AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಹೆಚ್ಚಳದ ನಡುವೆಯೇ ಟೊಮ್ಯಾಟೋಗೆ ಹರಡಿದ ಬಿಂಗಿ ರೋಗ! ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು

ಅದು ಬಯಲು ಸೀಮೆ ಜಿಲ್ಲೆ, ಅಲ್ಲಿನ ರೈತರು ಕಷ್ಟಪಟ್ಟು ಬೆಳೆಯುವ ಬೆಳೆ ಟೊಮ್ಯಾಟೋ, ಜಿಲ್ಲೆಯ ಹೆಚ್ಚಿನ ರೈತರು ವರ್ಷಕ್ಕೊಮ್ಮೆ ತಾವು ಬೆಳೆದ ಬೆಳೆಗೆ ಒಂದು ಬಾರಿ ಸರಿಯಾದ ಬೆಲೆ ಸಿಕ್ಕರೆ ಸಾಕು, ಇಡೀ ವರ್ಷ ತಮ್ಮ ಜೀವನ ಸುಧಾರಿಸಿಕೊಳ್ಳುತ್ತಾರೆ. ಇಂಥಹ ಪರಿಸ್ಥಿತಿಯಲ್ಲಿ ರೈತರು ಬೆಳೆದ ಸಾವಿರಾರು ಹೆಕ್ಟೇರ್ ಟೊಮ್ಯಾಟೋ ಬೆಳೆಗೆ ಬಿಂಗಿ ರೋಗ ಆವರಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಬೆಲೆ ಹೆಚ್ಚಳದ ನಡುವೆಯೇ ಟೊಮ್ಯಾಟೋಗೆ ಹರಡಿದ ಬಿಂಗಿ ರೋಗ! ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು
ಟೊಮ್ಯಾಟೋಗೆ ಹರಡಿದ ಬಿಂಗಿ ರೋಗ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Jun 30, 2024 | 8:41 PM

Share
ಕೋಲಾರ, ಜೂ.30: ಜಿಲ್ಲೆಯಲ್ಲಿ ರೈತರಿಗೆ ಟೊಮ್ಯಾಟೋ(Tomato) ಒಂದು ಪ್ರಮುಖ ಬೆಳೆ, ಈ ಟೊಮ್ಯಾಟೋ ಬೆಳೆಯನ್ನು ಸಾವಿರಾರು ರೈತರು ಬೆಳೆಯುತ್ತಾರೆ. ಯಾವುದೇ ನದಿ ನಾಲೆಗಳು ಇಲ್ಲದೆ ಇದ್ದರು ಸಹ ರೈತರು ಬೆವರು ಹರಿಸಿ ಬೆಳೆ ಬೆಳೆಯುತ್ತಾರೆ. ಇನ್ನು ಜೂನ್​ನಿಂದ ಮೂರು ತಿಂಗಳ ಕಾಲ ಟೊಮ್ಯಾಟೊ ಸುಗ್ಗಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೊಮ್ಯಾಟೋಗೆ ಸಹ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ. ಹದಿನೈದು ಕೆಜಿ ಬಾಕ್ಸ್ ಟೊಮ್ಯಾಟೋಗೆ 800 ರಿಂದ 1000 ರೂ ಇದೆ. ಒಂದು ಕೆಜಿ 60 ರಿಂದ 70 ರೂ.ಗಳಿಗೆ ಮಾರಾಟವಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಟೊಮ್ಯಾಟೋ ಬೆಳೆಗೆ ಬಿಂಗಿ ರೋಗ, ಎಲೆಸುರುಳಿ ರೋಗ, ಬಿಳಿ ವೈರಸ್​ ಆವರಿಸಿಕೊಂಡಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗಿ ತೋಟದಲ್ಲಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೂ ಹಾಕಲಾಗದೆ ತೋಟಗಳಲ್ಲೇ ಕೊಳೆಯುವಂತಾಗಿದೆ.

