ಮೈತ್ರಿಯಲ್ಲಿ ಬಿರುಕು? ಬಿಜೆಪಿ ನಡೆಗೆ ಜೆಡಿಎಸ್ ನಾಯಕರು ಅಸಮಾಧಾನ, ಇಲ್ಲಿದೆ ಕೋರ್ ಕಮಿಟಿ ಸಭೆಯ ಇನ್ಸೈಡ್ ಡೀಟೈಲ್ಸ್!
Lok Sabha Election 2024: ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸರ್ವೆಗಳೂ ಸಹ ಬಿಜೆಪಿ-ಜೆಡಿಎಸ್ ಕರ್ನಾಟಕದಲ್ಲಿ 23 ಸ್ಥಾನ ಗೆಲ್ಲುತ್ತೆಂಬ ಭವಿಷ್ಯ ನುಡಿದಿವೆ. ಆದ್ರೆ, ಚುನಾವಣೆ ಕಾವೇರುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮಧ್ಯೆ ಹೊಂದಾಣಿಕೆ ಸಮಸ್ಯೆ ಎದುರಾಗಿದೆ. ಬಿಜೆಪಿಯ ಏಕಪಕ್ಷೀಯ ನಡೆಗೆ ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದು, ದೇವೇಗೌಡ-ಕುಮಾರಸ್ವಾಮಿ ಮಿಂದೆಯೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಾಗಾದ್ರೆ, ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು, (ಮಾರ್ಚ್ 18): ಲೋಕಸಭೆ ಚುನಾವಣೆಯಲ್ಲಿ ( Loksabha Elections 2024) ಕರ್ನಾಟಕದ(Karnataka) 28 ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಕೇವಲ 3 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ. ಈ ಮೊದಲ ಹಾಸನ, ಮಂಡ್ಯ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಬಿಜೆಪಿ ಹೇಳಿತ್ತು. ಆದ್ರೆ, ಇದಕ್ಕೆ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು, ಕೇವಲ ಎರಡೇ ಸೀಟಿಗೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಜೆಡಿಎಸ್ ಪಕ್ಷದ ಕೆಲ ನಾಯಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂತಿಮವಾಗಿ ಇದೀಗ ಬಿಜೆಪಿ ತನ್ನ ಮಿತ್ರ ಪಕ್ಷ ಜೆಡಿಎಸ್ಗೆ ಕೋಲಾರ, ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಬಿಟ್ಟುಕೊಡಲು ತೀರ್ಮಾನಿಸಿದೆ. ಈ ಮೂವರು ಕ್ಷೇತ್ರಗಳನ್ನು ತಮಗೆ ನೀಡಿರುವುದನ್ನು ಸ್ವತಃ ಕುಮಾರಸ್ವಾಮಿ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ನಾಯಕರ ಮುಂದೆ ಘೋಷಣೆ ಮಾಡಿದ್ದಾರೆ. ಇನ್ನು ಇದೇ ವೇಳೆ ಕೆಲ ನಾಯಕರು ಬಿಜೆಪಿ ನಡೆಗೆ ಬೇಸರ ಹೊರಹಾಕಿದ್ದಾರೆ.
ಕೋರ್ ಕಮಿಟಿ ಸಭೆಯ ಇನ್ ಸೈಡ್ ವಿವರ
ಲೋಕಸಭೆ ಚುನಾವಣೆ ಸಂಬಂಧ ಇಂದು (ಮಾರ್ಚ್ 18) ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೆಲ ನಾಯಕರು ಬಿಜೆಪಿಯ ಏಕಪಕ್ಷೀಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಆರಂಭದಲ್ಲಿಯೇ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ . ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ. ಏಕಪಕ್ಷೀಯವಾಗಿ ಇಪ್ಪತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಜೆಡಿಎಸ್ ವರಿಷ್ಠರನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು. ಅಲ್ಲದೇ ಆರಂಭದಲ್ಲಿಯೇ ಹೀಗಾದರೆ ಮುಂದೇನು? ಇದು ಪಕ್ಷಕ್ಕೆ ಮಾರಕ ಎಂದು ಮುಖಂಡರು ಕಿಡಿಕಾರಿದ್ದಾರೆ.
