ಸಿದ್ದರಾಮಯ್ಯ ಸ್ಪರ್ಧೆ ಹಿನ್ನಲೆ ಕೋಲಾರದಲ್ಲಿ ಡಲ್ ಆಯ್ತಾ ಬಿಜೆಪಿ.!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಅನ್ನೋ ಕಾರಣಕ್ಕೆ ಕೋಲಾರ ರಾಜ್ಯದಲ್ಲಿ ಸದ್ಯಕ್ಕೆ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ಆರಂಭಿಸಿದ್ರೆ, ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಜೆಡಿಎಸ್ ಹಲವು ಕಾರ್ಯಕ್ರಮಗಳನ್ನ ಮಾಡುತ್ತಿದೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿ ಥಂಡಾ ಹೊಡೆದಿದೆ.
ಕೋಲಾರ: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಚುನಾವಣಾ ಕಣ ರಂಗೇರಿದೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಅನ್ನೋ ಕಾರಣಕ್ಕೆ ಕೋಲಾರ ರಾಜ್ಯದಲ್ಲಿ ಸದ್ಯಕ್ಕೆ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ರೈತ ಮಹಿಳಾ ಸಮಾವೇಶ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನ ಮಾಡುತ್ತಾ ಮತದಾರರ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ಕೂಡ ಅಲ್ಪಸಂಖ್ಯಾತರ ಸಮಾವೇಶ ಮಾಡಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಬ್ಬರದ ನಡುವೆ ಬಿಜೆಪಿ ಥಂಡಾ ಹೊಡೆದಿದೆ. ಯಾವುದೇ ಕಾರ್ಯಕ್ರಮಗಳ ಅಬ್ಬರ ಇಲ್ಲದೆ ಡಲ್ ಆಗಿದೆ. ಈಗಾಗಲೇ ಅಭ್ಯರ್ಥಿಗಳನ್ನ ಫೈನಲ್ ಮಾಡಿ ಚುನಾವಣೆ ರಣ ಕಹಳೆ ಮೊಳಗಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕೋಲಾರ ಕ್ಷೇತ್ರದಲ್ಲಿ ಸಖತ್ ಆಕ್ಟೀವ್ ಆಗಿದೆ. ಆದ್ರೆ ಅಭ್ಯರ್ಥಿ ಫೈನಲ್ ಆಗದ ಹಿನ್ನೆಲೆ ಕೋಲಾರ ಕ್ಷೇತ್ರ ಸೇರಿದಂತೆ ಜಿಲ್ಲೆಯ 6 ಕ್ಷೇತ್ರಗಳಲ್ಲೂ ಆಡಳಿತರೂಢ ಬಿಜೆಪಿ ವೀಕ್ ಆಗಿದೆ.
ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಈ ಮೊದಲಿದ್ದ ಅಬ್ಬರ, ಉತ್ಸಾಹ ಕಡಿಮೆಯಾದಂತೆ ಕಂಡು ಬರುತ್ತಿದೆ. ಆದರೂ ಒಂದು ಕಾಲದ ತಮ್ಮ ಗುರುವನ್ನ ಮಣಿಸಲು ಹೊಸ ತಂತ್ರಗಳನ್ನ ಹೆಣೆಯುತ್ತಿದ್ದಾರಾ ಅನ್ನೋ ಅನುಮಾನ ಕೂಡಾ ಕಾಡುತ್ತಿದೆ. ಇಲ್ಲಾ ಸಿದ್ದು ಎದುರು ವರ್ತೂರು ಪ್ರಕಾಶ್ ಸೇರಿದಂತೆ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ಸೈಲೆಂಟ್ ಆದ್ರಾ ಅನ್ನೋ ಮಾತು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಕೋಲಾರ ಕ್ಷೇತ್ರದ ಬಿಜೆಪಿ ನಾಯಕರು ನಾವು ಸಹ ಭೂತ್ ಮಟ್ಟದಲ್ಲಿ ಗ್ರಾಮಗಳಿಗೆ ತೆರಳಿ ಸಂಘಟನೆ ಮಾಡುತ್ತಿದ್ದೇವೆ. ನಮ್ಮದು ಯಾವುದೆ ಅಬ್ಬರ, ದೊಡ್ಡ ಕಾರ್ಯಕ್ರಮಗಳಿಲ್ಲದೆ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎನ್ನುವುದು ಬಿಜೆಪಿ ನಾಯಕರ ಮಾತು.
