ಮಾವಿನ ತವರು ಕೋಲಾರದಲ್ಲಿ ಈಗ ನೇರಳೆಯ ರಂಗು, ಬಾಯಲ್ಲಿ ನೀರೂರಿಸುತ್ತೆ

ಅದು ಮಾವು, ರೇಷ್ಮೆ, ಹಾಲು ಹಾಗೂ ಟೊಮ್ಯಾಟೋಗೆ ತವರು ಎಂದೇ ಪ್ರಸಿದ್ದಿ ಪಡೆದಿದ್ದ ರಾಜ್ಯದ ಗಡಿ ಜಿಲ್ಲೆ, ಈಗ ಮಾವಿನ ತವರಲ್ಲಿ ನೀಲಿ ಹಣ್ಣಿನ ದರ್ಬಾರ್​ ಜೋರಾಗಿದೆ. ಮಾವು ಬೆಳೆಯುತ್ತಿದ್ದ ಪ್ರದೇಶದಲ್ಲಿ ನೇರಳೆ ಹಣ್ಣಿನ ರಂಗು ಶುರುವಾಗಿದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ನೇರಳೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿದೆ. ಎಲ್ಲಿ ಅಂತೀರಾ? ಈ ವರದಿ ನೋಡಿ.

ಮಾವಿನ ತವರು ಕೋಲಾರದಲ್ಲಿ ಈಗ ನೇರಳೆಯ ರಂಗು, ಬಾಯಲ್ಲಿ ನೀರೂರಿಸುತ್ತೆ
ಕೋಲಾರದಲ್ಲಿ ಈಗ ನೇರಳೆಯ ರಂಗು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 30, 2024 | 2:47 PM

ಕೋಲಾರ, ಜೂ.30: ಬಾಯಲ್ಲಿ ನೀರೂರಿಸುವಂತೆ ಮರದಲ್ಲಿ ನೇತಾಡುತ್ತಿರುವ ಜಂಬು ನೇರಳೆ ಹಣ್ಣು, ಹಸಿರ ನಡುವೆ ಕಣ್ಣು ಕುಕ್ಕುವಂತೆ ನೇರಳೆ ಹಣ್ಣುಗಳ ಗೊಂಚಲು, ಮಾರುಕಟ್ಟೆಯಲ್ಲಿ ಹಣ್ಣು ಕೊಳ್ಳುತ್ತಿರುವ ಗ್ರಾಹಕರು ಇದೆಲ್ಲವು ಕಂಡು ಬಂದಿದ್ದು ಕೋಲಾರ ಜಿಲ್ಲೆಯಲ್ಲಿ. ಹೌದು, ಕೋಲಾರ(Kolar) ಅಂದರೆ ನಮಗೆ ನೆನಪಾಗುವುದು ಮಾವಿನ ತವರು, ಟೊಮ್ಯಾಟೋ, ರೇಷ್ಮೆ ಹಾಗೂ ಹಾಲಿಗೆ ಪ್ರಸಿದ್ದಿ ಪಡೆದ ಜಿಲ್ಲೆ ಎಂದು. ಆದ್ರೆ, ಈ ಚಿನ್ನದ ನಾಡಿನಲ್ಲಿ ಪ್ರಸಿದ್ದಿಗಳ ಸಾಲಿಗೆ ಇದೀಗ ನೇರಳೆ ಹಣ್ಣು ಕೂಡ ಹೊಸ ಸೇರ್ಪಡೆಯಾಗಿದೆ.

100 ಹೆಕ್ಟೇರ್​ಗೂ ಹೆಚ್ಚಿನ​ ಪ್ರದೇಶದಲ್ಲಿ ನೇರಳೆ ಹಣ್ಣಿನ ಬೆಳೆ

ಕೋಲಾರ ಜಿಲ್ಲೆಯಲ್ಲಿ ಕೇವಲ ಬಾರ್ಡರ್​ ಕ್ರಾಪ್​ ಆಗಿ ಬೆಳೆಯುತ್ತಿದ್ದ ನೇರಳೆ ಹಣ್ಣನ್ನು, ಈಗ ರೈತರು ತೋಟಗಳಲ್ಲಿ ಎಕರೆ ಗಟ್ಟಲೆ ಪ್ರದೇಶದಲ್ಲಿ ಒಣ ಬೇಸಾಯ ವಿಧಾನದಲ್ಲಿ ಮಾನೋ ಕ್ರಾಪ್​ ಆಗಿ ಬೆಳೆಯಲು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 100 ಹೆಕ್ಟೇರ್​ಗೂ ಹೆಚ್ಚಿನ​ ಪ್ರದೇಶದಲ್ಲಿ ನೇರಳೆ ಹಣ್ಣನ್ನು ಬೆಳೆಯಲಾಗಿದೆ.

