ಕೋಲಾರ, ಮೇ 16: ಭಾರತ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳುಹಿಸಿದ್ದು ಬಿಟ್ಟರೆ ಏನೂ ಮಾಡಿಲ್ಲ. 26 ಜನ ಮಹಿಳೆಯರ ಅರಶಿನ ಕುಂಕುಮಕ್ಕೆ ಬೆಲೆ ಇಷ್ಟೆಯಾ ಎಂದು ಕೋಲಾರದಲ್ಲಿ (Kolar) ಕಾಂಗ್ರೆಸ್ ಶಾಸಕ (Congress MLA) ಕೊತ್ತೂರು ಮಂಜುನಾಥ್ (Kothur G Manjunath) ಪ್ರಶ್ನಿಸಿದ್ದಾರೆ. ಭಾರತೀಯ ಸೇನೆಯ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆ ಬಗ್ಗೆ ಕೊತ್ತೂರು ಮಂಜುನಾಥ್ ನೀಡಿರುವ ಹೇಳಿಕೆಗೆ ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಕೋಲಾರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಹೊಡೆದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲಾ ಅಂದರೆ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು, ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ ಎಂದರು.
ಆಪರಷೇನ್ ಸಿಂದೂರ್ ಹೆಸರಿನಲ್ಲಿ ಅಷ್ಟು ಜನ, ಇಷ್ಟು ಜನ ಉಗ್ರರನ್ನು ಹೊಡೆದಿದ್ದೇವೆ ಎನ್ನುತ್ತಾರೆ. ಆದರೆ, ಇಲ್ಲಿಯವರೆಗೂ ಎಲ್ಲೂ ದೃಢವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ಟರೆ ಎಲ್ಲೂ ನೋಡಿಲ್ಲ ಎಂದು ಅವರು ಹೇಳಿದರು.
ನಮ್ಮ ಊರಿನಲ್ಲಿ ಬಂದು ನಮ್ಮನ್ನು ಹೊಡೆದು ತಪ್ಪಿಸಿಕೊಂಡು ಹೋಗುತ್ತಾರೆ ಎಂದರೆ ಅದು ನಮ್ಮ ಭದ್ರತಾ ವೈಪಲ್ಯ. ಗಡಿಯಲ್ಲಿ ಸೇನೆ ಏನ್ ಮಾಡುತ್ತಾ ಇತ್ತು? ಇವರೆ ಏನಾದರೂ ಪ್ಲಾನ್ ಮಾಡಿದರಾ? ಯಾವುದು ನಿಜ ಯಾವುದು ಸುಳ್ಳು ನಮಗೆ ಗೊತ್ತಾಗುತ್ತಿಲ್ಲ. ಆದರೆ, ಭಾರತ ಕೊಟ್ಟ ಪ್ರತ್ಯುತ್ತರ ಸಮಾಧಾನಕರವಾದ ಕ್ರಮ ಅಲ್ಲ. ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ಒಳ್ಳೆಯ ಅವಕಾಶ ಇತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದರು.
ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು
ಕದನ ವಿರಾಮ ಎಂದು ಹೇಳುವ ನೀವು (ಕೇಂದ್ರ ಬಿಜೆಪಿ ಸರ್ಕಾರ) ಇಸ್ರೇಲ್ ನೋಡಿ ಕಲಿಯಬೇಕಿದೆ. ಇಸ್ರೇಲ್ ಯಾರ ಮಾತನ್ನೂ ಕೇಳಿಲ್ಲ. ಉಕ್ರೇನ್ಗೆ ರಷ್ಯಾ ಹೇಗೆ ಹೊಡೆಯಿತು? ಸರ್ವ ನಾಶ ಮಾಡಿ ಬಿಟ್ಟರು. ಆದರೆ, ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ವಾ? ಆ ಉಗ್ರರನ್ನು ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡಬೇಕಿತ್ತು. ಅಮೇರಿಕಾದ ಒಬ್ಬ ಪ್ರಜೆಯನ್ನು ಮುಟ್ಟಿದ್ದರೆ ಅವರು ಬಿಡುತ್ತಿದ್ದರಾ ಎಂದು ಮಂಜುನಾಥ್ ಪ್ರಶ್ನಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 am, Fri, 16 May 25