ಅಂತರಗಂಗೆ ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳಿಗೆ ‘ಅಷ್ಟದಿಗ್ಭಂಧನ’: ಪ್ರವಾಸಿಗರ ಹಾಟ್​​ ಸ್ಪಾಟ್​​ ಆಗುತ್ತಿದೆ ದಕ್ಷಿಣಕಾಶಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2023 | 8:03 PM

ರಾಜ್ಯದ ದಕ್ಷಿಣಕಾಶಿ ಎಂದು ಹೆಸರು ಪಡೆದಿರುವ ಅಂತರಗಂಗೆ ಬೆಟ್ಟ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ಸದ್ಯ ಅರಣ್ಯ ಇಲಾಖೆ ಕೈಗೊಂಡ ಅದೊಂದು ಅಷ್ಟದಿಗ್ಭಂಧನ ಯೋಜನೆಯಿಂದಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣಹಾಕಿದಷ್ಟೇ, ಅಲ್ಲದೇ ಪ್ರವಾಸಿಗರು ನಿರ್ಭಯವಾಗಿ ಓಡಾಡುವಂತಾಗಿದೆ.

ಅಂತರಗಂಗೆ ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳಿಗೆ ‘ಅಷ್ಟದಿಗ್ಭಂಧನ’: ಪ್ರವಾಸಿಗರ ಹಾಟ್​​ ಸ್ಪಾಟ್​​ ಆಗುತ್ತಿದೆ ದಕ್ಷಿಣಕಾಶಿ
ಅಂತರಗಂಗೆ ಬೆಟ್ಟ
Follow us on
ಕೋಲಾರ: ಅದು ರಾಜ್ಯದ ದಕ್ಷಿಣಕಾಶಿ ಎಂದು ಹೆಸರು ಪಡೆದಿರುವ ಪ್ರಸಿದ್ದ ಸ್ಥಳ. ಈ ಪ್ರದೇಶ ಮೂರು ಇಲಾಖೆಗಳ ವ್ಯಾಪ್ತಿಗೆ ಒಳಪಡುತ್ತವೆ ಆದರೂ, ಅಲ್ಲಿ ಅಭಿವೃದ್ದಿ ಮಾತ್ರ ಮರೀಚಿಕೆಯಾಗಿತ್ತು. ಅಂತರಗಂಗೆ ಬೆಟ್ಟ (Antara Gange Hill) ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಗೊಂಡ ಅದೊಂದು ಅಷ್ಟದಿಗ್ಭಂಧನ ಯೋಜನೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣಹಾಕಿದಷ್ಟೇ ಅಲ್ಲಾ ಪ್ರವಾಸಿಗರು ನಿರ್ಭಯವಾಗಿ ಓಡಾಡುವಂತಾಗಿದೆ.
ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಅಗಾಧ ಪ್ರಕೃತಿ ಸೌಂದರ್ಯ ಹೊಂದಿ, ಚಾರಣಿಗರನ್ನು ಕೈಬೀಸಿ ಕರೆಯುತ್ತಿರುವ ಕೋಲಾರದ ಅಂತರಗಂಗೆ ಬೆಟ್ಟ ಚಾರಣಿಗರಿಗೆ, ಸಾಹಸಿಗರಿಗೆ ಸಿದ್ದವಾಗಿ ನಿಂತಿದೆ. ಹಲವು ತಿಂಗಳುಗಳ ಹಿಂದೆ ಇದೇ ಬೆಟ್ಟದ ಕಲ್ಲುಬಂಡೆಗಳ ನಡುವೆ ಹುಡುಗ ಹುಡುಗಿಯರ ರಾಸಲೀಲೆಗಳು ಕಂಡು ಬರುತ್ತಿದ್ದವು. ಗಾಂಜಾಗಮಲ ಕಂಡು ಬರುತ್ತಿತ್ತು. ಕುಡುಕರ ಕಾಟವೂ ಹೆಚ್ಚಾಗಿತ್ತು. ಆದರೆ ಇದೆಲ್ಲವನ್ನು ಮನೆಗಂಡ ಅರಣ್ಯ ಇಲಾಖೆ ಒಂದು ಮಾಸ್ಟರ್ ಪ್ಲಾನ್​ ಮಾಡಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಡೀ ಅಂತರಗಂಗೆ ಬೆಟ್ಟಕ್ಕೆ ಮುಳ್ಳುತಂತಿ ಹಾಕಿ ಇಡೀ ಬೆಟ್ಟಕ್ಕೆ ಅಷ್ಟದಿಗ್ಭಂಧನ ಮಾಡಿದೆ.
ಬೆಟ್ಟದ ಸುತ್ತಲೂ ಸುಮಾರು 25 ಕಿ.ಮೀ ನಷ್ಟು ದೂರದ ಮುಳ್ಳುತಂತಿ ಪೆನ್ಸಿಂಗ್​ ಹಾಕಲಾಗಿದೆ. ಇದು ಕೇವಲ ಅಕ್ರಮ ಚಟುವಟಿಕೆಗಳನ್ನಷ್ಟೇ ಅಲ್ಲದ ಅರಣ್ಯ ಇಲಾಖೆ ಒತ್ತುವರಿಯನ್ನು ತಡೆಯುವಲ್ಲೂ ಸಹಕಾರಿಯಾಗಿದೆ. ಹಾಗಾಗಿ ಇಡೀ ಪ್ರದೇಶದಲ್ಲಿ ಯಾರೂ ಅಕ್ರಮವಾಗಿ ಎಲ್ಲೆಂದರಲ್ಲಿ ಪ್ರವೇಶ ಮಾಡಲು ಅವಕಾಶ ಇಲ್ಲ, ಅಕ್ರಮ ಚಟುವಟಿಕೆ ಕಡಿವಾಣ ಹಾಕಲು ಸೆಕ್ಯೂರಿಟಿ ವ್ಯವಸ್ಥೆ ಹೆಚ್ಚಿಸಿದೆ.