ಕೆಂಪಾದ  ಆ್ಯಪಲ್​ನನ್ನು ಮಂಜಾಗಿಸಿದ ನೇರಳೆ, ಆ್ಯಪಲ್​ಗಿಂತಲೂ ನೇರಳೆಗೆ ಬೆಲೆ ಹೆಚ್ಚು!

ಇತ್ತೀಚಿನ ದಿನಗಳಲ್ಲಿ ನೇರಳೆ ಬೆಳೆದಿರುವ ರೈತರು ತಾವು ನಿರೀಕ್ಷೆಗೂ ಹೆಚ್ಚಿನ ಆದಾಯ ಪಡೆಯುವ ಮೂಲಕ ಪುಲ್​ ಖುಷಿಯಾಗಿದ್ದಾರೆ. ಅತಿಹೆಚ್ಚು ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿಗೆ ಕೆಜಿಗೆ 200-300 ರೂಪಾಯಿ ಬೆಲೆ ಇದೆ. ಮಾರುಕಟ್ಟೆಯಲ್ಲಿ ಕಾಶ್ಮೀರಿ ಆ್ಯಪಲ್​ಗಿಂತಲೂ ಬೆಲೆ ಹೆಚ್ಚಾಗಿದೆ. ಒಂದೇ ಸೀಸನ್​ನಲ್ಲಿ ನೇರಳೆ ಹಣ್ಣು ಬೆಳೆದಿರುವ ರೈತರು ಲಕ್ಷ ಲಕ್ಷ ಆದಾಯ ಮಾಡುತ್ತಿದ್ದಾರೆ ಎಂದು ನೇರಳೆ ಬೆಳೆದಿರುವ ರೈತ ಗೋವಿಂದರಾಜು ಅವರು ಹೇಳುತ್ತಿದ್ದಾರೆ.

ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಮರ ಬೆಳೆಯುತ್ತಿದ್ದ ನೇರಳೆ, ಈಗ ತೋಟಗಳಲ್ಲಿ ..!

ಇನ್ನು ಕಾಡು-ಮೇಡು, ಬೆಟ್ಟ-ಗುಡ್ಡಗಳಲ್ಲಿ, ಹೊಲಗಳ ಬದುಗಳಲ್ಲಿ ಮಾತ್ರ ಬೆಳೆಯುತ್ತಿದ್ದ ನೇರಳೆ ಮರಗಳು ಸಧ್ಯ ರೈತರ ಪರ್ಯಾಯ ಬೆಳೆಯಾಗಿದ್ದು, ರೈತರು ಎಕರೆ ಗಟ್ಟಲೆ ಬೆಳೆಯುತ್ತಿದ್ದಾರೆ. ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಕಾಲವಿತ್ತು. ಆದ್ರೆ, ಇಂದು ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ನೇರಳೆ ಹಣ್ಣಿಗೆ ಬಾರೀ ಭಾರೀ ಡಿಮ್ಯಾಂಡ್ ಬಂದಿದೆ.
ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಬಂದ ಕಾರಣ ಕೋಲಾರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣಿನದ್ದೇ ಕಾರುಬಾರು ಜೋರಾಗಿದೆ. ಹಾಗಾಗಿ ತೋಟಗಾರಿಕಾ ಇಲಾಖೆ ಕೂಡ ನೇರಳೆ ಹಣ್ಣನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ತಪ್​ದಾಲ್​, ಜಂಬು ನೇರಳೆ ಎನ್ನುವ ತಳಿಯನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮಾವಿಗೆ ಪರ್ಯಾಯ ಬೆಳೆಯಾಗಿ ನೇರಳೆ ಬೆಳೆಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ.
ಅಲ್ಲದೆ ಗ್ರಾಹಕರು ಕೂಡ ಇದು ಮದುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ ಎನ್ನುವ ಕಾರಣಕ್ಕೆ ಬೆಲೆ ಎಷ್ಟಾದರೂ ಪರವಾಗಿಲ್ಲ ಎಂದು ಖರೀದಿ ಮಾಡಿ ನೇರಳೆ ಹಣ್ಣು ಸವಿಯುತ್ತಿದ್ದಾರೆ. ಒಟ್ಟಾರೆ ಹಲವಾರು ದಶಕಗಳಿಂದ ಮಾವಿನ ತವರು ಎಂದೇ ಖ್ಯಾತಿ ಪಡೆದಿದ್ದ ಕೋಲಾರದಲ್ಲಿ ನೇರಳೆಯ ರಂಗು ಹೆಚ್ಚಾಗುತ್ತಿದ್ದು, ರೈತರೂ ಕೂಡ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ನೇರಳೆ ಬೆಳೆಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sun, 30 June 24

ತಾಜಾ ಸುದ್ದಿ