ಕೋಲಾರ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದ ಬಿಂಗಿ ರೋಗ! ಮಣ್ಣು ಪಾಲಾಗುತ್ತಿರವ ಟೊಮ್ಯಾಟೊ ಬೆಳೆ
ಕೋಲಾರ ಬಯಲು ಸೀಮೆ ಜಿಲ್ಲೆ, ಇಲ್ಲಿ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಾರೆ. ರೈತರು ತಾವು ಬೆಳೆದ ಬೆಳೆಗೆ ಒಂದು ಬಾರಿ ಸರಿಯಾದ ಬೆಲೆ ಸಿಕ್ಕರೆ ಸಾಕು, ಇಡೀ ವರ್ಷ ಸುಖವಾಗಿ ಇರಬಹುದು ಎಂದು ಕನಸು ಕಂಡಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ರೈತರು ಬೆಳೆದ ಸಾವಿರಾರು ಹೆಕ್ಟೇರ್ ಟೊಮ್ಯಾಟೊ ಬೆಳೆಗೆ ರೋಗ ಆವರಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಕೋಲಾರ, ಜುಲೈ 01: ಕೋಲಾರ (Kolar) ಜಿಲ್ಲೆಯ ಪ್ರಮುಖ ಬೆಳೆ ಟೊಮ್ಯಾಟೊ (Tomato). ನದಿ, ನಾಲೆಗಳು ಇಲ್ಲದೆ ಇದ್ದರೂ ಸಹ ರೈತರು (Farmers) ಕಷ್ಟಪಟ್ಟು ಟೊಮ್ಯಾಟೊ ಬೆಳೆ ಬೆಳೆಯುತ್ತಾರೆ. ಇನ್ನು ಜೂನ್ನಿಂದ ಮೂರು ತಿಂಗಳ ಕಾಲ ಟೊಮ್ಯಾಟೊ ಸುಗ್ಗಿ. ಇಂತಹ ಪರಿಸ್ಥಿತಿಯಲ್ಲಿ ಟೊಮ್ಯಾಟೊಗೆ ಸಹ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ. 15 ಕೆಜಿ ಬಾಕ್ಸ್ ಟೊಮ್ಯಾಟೊಗೆ 800 ರಿಂದ 1000 ರೂ ಇದೆ, ಒಂದು ಕೆಜಿ 60 ರಿಂದ 70 ರೂ.ಗಳಿಗೆ ಮಾರಾಟವಾಗುತ್ತಿದೆ. ಇಂಥ ಸಂದರ್ಭದಲ್ಲಿ ಟೊಮ್ಯಾಟೊ ಬೆಳೆಗೆ ಬಿಂಗಿ ರೋಗ, ಎಲೆಸುರುಳಿ ರೋಗ, ಬಿಳಿ ವೈರಸ್ ಆವರಿಸಿಕೊಂಡಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಟೊಮ್ಯಾಟೊ ನಾಶವಾಗಿದೆ.
ಬೆಳೆದ ಬೆಳೆ ಮಾರುಕಟ್ಟೆಗೂ ಹಾಕಲಾಗದೆ ತೋಟಗಳಲ್ಲೇ ಕೊಳೆಯುವಂತಾಗಿದೆ. ಗುಣಮಟ್ಟದ ಟೊಮ್ಯಾಟೊ ಇಲ್ಲದೆ ಕಾರಣ ಮಾರುಕಟ್ಟೆಗೆ ಹಾಕಿ ಯಾವುದೆ ಪ್ರಯೋಜನವಿಲ್ಲ ಎನ್ನುವಂತಾಗಿದೆ. ಒಂದು ಎಕರೆ ಟೊಮ್ಯಾಟೊ ಬೆಳೆಯಲು ಮೂರುವರೆ ಲಕ್ಷ ರೂಪಾಯಿ ಬಂಡವಾಳ ಹಾಕಿರುವ ರೈತರಿಗೆ, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ, ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದು, ಟೊಮ್ಯಾಟೊ ಬೆಳೆಗೆ ಬಂದಿರುವ ರೋಗಕ್ಕೆ ವಿಜ್ನಾನಿಗಳಿಂದ ಪರಿಶೀಲನೆ ನಡೆಸಿ ರೈತರ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಾವಿನ ತವರು ಕೋಲಾರದಲ್ಲಿ ಈಗ ನೇರಳೆಯ ರಂಗು, ಬಾಯಲ್ಲಿ ನೀರೂರಿಸುತ್ತೆ
ಇನ್ನು ಟೊಮ್ಯಾಟೊಗೆ ಒಳ್ಳೆಯ ಬೆಲೆ ಇದೆ, ಅದಕ್ಕೆ ತಕ್ಕಂತೆ ಒಳ್ಳೆಯ ಬೇಡಿಕೆಯೂ ಇದೆ. ಟೊಮ್ಯಾಟೊ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದಲೂ ಟೊಮ್ಯಾಟೊ ಬರುತ್ತಿಲ್ಲ. ಹೀಗಾಗಿ ಕೋಲಾರ ಜಿಲ್ಲೆಯ ಟೊಮ್ಯಾಟೊಗೆ ಭರ್ಜರಿ ಬೇಡಿಕೆ ಇದೆ. ಹೀಗಿರುವಾಗ ಕೋಲಾರದಲ್ಲಿನ ರೈತರು ಬೆಳೆದ ಟೊಮ್ಯಾಟೊಗೆ ಎಲೆಸುರುಳಿ ರೋಗ ಮತ್ತು ಬಿಂಗಿ ರೋಗ ಆವರಿಸಿಕೊಂಡಿದ್ದು, ಬೆಳೆದ ಬೆಳೆ ಹಾಳಾಗಿದೆ.
ಬಿಂಗಿ ರೋಗಕ್ಕೆ ಎಷ್ಟೇ ಕ್ರಿಮಿನಾಶಕ ಔಷಧಿಯನ್ನು ಹೊಡೆದರು ಸಹ ರೋಗ ಹತೋಟಿಗೆ ಬರುತ್ತಿಲ್ಲ. ಕ್ರಿಮಿನಾಶಕ ಸಹ ನಕಲಿಯಾಗಿದ್ದು, ರೈತರು ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಬಿಂಗಿ ರೋಗ ಕಾಡುತ್ತಿದೆ. ಈ ಬಗ್ಗೆ ಕೂಡಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಕೋಲಾರ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವಾಗಲೇ ಬಿಂಗಿ ರೋಗ ಆವರಿಸಿ ರೈತರ ಬದುಕಿಗೆ ಕೊಳ್ಳಿ ಇಟ್ಟಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಬೀದಿಗೆ ಸುರಿಯುವಂತಾಗಿದ್ದು, ಕೂಡಲೇ ತೋಟಗಾರಿಕಾ ಇಲಾಖೆ ರೋಗಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