ಕೋಲಾರ ಜೆಡಿಎಸ್ ಪಾಲಾದರೂ ಮುನಿಸಿಕೊಳ್ಳದ ಮುನಿಸ್ವಾಮಿ, ಬೇರೆ ಸ್ಥಾನಮಾನದ ವಿಶ್ವಾಸದಲ್ಲಿ

| Updated By: ರಮೇಶ್ ಬಿ. ಜವಳಗೇರಾ

Updated on: Mar 18, 2024 | 7:30 PM

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ತೀವ್ರ ಕುತೂಹಲ ಮೂಡಿಸಿದ್ದ ಜೆಡಿಎಸ್-ಬಿಜೆಪಿ ಮೈತ್ರಿ ಸೀಟು ಹಂಚಿಕೆ ಅಂತಿಮವಾಗಿದೆ. ಇನ್ನೇನು ಅಧಿಕೃತಘೋಷಣೆಯೊಂದೇ ಬಾಕಿ ಇದೆ. 28 ಕ್ಷೇತ್ರಗಳ ಪೈಕಿ ಜೆಡಿಎಸ್​ ಐದಾರು ಕ್ಷೇತ್ರಗಳು ನೀಡುವಂತೆ ಬೇಡಿಕೆ ಇಟ್ಟಿತ್ತು. ಆದ್ರೆ, ಬಿಜೆಪಿ ಹೈಕಮಾಂಡ್ ಜೆಡಿಎಸ್​ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಲು ತೀರ್ಮಾನಿಸಿದೆ. ಇನ್ನು ಟಿಕೆಟ್ ಕೈತಪ್ಪುತ್ತಿರುವುದಕ್ಕೆ ಬಿಜೆಪಿ ಹಾಲಿ ಸಂಸದ ಯಾವುದೇ ಬೇಸರ ಮಾಡಿಕೊಳ್ಳದೇ ಹೋದರೆ ಹೋಗಲಿ ಬಿಡಿ ಎನ್ನುವ ಮಾತುಗಳನ್ನಾಡಿದ್ದಾರೆ.

ಕೋಲಾರ ಜೆಡಿಎಸ್ ಪಾಲಾದರೂ ಮುನಿಸಿಕೊಳ್ಳದ ಮುನಿಸ್ವಾಮಿ, ಬೇರೆ ಸ್ಥಾನಮಾನದ ವಿಶ್ವಾಸದಲ್ಲಿ
ಮುನಿಸ್ವಾಮಿ
Follow us on

ಕೋಲಾರ, (ಮಾರ್ಚ್ 18): ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಸೀಟು ಹಂಚಿಕೆಯ (BJP-JDS Seat Sharing) ಅಂತಿಮ ಚಿತ್ರಣ ಹೊರಬಿದ್ದಿದೆ. ಜೆಡಿಎಸ್‌ ರಾಜ್ಯದ ಹಾಸನ,‌ ಮಂಡ್ಯ ಮತ್ತು ಕೋಲಾರ(Kolar Loksabha constituency ) ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದೆ. ಈ ಬಗ್ಗೆ ಸ್ವತಃ ಎಚ್​ಡಿ ಕುಮಾರಸ್ವಾಮಿ ಇಂದು(ಮಾರ್ಚ್ 18) ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಹಾಸನ, ಮಂಡ್ಯ ಜೆಡಿಎಸ್​ ಪಾಲಾಗುವುದು ಖಚಿತವಾಗಿತ್ತು. ಇದೀಗ ಜೆಡಿಎಸ್‌ ಕೋಲಾರದಿಂದಲೂ ಕಣಕ್ಕಿಳಿಯಲಿದೆ ಎಂದು ಎಚ್​ಡಿಕೆ ಘೋಷಿಸಿದ್ದಾರೆ. ಇದಕ್ಕೆ ಕೋಲಾರ ಹಾಲಿ ಸಂಸದ ಮುನಿಸ್ವಾಮಿ(BJP MP Muniswamy )ಮುನಿಸಿಕೊಳ್ಳದೇ ಅವರನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಇನ್ನು ಜೆಡಿಎಸ್ ಕೋಲಾರ ಲೋಕಸಭಾ ಕ್ಷೇತ್ರ ತಮ್ಮದೆಂದು ಹೇಳುತ್ತಿದ್ದಂತೆ ಕೋಲಾರದ ಹಾಲಿ ಸಂಸದ ಮುನಿಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಇತ್ತೀಚಿನ ದಿನಗಳಲ್ಲಿ ನನಗೆ ಟಿಕೆಟ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಟ್ಟೆ ಹೋಲಿಸಿದ್ದೇನೆ, ಫೋಟೋ ಶೂಟ್ ಮಾಡಿಸಿದ್ದಾರೆ ಅಂತ ಹೇಳ್ತಿದ್ದಾರೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದ್ರು ನಾನು ಕೆಲಸ ಮಾಡುತ್ತೇನೆ. NDA ಮೈತ್ರಿ ಕೂಟ ಗೆಲ್ಲಬೇಕು. ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕೋಲಾರ ಜೆಡಿಎಸ್ ಪಾಲಾದರೂ ಸಹ ಯಾವುದೇ ಬೇಸರ ಇಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಮೈತ್ರಿಯಲ್ಲಿ ಬಿರುಕು? ಬಿಜೆಪಿ ನಡೆಗೆ ಜೆಡಿಎಸ್​ ನಾಯಕರು ಅಸಮಾಧಾನ, ಇಲ್ಲಿದೆ ಕೋರ್ ಕಮಿಟಿ ಸಭೆಯ ಇನ್​ಸೈಡ್​​ ಡೀಟೈಲ್ಸ್​​!

ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದ

6 ತಿಂಗಳಿಂದ ಬಿಜೆಪಿ ಹೈಕಮಾಂಡ್ ನಿಂದ ಮೂರ್ನಾಲ್ಕು ಸರ್ವೇ ಮಾಡಲಾಗಿದೆ. ಯಾರಿಗೆ ಟಿಕೇಟ್ ನೀಡಿದ್ರೆ ಗೆಲ್ಲುತ್ತಾರೆ ಅಂತ ನಮ್ಮ ಹೈಕಮಾಂಡ್ ಗೂ ತಿಳಿದಿದೆ. 2019 ರ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಮತಗಳಿಂದ ಗೆದ್ದಿದ್ದೇನೆ ಅಂತ ಜೆಡಿಎಸ್ ನ ಕೆಲವರು ಹೇಳಿದ್ದಾರೆ. ದೇಶ ಭಕ್ತರು ನನಗೆ ಮತ ನೀಡಿ, ಮೋದಿನ ಪ್ರಧಾನಿ ಮಾಡಿದ್ದಾರೆ. ಹೇಳಿಕೆ ನೀಡಿರುವ ಜೆಡಿಎಸ್ ನ ನಟರಾಜ್ ಇದನ್ನ ತಿಳಿದುಕೊಳ್ಳಬೇಕು, ಇನ್ಮುಂದೆ ನೋಡಿ ಮಾತನಾಡಬೇಕು. ಕುಮಾರಣ್ಣ ಹಾಗೂ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದ ಎಂದು ಸ್ಪಷ್ಟಪಡಿಸಿದ ಮುನಿಸ್ವಾಮಿ, ನಮ್ಮ ಕಾರ್ಯಕರ್ತರು ಮೈತ್ರಿ ಬಗ್ಗೆ ಏನೂ ಮಾತನಾಡಬಾರದು ಎಂದು ಕರೆ ನೀಡಿದರು.

ಮೈತ್ರಿ ಅಭ್ಯರ್ಥಿ ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲ್ಲಲಿದ್ದಾರೆ

ಕುಮಾರಣ್ಣ ಹಾಗೂ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ನಮ್ಮ ಕಾರ್ಯಕರ್ತರು ಮೈತ್ರಿ ಬಗ್ಗೆ ಏನೂ ಮಾತನಾಡಬಾರದು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತುಂಬಾ ಬಲವಾಗಿದೆ. ಕೊನೆ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ರು ಸಹ ನನಗೆ 7 ಲಕ್ಷ ಮತ ಬಂದಿದೆ. ನಾವೆಲ್ಲ ಈಗ ಎನ್‌ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡ್ತೀವಿ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿ ನಾವೆಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಮೋದಿ ಪರವಾಗಿ ಮತ ಹಾಕುತ್ತಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದರು.

ಹೈಕಮಾಂಡ್ ನನ್ನ ಸ್ಪರ್ಧೆ ಬೇಡ ಅಂದರೆ ನಾನು ಸ್ಪರ್ಧೆ ಮಾಡುವುದಿಲ್ಲ. ಜೆಡಿಎಸ್ ನವರು ಸಹ ನಮ್ಮ ಜೊತೆ ಚುನಾವಣೆ ಪ್ರಚಾರ ಆರಂಭ ಮಾಡಬೇಕು. NDA ಮೈತ್ರಿ ಕೂಟ 400 ರಿಂದ 415 ಸೀಟು ಗೆಲ್ಲಲಿದೆ. ಟಿಕೆಟ್ ಸಿಗದವರಿಗೆ ಮುಂದೆ ಸ್ಥಾನಮಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.