ರಾಜ್ಯದ 18 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ಜೆಡಿಎಸ್ ಗೆ ಇದೆ. 3% ರಿಂದ 4% ಜೆಡಿಎಸ್ ಮತ ಬಂದರೆ 18 ಕ್ಷೇತ್ರಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಭಾಷಣ ಮಾಡಿಕೊಂಡು ಹೋಗುತ್ತಿದ್ದಾರೆ. ಆದ್ರೆ, ನಮ್ಮ ಪಕ್ಷವನ್ನು ಸ್ಥಳೀಯ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ಸಭೆಗಳಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಕರೆಯಬೇಕಲ್ಲವೇ? ಎಂದು ಪ್ರಶ್ನೆ ಮಾಡಿದರು.
ಕಲಬುರಗಿ ಸಭೆಗೂ ಜೆಡಿಎಸ್ ಸ್ಥಳೀಯ ಮುಖಂಡರನ್ನು ಕರೆದಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಶಾಸಕರು, ಮಾಜಿ ಶಾಸಕರಿಗೆ ಮಾಹಿತಿ ಕೊಟ್ಟಿಲ್ಲ. ಶಿವಮೊಗ್ಗ ಸಭೆಗೂ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಕರೆಯಬಹುದಿತ್ತು, ಶಿವಮೊಗ್ಗ ಸಭೆಗೂ ನಮ್ಮ ನಾಯಕರನ್ನು ಕರೆದಿಲ್ಲ ಎಂದು ಮುಖಂಡರು ಸಿಡಿಮಿಡಿಗೊಂಡರು.
ನಮ್ಮ ಪಕ್ಷವನ್ನು ಒತ್ತೆ ಇಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ಆ ಬಗ್ಗೆ ಎರಡನೇ ಪ್ರಶ್ನೆ ಇಲ್ಲ. ಬಿಜೆಪಿಯಿಂದ ಈ ರೀತಿಯ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದೆ.ಕೇವಲ ಎರಡು ಸೀಟಿಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಕೋಲಾರ ಜೆಡಿಎಸ್ ಪಾಲಿನ ಕ್ಷೇತ್ರ ಎಂದು ಮೊದಲಿನಿಂದ ಹೇಳಿದ್ದೀರಿ ನೀವು ಇವತ್ತೇ ಕೋಲಾರ ಅಭ್ಯರ್ಥಿಯನ್ನು ಘೋಷಣೆ ಮಾಡಿ. ಇಂಥ ಅನಿಶ್ಚಿತತೆಯಿಂದ ಪಕ್ಷಕ್ಕೆ ನಷ್ಟ ಆಗುತ್ತದೆ ಎಂದು ದೂರಿದ್ದಾರೆ.
ಕೋಲಾರ, ಹಾಸನ, ಮಂಡ್ಯ ಸೇರಿದಂತೆ 5 ಕ್ಷೇತ್ರಗಳು ಜೆಡಿಎಸ್ ಗೆ ಬರುತ್ತವೆ ಎಂದು ನೀವು ಹೇಳಿದ್ದಿರಿ. ಆದರೆ, ಈಗ ನೋಡಿದರೆ ಬಿಜೆಪಿ 2 ಸೀಟಿಗೆ ಬಂದು ನಿಂತಿದೆ ಎಂದು ಲೋಕಸಭಾ ಚುನಾವಣೆಯ ಉಸ್ತುವಾರಿಗಳು, ಕುಮಾರಸ್ವಾಮಿ ಅವರನ್ನು ಕೇಳಿದರು. ಈ ವೇಳೆ ಮುಖಂಡರು, ಉಸ್ತುವಾರಿಗಳಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸಮಾಧಾನ ಹೇಳಿದರು.
ಅಲ್ಲದೇ ಈ ಬಗ್ಗೆ ಇನ್ನೊಮ್ಮೆ ಅಮಿತ್ ಶಾ, ನಡ್ಡಾ ಅವರ ಜತೆ ಮಾತನಾಡುವಂತೆ ದೇವೇಗೌಡ ಅವರು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ. ಇಲ್ಲವಾದರೆ ನಾನೇ ದೆಹಲಿಗೆ ಹೋಗಿ ಬರುತ್ತೇನೆ ಎಂದು ದೇವೇಗೌಡ ಮುಖಂಡರುಗಳಿಗೆ ಹೇಳಿ ಸಮಾಧಾನಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