ಚಾರಣಿಗರಿಗೆ ಕೈ ಬೀಸಿ ಕರೆಯುತ್ತಿದೆ ಅಂತರಗಂಗೆ!

ಇದೆಲ್ಲದಕ್ಕೂ ಹೆಚ್ಚಿನದಾಗಿ ಅಂತರಗಂಗೆ ಬೆಟ್ಟದಲ್ಲಿ ಚಾರಣ ಮಾಡಲೆಂದೇ ದೂರದ ಊರುಗಳಿಂದ ಬರುತ್ತಿದ್ದ ಚಾರಣಿಗರಿಗೆ ವ್ಯವಸ್ಥೆಗಳನ್ನು ಇಲ್ಲಿ ಹೆಚ್ಚಿಸಲಾಗಿದೆ. ಚಾರಣಿಗರಿಗೆ ದಿನದ 24 ಗಂಟೆ ಕಾಲ ಆನ್​ಲೈನ್​ನಲ್ಲಿ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಚಾರಣಕ್ಕೆ ಕರೆದೊಯ್ಯಲು ನುರಿತ ಗೈಡ್​ಗಳನ್ನು ನೇಮಕ ಮಾಡಿದೆ, ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬೆಟ್ಟದ ಮೇಲಿನ ವಿಶೇಷ ಗುಹೆಗಳು, ಪ್ರಕೃತಿ ಸೌಂದರ್ಯ, ರಾಜರಕಾಲದ ಕೋಟೆ ಎಲ್ಲವನ್ನೂ ತೋರಿಸಿಕೊಂಡು ಕರೆತರಲಾಗುತ್ತದೆ. ಅಷ್ಟೇ ಅಲ್ಲದೆ ಇನ್ನು ಎರಡು ಮೂರು ತಿಂಗಳಲ್ಲಿ ಇಲ್ಲಿ ಚಾರಣಿಗರಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಮಾಡಲಾಗುತ್ತಿದೆ ಅನ್ನೋದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ಅವರ ಮಾತು.

