ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸೆ.22ರ ನಂತರ ತಿಳಿಸುತ್ತೇನೆ: ಸಮೃದ್ಧಿ ಮಂಜುನಾಥ್, ಜೆಡಿಎಸ್ ಶಾಸಕ
ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸೆಪ್ಟೆಂಬರ್ 22 ರ ನಂತರ ತೀರ್ಮಾನ ಮಾಡಲಾಗುವುದು ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮುಂದೆ ಕೋಲಾರ ಸೇರಿ 5 ಲೋಕಸಭಾ ಕ್ಷೇತ್ರಗಳ ಬೇಡಿಕೆ ಇಡಲಾಗುತ್ತದೆ ಎಂದಿದ್ದಾರೆ.

ಕೋಲಾರ, ಸೆ.19: ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸೆಪ್ಟೆಂಬರ್ 22ರ ನಂತರ ಸುದ್ದಿಗೋಷ್ಠಿ ಮಾಡಿ ತೀರ್ಮಾನ ತಿಳಿಸುತ್ತೇನೆ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ (Samruddhi Manjunath) ಹೇಳಿದ್ದಾರೆ. ಈಗ ತಾನೇ ಶಾಸಕನಾಗಿದ್ದೇನೆ, ಶಾಸಕನಾಗಿ ಮೂರು ತಿಂಗಳು ಕೂಡ ಆಗಿಲ್ಲ. ಕ್ಷೇತ್ರದ ಜನರ ತೀರ್ಮಾನ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಮುನಿಯಪ್ಪನವರು ದೇಗುಲಕ್ಕೆ ಬಂದಿದ್ದಾರೆ ಅಂದುಕೊಂಡಿರುವೆ. ಶಾಸಕನಾಗಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪಗೆ ಸನ್ಮಾನ ಮಾಡಿದ್ದೇನೆ. ಮುನಿಯಪ್ಪನವರು ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದಾರೆಂದು ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ಬೆನ್ನಲ್ಲೇ ಮೋದಿ ಭೇಟಿಯಾದ ಸುಮಲತಾ, ಮಂಡ್ಯದ ಬಗ್ಗೆ ಮಹತ್ವದ ಚರ್ಚೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಮೊನ್ನಯಷ್ಟೆ ಜೆಡಿಎಸ್ ಸಭೆ ಆಗಿದೆ, ಆ ಸಭೆಗೆ ನಾನು ಗೈರು ಆಗಿದ್ದೆ. 10 ದಿನಗಳ ಕಾಲ ಪ್ರಕೃತಿ ಶಿಬಿರದಲ್ಲಿದ್ದೆ. ಮೈತ್ರಿ ಇನ್ನೂ ಅಂತಿಮ ಆಗಿಲ್ಲ, ನಾಳೆ ದೇವೇಗೌಡರು ದೆಹಲಿಯಲ್ಲಿಯೇ ಉಳಿದುಕೊಳ್ಳುತ್ತಾರೆ. ಸೆ.21 ಹಾಗೂ 22 ರಂದು ಬಿಜೆಪಿ ಹೈಕಮಾಂಡ್ ಜೊತೆ ಸಭೆ ಇದೆ. ಸಭೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಹ ಭಾಗಿಯಾಗುತ್ತಾರೆ. ನಂತರ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಎಲ್ಲಾ ಮಾಹಿತಿ ಸಿಗಲಿದೆ ಎಂದರು.
ಮೈತ್ರಿ ವಿಚಾರ ಬಂದಾಗ ಕೋಲಾರ ಮುಂಚೂಣಿಯಲ್ಲಿ ಇಟ್ಟಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕೋಲಾರ ಸೇರಿ 5 ಲೋಕಸಭಾ ಕ್ಷೇತ್ರಗಳ ಬೇಡಿಕೆ ಇಡಲಾಗುತ್ತದೆ. ಬಳಿಕ ನಮ್ಮ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Tue, 19 September 23




