Cultural Harmony: ಕೋಲಾರದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್​ ಸ್ಥಾಪಿತ ಗಣೇಶನಿಗೆ ಅಕ್ಬರ್​ ಗಾನ -ಸೌಹಾರ್ದತೆ ಮೆರೆದು ಮಾದರಿಯಾದ ಸಂಘಟನೆಗಳು!

Kolar Ganesh Chaturthi: ಹಲವು ವರ್ಷಗಳಿಂದ ಕೋಲಾರದ ಎಂ.ಜಿ.ರಸ್ತೆಯಲ್ಲಿ ವಿಹಿಂಪ, ಭಜರಂಗದಳ ಹಾಗೂ ಲೋಕಮಾನ್ಯ ತಿಲಕ್​ ವಿನಾಯಕ ವಿಸರ್ಜನಾ ಸಮಿತಿ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ವಿಶೇಷವಾಗಿ ಕೋಮು ಸೌಹಾರ್ದತೆ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿವೆ.

Cultural Harmony: ಕೋಲಾರದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್​ ಸ್ಥಾಪಿತ ಗಣೇಶನಿಗೆ ಅಕ್ಬರ್​ ಗಾನ -ಸೌಹಾರ್ದತೆ ಮೆರೆದು ಮಾದರಿಯಾದ ಸಂಘಟನೆಗಳು!
ಕೋಲಾರದಲ್ಲಿ ಭಜರಂಗದಳ-ವಿಶ್ವಹಿಂದೂ ಪರಿಷತ್​ ಗಣೇಶನಿಗೆ ಅಕ್ಬರ್​ ಗಾನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 20, 2023 | 7:49 PM

ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ, ಎಲ್ಲರ ಪ್ರೀತಿಯ, ನೆಚ್ಚಿನ ದೈವ ಗಣೇಶ ಏರಿಯಾ ಏರಿಯಾಗಳಲ್ಲಿ ವಿವಿಧ ರೂಪಗಳಲ್ಲಿ ಸದ್ದು ಮಾಡುತ್ತಿದ್ದಾನೆ. ಅದೇ ರೀತಿ ಕೋಲಾರದಲ್ಲೂ ಹಲವು ಬಡಾವಣೆಗಳಲ್ಲಿ, ಹಲವು ಏರಿಯಾಗಳಲ್ಲಿ ವಿವಿಧ ಗಣೇಶಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಭಕ್ತಾದಿಗಳು ಸಂಭ್ರಮಿಸುತ್ತಿದ್ದಾರೆ. ಇದರ ನಡುವೆ ಕೋಲಾರದ ಎಂ.ಜಿ. ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಹಲವು ಕಾರಣಗಳಿಂದಾಗಿ ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ಕಳೆದ ಹಲವು ವರ್ಷಗಳಿಂದ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ವಿಶ್ವಹಿಂದೂ ಪರಿಷತ್​, ಭಜರಂಗದಳ, ಹಾಗೂ ಲೋಕಮಾನ್ಯ ತಿಲಕ್​ ವಿನಾಯಕರ ವಿಸರ್ಜನಾ ಸಮಿತಿ ವತಿಯಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರತಿ ವರ್ಷವೂ ವಿವಿಧ ರೀತಿಯ ಗಣೇಶಗಳನ್ನ ಪ್ರತಿಷ್ಠಾಪನೆ ಮಾಡಿ ಮೂರು ದಿನಗಳ ಕಾಲ ಪೂಜಿಸಿ ನಂತರ ವಿಸರ್ಜನೆ ಮಾಡೋದು ವಾಡಿಕೆ.