ಚಾರಣಿಗರ ಸಂಖ್ಯೆ ಹೆಚ್ಚಳ

ಅರಣ್ಯ ಇಲಾಖೆ ಯಾವಾಗ ಇಡೀ ಅಂತರಗಂಗೆ ಬೆಟ್ಟಕ್ಕೆ ಅಷ್ಟದಿಗ್ಭಂಧನ ಮಾಡಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಪರಿಣಾಮ ಸದ್ಯ ಚಾರಣಿಗರ ಸಂಖ್ಯೆ ದುಪ್ಪಟ್ಟಾಗಿದೆ, ವಾರಕ್ಕೆ ನಿಕಷ್ಠ 250 ಕ್ಕೂ ಹೆಚ್ಚು ಜನ ಚಾರಣಿಗರು ಬರುತ್ತಿದ್ದಾರೆ. ಆನ್​ಲೈನ್​ ಮೂಲಕ ಬುಕ್ಕಿಂಗ್​ ಮಾಡಿ ಕೊಂಡು ಬರುತ್ತಿದ್ದಾರೆ. ಚಾರಣಕ್ಕೆ ಬರುವವರಿಗೆ ಒಬ್ಬ ವ್ಯಕ್ತಿಗೆ 450 ರೂಪಾಯಿ ದರ ನಿಗದಿ ಪಡಿಸಲಾಗಿದ್ದು, ಇದರಿಂದ ಸದ್ಯದ ಲೆಕ್ಕಾಚಾರದ ಪ್ರಕಾರ ಅರಣ್ಯ ಇಲಾಖೆಗೆ ಇದರಿಂದ ವಾರ್ಷಿಕವಾಗಿ ಸುಮಾರು 75 ಲಕ್ಷ ರೂ. ಆದಾಯ ಬರಲಿದೆ.
ಹಾಗಾಗಿ ಚಾರಣಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಶಿಸಲು ಅರಣ್ಯ ಇಲಾಖೆ ಮತ್ತಷ್ಟು ಸೌಲಭ್ಯಗಳನ್ನು ಮಾಡುತ್ತಿದೆ. ಚಾರಣಕ್ಕೆಂದು ಬರುವವರಿಗೆ ಇದೇ ಬೆಟ್ಟದ ಮೇಲೆ ತಂಗಲು ಬೇಕಾದ ತಾತ್ಕಾಲಿಕ ಟೆಂಟ್​ಹೌಸ್​ಗಳು ಮತ್ತು ಪೈರ್​ ಕ್ಯಾಂಪ್​ ಮಾಡಲು ವ್ಯವಸ್ಥೆ, ಶೌಚಾಲಯ, ಊಟೋಪಚಾರಕ್ಕಾಗಿ ಸಣ್ಣದಾಗಿ ಹೋಟೆಲ್​ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಮಾಡುತ್ತಿದೆ. ಇನ್ನು ಎರಡು ಮೂರು ತಿಂಗಳಲ್ಲಿ ಈ ಎಲ್ಲಾ ಯೋಜನೆಗಳನ್ನು ಮಾಡಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.

ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಬೇಕಿದೆ

ಅರಣ್ಯ ಇಲಾಖೆಯಿಂದ ಇಷ್ಟೆಲ್ಲಾ ಯೋಜನೆಗಳ ಮೂಲಕ ಅಂತರಗಂಗೆ ಪ್ರವಾಸಿ ತಾಣವನ್ನು ಅಭಿವೃದ್ದಿ ಪಡಿಸುವ ಕಾರ್ಯ ನಡೆಯುತ್ತಿದೆ. ಅರಣ್ಯ ಇಲಾಖೆ ಜೊತೆಗೆ ಸದ್ಯ ಇದೇ ಬೆಟ್ಟದ ಮುಜರಾಯಿ ಇಲಾಖೆಗೆ ಸೇರಿದ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯವಿದೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಿದೆ.
ಈ ಸಲುವಾಗಿ ಅರಣ್ಯ ಇಲಾಖೆ ಜೊತೆಗೆ ಕೈಜೋಡಿಸಿ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಸೌಲಭ್ಯಗಳನ್ನು ಮಾಡಿದ್ದೇ ಅದಲ್ಲಿ ಅಂತರಗಂಗೆ ಬೆಟ್ಟದಲ್ಲಿ ಪ್ರವಾಸಿಗರ ತುಂಬಿ ತುಳುಕೋದರಲ್ಲಿ ಯಾವುದೇ ಅನುಮಾನವಿಲ್ಲ. ಒಟ್ಟಾರೆ ಎರಡು ದಶಕಗಳ ನಂತರ ಅರಣ್ಯ ಇಲಾಖೆಯ ವಿಶೇಷ ಕಾಳಜಿಯಿಂದಾಗಿ ಅಂತರಗಂಗೆ ಬೆಟ್ಟಕ್ಕೆ ಹೊಸ ಕಳೆ ಬಂದಿದೆ.
ಇಲಾಖೆ ಅಂದುಕೊಂಡಂತೆ ಇನ್ನಷ್ಟು ಸೌಲಭ್ಯಗಳನ್ನು ಮಾಡಿದ್ದೇ ಆದಲ್ಲಿ ಅಂತರಗಂಗೆ ಬೆಟ್ಟ ಪ್ರವಾಸಿಗರ ಹಾಟ್​ ಸ್ಪಾಟ್​ ಆಗಲಿದೆ. ಅದರ ಜೊತೆಗೆ ಸರ್ಕಾರಕ್ಕೆ ಆದಾಯ ಬರುವ ಜೊತೆಗೆ ಜಿಲ್ಲೆಯ ಅಭಿವೃದ್ದಿಗೂ ಸಹಕಾರಿ ಆಗುವುದರಲ್ಲಿ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:01 pm, Wed, 12 July 23