ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯ ಕೈ ಮುರಿಯುವಂತೆ ಥಳಿಸಿದ್ದ ಶಿಕ್ಷಕಿ ಸಸ್ಪೆಂಡ್!
ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿದ್ಯಾರ್ಥಿನಿಗೆ ಥಳಿಸಿ ಕೈಮುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯ ಶಿಕ್ಷಕಿಯನ್ನು ಅನಮಾನತು ಮಾಡಲಾಗಿದೆ. ಕೈ ಮುರಿಯುವಂತೆ ಥಳಿಸಿದ್ದ ಶಿಕ್ಷಕಿ ಹೇಮಲತಾರನ್ನು ಅಮಾನತು ಮಾಡಿ ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಈ ಆದೇಶ ಹೊರಡಿಸಿದ್ದಾರೆ.
ಕೋಲಾರ, (ಸೆಪ್ಟೆಂಬರ್ 20): ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ (School) ಗಣೇಶ ಮೂರ್ತಿಗೆ ಪೂಜೆ ಮಾಡಿದ ವಿದ್ಯಾರ್ಥಿನಿಗೆ ಥಳಿಸಿದ್ದಕ್ಕೆ ಕೈಮುರಿದಿದ್ದ ಆರೋಪದಡಿಯಲ್ಲಿ ಮುಖ್ಯ ಮುಖ್ಯ ಶಿಕ್ಷಕಿ (Teacher) ಹೇಮಲತಾರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಈ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಮುಖ್ಯ ಶಿಕ್ಷಕಿಯೇ ಭರಿಸಬೇಕು ಎಂದು ಸೂಚಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಹೇಮಲತಾ ಅವರು, ಕಳೆದ ವಾರ ವಿದ್ಯಾರ್ಥಿನಿ ಭವ್ಯ ಶ್ರೀ ಎಂಬ ವಿದ್ಯಾರ್ಥಿನಿಗೆ ಥಳಿಸಿ ಎಡಗೈ ಮುರಿದಿದ್ದರು. ಈ ಸಂಬಂಧ ಪೋಷಕರು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಅಲ್ಲದೇ ಮುಖ್ಯ ಶಿಕ್ಷಕಿ ಹೇಮಲತಾರನ್ನ ಅಮಾನತು ಮಾಡುವಂತೆ ಪಟ್ಟು ಹಿಡಿದಿದ್ದರು.
ಬಳಿಕ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಶಾಲಾ ಮಕ್ಕಳ ಪೋಷಕರಿಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ಮುಖ್ಯ ಶಿಕ್ಷಕಿ ಹೇಮಲತಾ ಅವರನ್ನ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ನೀಡಿದ ವರದಿ ಆಧರಿಸಿ ಡಿಡಿಪಿಐ ಕೃಷ್ಣಮೂರ್ತಿ ಮುಖ್ಯ ಶಿಕ್ಷಕಿಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.