ಮೂರು ದಿನಗಳ ಕಾಲ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಜನರನ್ನು ರಂಜಿಸಿ, ಗಣೇಶನಿಗೆ ವಂದಿಸಿ, ಸಾವಿರಾರು ಜನರನ್ನು ಒಟ್ಟಾಗಿ ಸೇರಿಸಿ ಪ್ರಸಾದ ಕೊಟ್ಟು, ಹಬ್ಬ ಆಚರಣೆ ಮಾಡೋದು ಸಂಪ್ರದಾಯ. ಆದರೆ ಈ ವರ್ಷ ಗಣೇಶ ಹಬ್ಬದ ಆಚರಣೆ ಅದರಲ್ಲಿ ವಿಶೇಷವಾಗಿ ಅದರಲ್ಲೂ ಕೋಮು ಸೌಹಾರ್ದತೆ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ಎರಡನೇ ದಿನ ಪ್ರತಿ ವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಹಾಡುಗಾರ ಅಕ್ಬರ್​ ಅವರಿಂದ ಹಾಡುಗಾರಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಪ್ರತಿಷ್ಠಾಪನೆ ಮಾಡಿದ್ದ ಗಣೇಶನಿಗೆ ಅಕ್ಬರ್​ ಅವರ ಗಾನಸುಧೆ ಎಲ್ಲರನ್ನು ಮಂತ್ರಮುಗ್ದ ಗೊಳಿಸಿತ್ತು. ನೆರೆದಿದ್ದವರು ಸಂಗೀತದ ಕಡಲಲ್ಲಿ ತೇಲುವಂತೆ ಮಾಡಿತ್ತು.

ಮೇಲ್ಮೋಟಕ್ಕೆ ಇದೊಂದು ಸಂಗೀತ ಕಾರ್ಯಕ್ರಮ ಎನಿಸಿದರೂ ಕೂಡಾ ಇದರ ಒಳಾರ್ಥದಲ್ಲಿ ಇಡೀ ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನಿಸುವ ಕೆಲಸ ಮಾಡಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಡಾಗನಪಲ್ಲಿ ಗ್ರಾಮದ ಅಕ್ಬರ್​ ಅವರು ಪ್ರಖ್ಯಾತ ಹಾಡುಗಾರ, ರಾಜ್ಯದ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಅದ್ಬುತ ಕಂಠದಿಂದಲೇ ಎಲ್ಲರ ಮನಗೆದ್ದಿರುವ ಅದ್ಬುತ​ ಪ್ರತಿಭೆ, ಎಲ್ಲದಕ್ಕೂ ಮಿಗಿಲಾಗಿ ಸಂಗೀತ ಲೋಕದ ದೈತ್ಯ ಎಸ್​.ಪಿ.ಬಾಲಸುಬ್ರಮಣ್ಯಂ ಅವರ ಶಿಷ್ಯ ಅನ್ನೋದು ವಿಶೇಷ.

ತೆಲುಗು ಭಾಷೆಯ ಶಂಕರಾಭರಣಂ ಕನ್ನಡ ಅವತರಣಿಕೆಗೆ ಎಸ್​.ಪಿ.ಬಿ ಅವರು ತೆಲುಗಿನಲ್ಲಿ ಹಾಡಿದ್ದ ಹಾಡುಗಳನ್ನು ಕನ್ನಡದಲ್ಲಿ ಅಕ್ಬರ್ ಅವರು ಹಾಡಿದ್ದಾರೆ ಅನ್ನೋದು ವಿಶೇಷ. ಅಲ್ಲದೆ ಎಸ್​.ಜಾನಕಿ ಅವರು ಕೂಡಾ ಅಕ್ಬರ್ ಅವರ ಹಾಡನ್ನು ಮೆಚ್ಚಿ ಒಮ್ಮೆ ಅವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಅಧಿಕಾರಿಗಳ ಕಾರ್ಯಕ್ರಮ ಎಂದರೆ ಅಲ್ಲಿ ಅಕ್ಬರ್ ಅವರ ಹಾಡುಗಾರಿಕೆ ಇಲ್ಲದೆ ಕಾರ್ಯಕ್ರಮ ಮುಗಿಯೋದಿಲ್ಲ.