ಇನ್ನು ಬಿಜೆಪಿ ಥಂಡಾ ಹೊಡಿತಾ ಇಲ್ಲಾ ಕಾಂಗ್ರೆಸ್ ಹಾಗೂ ಜೆಡಿಎಸ್ನ್ನು ಮಣಿಸಲು ರಣ ತಂತ್ರದೊಂದಿಗೆ ಅಖಾಡಕ್ಕೆ ಇಳಿಯುತ್ತಾ ಅನ್ನೋ ಅನುಮಾನ ಕೂಡಾ ಇದೆ. ಚುನಾವಣಾ ಕಾವೇರುತ್ತಿರುವ ಸನ್ನಿವೇಶದಲ್ಲಿ ಬಿಜೆಪಿ ಕನಿಷ್ಟ ಕಾರ್ಯಕರ್ತರನ್ನ ಹಾಗೂ ಮುಖಂಡರನ್ನ ಪ್ರೋತ್ಸಾಹಿಸಲು ಕಾರ್ಯಕ್ರಮಗಳನ್ನ ರೂಪಿಸಬೇಕಿತ್ತು. ಆದ್ರೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಬೆನ್ನಲ್ಲೇ ಬಿಜೆಪಿಗೆ ಭಯ ಬಂತಾ ಅನ್ನೋ ಮಾತು ಕೇಳಿಬಂದಿದೆ. ಇದರ ಜೊತೆಗೆ ಎರಡು ದಿನಗಳಿಂದ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಕಾಣಸುತ್ತಿಲ್ಲ ಅನ್ನೋ ಗುಸು ಗುಸು ಮಾತುಗಳು ಕೋಲಾರದ ಎಲ್ಲೆಡೆ ಕೇಳಿ ಬರುತ್ತಿದೆ. ಆದ್ರೆ ವಿವಿಧ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಡುತ್ತಿರುವ ಜೆಡಿಎಸ್, ಆಡಳಿತರೂಢ ಬಿಜೆಪಿ ಸೈಲೆಂಟ್ ಹಿಂದೆ ಹಲವು ಅನುಮಾನಗಳು ಮೂಡಿದೆಯಲ್ಲದೆ ಕೋಲಾರದಲ್ಲಿ ಬಿಜೆಪಿ ನಡೆ ನಿಗೂಢವಾಗಿದೆ.
ಇನ್ನು ನಾವು ಸಖತ್ ಆಕ್ಟೀವ್ ಆಗಿದ್ದೇವೆ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಸಾಕಷ್ಟು ಕಾರ್ಯಕ್ರಮಗಳನ್ನ ಮಾಡುತ್ತಾ ಜನರ ಬಳಿಗೆ ತೆರಳುತ್ತಿದ್ದೇವೆ. ಅಲ್ಲದೆ ನಮ್ಮದು ವ್ಯಕ್ತಿಯ ಆಧಾರದ ಮೇಲೆ ನಡಯುವ ಚುನಾವಣೆಯಲ್ಲ, ನಮ್ಮದು ಪಕ್ಷದ ಆಧಾರದ ಮೇಲೆ ನಡೆಯುವ ಚುನಾವಣೆ, ನಮ್ಮ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ ಎನ್ನುವ ಬಿಜೆಪಿ ಜಿಲ್ಲಾಧ್ಯಕ್ಷರು ಸಿದ್ದರಾಮಯ್ಯ ಅವರಿಗೆ ಭಯ ಬಂದಿದೆ. ಇಡೀ ರಾಜ್ಯ ಸುತ್ತಬೇಕಿದ್ದ ನಾಯಕರು ಪದೇ ಪದೇ ಕೋಲಾರಕ್ಕೆ ಬರುತ್ತಿದ್ದಾರೆ ಎಂದು ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ:ಕರಪತ್ರ ಅಭಿಯಾನ ಬಳಿಕ, ಪೋಸ್ಟರ್ ಅಭಿಯಾನ: ಕೋಲಾರದಲ್ಲಿ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು
ಒಟ್ಟಾರೆ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಅಬ್ಬರದ ಚುನಾವಣಾ ಪ್ರಚಾರ ಆರಂಭ ಮಾಡಿ, ಭರವಸೆಗಳನ್ನ ನೀಡುತ್ತಾ ಚುನಾವಣಾ ಅಖಾಡಕ್ಕೆ ದುಮುಕಿದ್ದಾರೆ. ಆದ್ರೆ ಡಬಲ್ ಇಂಜಿನ್ ಸರ್ಕಾರದ ಬಿಜೆಪಿ ನಾಯಕರು ಮಾತ್ರ ಹತ್ತು ಹಲವು ಗೊಂದಲದಲ್ಲೆ ಇನ್ನೂ ಕಾಲ ಕಳೆಯುತ್ತಿರುವುದಂತು ಸುಳ್ಳಲ್ಲ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