AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ದನ ಹತ್ಯೆಗೈದು ಮನೆಯಲ್ಲಿದ್ದ ಹಣ, ಚಿನ್ನ ದರೋಡೆ: ಡೆಡ್ಲಿ ಮರ್ಡರ್​​ಗೆ ಬೆಚ್ಚಿದ ಕೋಲಾರ

ಮನೆಯಲ್ಲಿದ್ದ ಒಂಟಿ ವೃದ್ಧನ ಭೀಕರ ಹತ್ಯೆ ಮಾಡಿ ದುಷ್ಕರ್ಮಿಗಳು ದರೋಡೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮನೆಯಲ್ಲಿದ್ದ ನಗದು, ಬೆಳ್ಳಿ ಮತ್ತು ಬಂಗಾರ ಕಳುವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಶ್ವಾನ ದಳ, ಬೆರಳಚ್ಚು ತಜ್ಞರು, ಸೋಕೋ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.

ವೃದ್ದನ ಹತ್ಯೆಗೈದು ಮನೆಯಲ್ಲಿದ್ದ ಹಣ, ಚಿನ್ನ ದರೋಡೆ: ಡೆಡ್ಲಿ ಮರ್ಡರ್​​ಗೆ ಬೆಚ್ಚಿದ ಕೋಲಾರ
ಕೊಲೆಯಾದ ವೃದ್ಧ.
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Nov 25, 2025 | 6:11 PM

Share

ಕೋಲಾರ, ನವೆಂಬರ್​​ 25: ತಲೆಗೆ ಹೊಡೆದು, ಕುತ್ತಿಗೆ ಕೊಯ್ದು ವೃದ್ದರೋರ್ವರನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿ ಕಳವು ಮಾಡಿರುವ ಘಟನೆ ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ನಡೆದಿದೆ. ವೆಂಟಕರಾಮಪ್ಪ (70) ಮೃತ ದುರ್ದೈವಿಯಾಗಿದ್ದು, ಅನಾರೋಗ್ಯ ಪೀಡಿತ ವೃದ್ದ ಒಬ್ಬರೇ ಇದ್ದ ವೇಳೆ ಮನೆಗೆ ನುಗ್ಗಿ ಕೃತ್ಯ ಎಸಗಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ಮುಂದಾಗಿರೋ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಮನೆಯಲ್ಲಿ ವೃದ್ದ ವೆಂಟಕರಾಮಪ್ಪ ಮತ್ತು ಅವರ ಪತ್ನಿ ಆನಂದಮ್ಮ ಇಬ್ಬರೇ ನೆಲೆಸಿದ್ದರು. ಅನಾರೋಗ್ಯದಿಂದ ವೆಂಟಕರಾಮಪ್ಪ ಬಳಲುತ್ತಿದ್ದ ಹಿನ್ನಲೆ ಅವರನ್ನು ಮನೆಯಲ್ಲಿ ಬಿಟ್ಟು, ಆನಂದಮ್ಮ ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರೋದನ್ನ ಕಂಡಿದ್ದಾರೆ. ಆರಂಭದಲ್ಲಿ ಬಿಪಿ ಅಥವಾ ಶುಗರ್ ಕಾಯಿಲೆಯಿಂದ ಕುಸಿದು ಬಿದ್ದು ತಲೆಗೆ ಪೆಟ್ಟಾಗಿರಬೇಕು ಅಂದುಕೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಆದರೆ ಮನೆಯಲ್ಲಿನ ವಸ್ತುಗಳಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಎಲ್ಲ ಕಡೆ ಖಾರದ ಪುಡಿ ಚೆಲ್ಲಿರೋದು ಗಮನಕ್ಕೆ ಬಂದಿದೆ. ಜೊತೆಗೆ ಮನೆಯಲ್ಲಿದ್ದ ಹಣ ಮತ್ತು ಒಡೆವೆ ದರೋಡೆ ಆಗಿರುವ ಕಾರಣ ಇದು ಕೊಲೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ, ಬೆಂಗಳೂರಿನಲ್ಲಿ ಯುವಕನ ಭೀಕರ ಕೊಲೆ

ಘಟನೆ ಬಗ್ಗೆ ಗ್ರಾಮಸ್ಥರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರೀಕ್ಷಿಸಿದಾಗ ತಲೆಗೆ ಹಿಟ್ಟಿನ ಕೋಲಿನಿಂದ ಹೊಡೆದು, ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಗೊತ್ತಾಗಿದೆ. ಇನ್ನು ವೆಂಕಟರಾಮಪ್ಪ ಹಾಗೂ ಆನಂದಮ್ಮ ದಂಪತಿಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನ ಮದುವೆ ಮಾಡಿ ಕೊಡಲಾಗಿದೆ. ಇದ್ದೊಬ್ಬ ಮಗ ಕೆಲಸಕ್ಕೆಂದು ಹೋಗಿ ಬೇರೆ ಊರಿನಲ್ಲಿ ನಲೆಸಿದ್ದ. ಹೀಗಾಗಿ ಬೇರೆ ದಾರಿ ಇಲ್ಲದೆ ವೃದ್ದ ದಂಪತಿ ಸೀಪುರ ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುತ್ತಿದ್ದರು ಎನ್ನಲಾಗಿದೆ.

ಮನೆಯಲ್ಲಿದ್ದ ನಾಲ್ಕೈದು ಲಕ್ಷ ರೂ.ನಷ್ಟು ಹಣ, ಬೆಳ್ಳಿಯ ಸಾಮಗ್ರಿ ಹಾಗೂ ಸುಮಾರು 90 ಗ್ರಾಂನಷ್ಟು ಚಿನ್ನದ ಒಡವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಶ್ವಾನ ದಳ, ಬೆರಳಚ್ಚು ತಜ್ಞರು, ಸೋಕೋ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಬೇಟೆಗಾಗಿ ಎರಡು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ನಿಖಿಲ್​ ಬಿ. ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:05 pm, Tue, 25 November 25