ಎಕರೆ ಟೊಮ್ಯಾಟೋ ಬೆಳೆಯಲು ಮೂರುವರೆ ಲಕ್ಷ ರೂಪಾಯಿ ಬಂಡವಾಳ

ಗುಣಮಟ್ಟದ ಟೊಮ್ಯಾಟೋ ಇಲ್ಲದೆ ಕಾರಣ ಮಾರುಕಟ್ಟೆಗೆ ಹಾಕಿ ಯಾವುದೇ ಪ್ರಯೋಜನವಿಲ್ಲ ಎನ್ನುವಂತಾಗಿದೆ. ಒಂದು ಎಕರೆ ಟೊಮ್ಯಾಟೋ ಬೆಳೆಯಲು ಮೂರುವರೆ ಲಕ್ಷ ರೂಪಾಯಿ ಬಂಡವಾಳ ಹಾಕಿರುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನು ಜಿಲ್ಲೆಯ ಜನಪ್ರತಿನಿಧಿಗಳು,ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದು, ಟೊಮ್ಯಾಟೋ ಬೆಳೆಗೆ ಬಂದಿರುವ ರೋಗಕ್ಕೆ ವಿಜ್ನಾನಿಗಳಿಂದ ಪರಿಶೀಲನೆ ನಡೆಸಿ ರೈತರ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇನ್ನು ಟೊಮ್ಯಾಟೋಗೆ ಒಳ್ಳೆಯ ಬೆಲೆಯಿದ್ದು, ಅದಕ್ಕೆ ತಕ್ಕಂತೆ ಒಳ್ಳೆಯ ಬೇಡಿಕೆಯೂ ಇದೆ. ಟೊಮ್ಯಾಟೊವನ್ನ ಮಹಾರಾಷ್ಟ್ರ, ಆಂದ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಟೊಮ್ಯಾಟೋ ಬರುತ್ತಿಲ್ಲ. ಹಾಗಾಗಿ ಕೋಲಾರ ಜಿಲ್ಲೆಯ ಟೊಮ್ಯಾಟೋಗೆ ಭರ್ಜರಿ ಬೇಡಿಕೆ ಇದೆ. ಹೀಗಿರುವಾಗ ಕೋಲಾರದಲ್ಲಿನ ರೈತರು ಬೆಳೆದ ಟೊಮ್ಯಾಟೋಗೆ ಎಲೆಸುರುಳಿ ರೋಗ ಮತ್ತು ಬಿಂಗಿ ರೋಗ ಆವರಿಸಿಕೊಂಡಿದ್ದು, ಬೆಳೆದ ಬೆಳೆ ಹಾಳಾಗಿದೆ. ಇನ್ನು ಬಿಂಗಿ ರೋಗಕ್ಕೆ ಎಷ್ಟೇ ಕ್ರಿಮಿನಾಶಕ ಔಷಧಿಯನ್ನು ಹೊಡೆದರು ಸಹ ರೋಗ ಹತೋಟಿಗೆ ಬರುತ್ತಿಲ್ಲ. ಕ್ರಿಮಿನಾಶಕ ಸಹ ನಕಲಿಯಾಗಿದ್ದು, ರೈತರು ಪರದಾಡುವಂತಾಗಿದೆ.
ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಬಿಂಗಿ ರೋಗದಿಂದ ರೈತ ಪರದಾಡುತ್ತಿದ್ದಾನೆ. ಇನ್ನು ಈ‌ ಬಗ್ಗೆ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಟ್ಟಾರೆ ಕೋಲಾರದಲ್ಲಿ ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವಾಗಲೇ ಬಿಂಗಿ ರೋಗ ಆವರಿಸಿ ರೈತರ ಬದುಕಿಗೆ ಕೊಳ್ಳಿ ಇಟ್ಟಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಬೀದಿಗೆ ಸುರಿಯುವಂತಾಗಿದ್ದು, ಕೂಡಲೇ ತೋಟಗಾರಿಕಾ ಇಲಾಖೆ ರೋಗಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Sun, 30 June 24