ಟ ಎಸ್ಪಿ

ಶಿಕ್ಷಕಿ ಕೊಲೆ ನಂತರ ಮತ್ತೊಂದು ಕೊಲೆಗೆ ಸಂಚು

ಇನ್ನು ಶಿಕ್ಷಕಿಯ ಕೊಲೆ ನಂತರ ಮತ್ತೊಂದು ಕೊಲೆಗೆ ಈ ಯುವಕರು ಸಂಚು ಮಾಡಿದ್ದರು. ಸದ್ಯ ಪ್ಲಾನ್​ ಎಲ್ಲವೂ ಪ್ಲಾಪ್​ ಆಗಿದ್ದು, ನಾಲ್ಕು ಜನ ಅಪ್ರಾಪ್ತರು ಸೇರಿ ಮೂವರು ಆರೋಪಿಗಳು ಪೊಲೀಸರ ಅಥಿತಿಯಾಗಿದ್ದಾರೆ.

ಆಗಿದ್ದೇನು?

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಸುಂಕು ಬಡಾವಣೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನು ಹಂತಕರ ತಂಡವೊಂದು ಬರ್ಬರವಾಗಿ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದರು. ಮನೆಯಲ್ಲಿದ್ದ ಆಕೆಯ ಮಗಳು ಸ್ವಲ್ಪದರಲ್ಲೇ ಪಾರಾಗಿದ್ದರು. ತಕ್ಷಣ ಸ್ಥಳಕ್ಕೆ ಎಸ್ಪಿ ನಿಖಿಲ್​, ಸೇರಿದಂತೆ ಎಫ್​ಎಸ್​​ಎಲ್​ ತಂಡ, ಶ್ವಾನ ದಳದ ಸಿಬ್ಬಂದಿ, ಬೆರಳಚ್ಚು ತಜ್ನರು ಹೀಗೆ ಬೇರೆ ಬೇರೆ ತಂಡ ಭೇಟಿ ನೀಡಿ, ಕೊಲೆಯಾದ ಸ್ಥಳದಲ್ಲಿ ಸಾಕ್ಷಿ ಸಂಗ್ರಹದ ಕೆಲಸಕ್ಕೆ ಮುಂದಾಗಿತ್ತು. ಈ ವೇಳೆ ಆಸ್ಪತ್ರೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಆರು ಜನ ಯುವಕರ ತಂಡವೊಂದು ಕೊಲೆಯಾದ ಸಮಯಕ್ಕೆ ಆ ರಸ್ತೆಯಲ್ಲಿ ಹೋಗುವ ದೃಶ್ಯ ಸಿಕ್ಕಿತ್ತು. ಅದೊಂದು ದೃಷ್ಯಾವಳಿಗಳನ್ನು ಹಿಡಿದುಕೊಂಡು ಪೊಲೀಸರ ಹುಡುಕಾಟ ಶುರುವಾಗಿತ್ತು.

ಇನ್ನು ಆರೋಪಿಗಳ ಸಂಬಂಧಿಕರ ಸಹಾಯದಿಂದ ಎಲ್ಲರನ್ನೂ ಬಂಧಿಸಿ ಕರೆತಂದ ಪೊಲೀಸರಿಗೆ ವಿಚಾರಣೆಗೆ ಮೊದಲೇ ಒಂದು ದೊಡ್ಡ ಆಘಾತವೇ ಎದುರಾಗಿತ್ತು. ಯಾಕಂದರೆ ಅಲ್ಲಿ ಶಿಕ್ಷಕಿಯ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಬಹುತೇಕರು ಅಪ್ರಾಪ್ತ ಬಾಲಕರಾಗಿದ್ದರು. ಇನ್ನು ಕೊಲೆ ಮಾಡಲು ಕಾರಣ ಬಾಯ್ಬಿಟ್ಟಿದ್ದ ಅವರು, ‘ಪದ್ಮನಾಭ್ ಹಾಗು ದಿವ್ಯಾಶ್ರೀ ದಂಪತಿಗಳ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ಪಡೆಯಬೇಕು, ಮನೆಯಲ್ಲಿರುವ ಹಣ ಒಡವೆಗಳನ್ನು ದೋಚಬೇಕು ಎನ್ನುವ ಆಸೆಯಲ್ಲಿ ಕೊಲೆ ಮಾಡಿರೋದಾಗಿ ಹುಡುಗರ ಬಾಯಿ ಬಿಟ್ಟಿದ್ದರು.
ಒಟ್ಟಿನಲ್ಲಿ ಮೀಸೆ ಚಿಗುರುವ ಮೊದಲೇ ಮೈ ಬಗ್ಗಿಸಿ ದುಡಿಯುವ ಮೊದಲೇ ಬೆಲೆ‌ ಬಾಳುವ ಬಂಗಲೆ ಬೇಕೆಂದು,‌ ಐಶಾರಾಮಿ ಬದುಕಬೇಕೆಂದು ಕೈಗೆ ರಕ್ತ ಮಾಡಿಕೊಂಡ ಹುಡುಗರ ಬದುಕು ಅರಳುವ ಮೊದಲೇ‌ ಕತ್ತಲೆ ಮನೆ ಸೇರಿದೆ. ಅತ್ತ ತಾನಾಯ್ತು ತನ್ನ ಬದುಕಾಯ್ತು ಎಂದುಕೊಂಡಿದ್ದ ಶಿಕ್ಷಕಿ ಈ ಹುಡುಗರ ಹುಡುಗಾಟಕ್ಕೆ ಪ್ರಾಣ ತೆತ್ತಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