ಹೀಗೆ ತಮ್ಮದೇ ಕಂಠಸಿರಿಯಿಂದಲೇ ತೆರೆಮರೆಯಲ್ಲಿ ಹೆಸರು ಮಾಡುತ್ತಿರುವ ಅಕ್ಬರ್ ಅವರು ಕೋಲಾರದ ವಿಶ್ವಹಿಂದೂ ಪರಿಷತ್​ ಹಾಗೂ ಭಜರಂಗದಳ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿ ಎದುರು ಗಣೇಶನ ಹಾಡುಗಳನ್ನು ಹಾಡುತ್ತಿದ್ದರೆ ಎಲ್ಲರೂ ಮೈಮರೆತು ತಲೆಯಾಡಿಸುತ್ತಿದ್ದರು. ಗಣೇಶ ನಿನ್ನ ಮಹಿಮೆ ಅಪಾರ ಎಂದು ಹಲವು ಗಣೇಶನ ಭಕ್ತಿಗೀತೆಗಳು, ಕೆಲವು ಸಿನಿಮಾ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿದರು.

ಅಕ್ಬರ್​ಗೆ ಧ್ವನಿಗೂಡಿಸಿದ ಕೋಲಾರ ಎಸ್ಪಿ ಎಂ.ನಾರಾಯಣ್​ ಪ್ರಶಂಸೆ!

ಇನ್ನು ಕೋಲಾರದ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್​ ಪ್ರತಿಷ್ಠಾಪನೆ ಮಾಡಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಕೋಲಾರ ಎಸ್ಪಿ ಎಂ.ನಾರಾಯಣ್ ಅವರು ಅಕ್ಬರ್ ಅವರ ಹಾಡಿಗೆ ತಲೆದೂಗಿದರು. ಜೊತೆಗೆ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಕೋಲಾರದ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್​ ಹೊಸ ಮುನ್ನುಡಿ ಹಾಕಿಕೊಟ್ಟಿದ್ದಾರೆ. ಧರ್ಮ ಧರ್ಮದ ನಡುವೆ ಯಾವುದೇ ಅಂತರ ಇಲ್ಲ, ಯಾವುದೇ ದ್ವೇಷ ಭಾವನೆಯೂ ಇಲ್ಲ ನಾವೆಲ್ಲರೂ ಒಂದೇ ಆದರೆ ಆಚರಣೆ ಬೇರೆ ಇರಬಹುದು ದೇವರೆಲ್ಲಾ ಒಂದೇ ಅನ್ನೋ ಸಂದೇಶ ಕೋಲಾರದಿಂದ ರವಾನೆಯಾಗಿದೆ ಎಂದು ಪ್ರಶಂಸಿದರು.

ಜೊತೆಗೆ ಅಲ್ಲಿದ್ದ ಜನರ ಒತ್ತಾಯದ ಮೇರೆಗೆ ಅಕ್ಬರ್ ಜೊತೆಗೆ ಧ್ವನಿಗೂಡಿಸಿ ಹಾಡು ಹಾಡಿದ ಎಸ್ಪಿ ನಾರಾಯಣ್​ ಕೆಲ ಕಾಲ ಅಲ್ಲಿದ್ದ ಜನರನ್ನು ರಂಜಿಸಿದರು. ತೆಲುಗು ಕೂಲಿ ಸಿನಿಮಾದಲ್ಲಿರುವ ಗಣೇಶನ ಕುರಿತಾದ ದಂಡಾಲಯ್ಯ, ಉಂಡಾಲಯ್ಯ ಅನ್ನೋ ಹಾಡು ಹಾಡಿದರು, ಎಸ್ಪಿ ಹಾಡನ್ನು ಕೇಳಿದ ಜನರು ಶಿಳ್ಳೆ ಚಪ್ಪಾಳೆ ಮೂಲಕ ಎಸ್ಪಿ ಅವರಿಗೆ ಅಭಿನಂಧಿಸಿದರು.

ಒಟ್ಟಾರೆ ಕೋಲಾರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮ ಕೇವಲ ಹಬ್ಬವಾಗಿ ಆಚರಣೆ ಮಾಡದೆ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶ ಕೊಡುವ ಮೂಲಕ ಎಲ್ಲಗೂ ಮಾದರಿಯಾಗಿದ್ದು ನಿಜಕ್ಕೂ ವಿಶೇಷವಾಗಿತ್ತು.

Published On - 5:55 pm, Wed, 20 September 23