ನಾಲ್ಕನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಕತ್ತು ಹಿಸುಕಿ 3 ದಿನದ ಹಸುಗೂಸು ಕೊಂದ ತಾಯಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನಾಲ್ಕನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಮೂರು ದಿನ ಹಸುಗೂಸನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹೆತ್ತ ತಾಯಿಯೇ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ, ನವೆಂಬರ್ 25: ಜಿಲ್ಲೆಯ ರಾಮದುರ್ಗ (Ramdurg) ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹೆಣ್ಣುಮಗು ಜನಿಸಿದ್ದಕ್ಕೆ ಕತ್ತು ಹಿಸುಕಿ 3 ದಿನದ ಹಸುಗೂಸನ್ನು ತಾಯಿಯೇ ಕ್ರೂರವಾಗಿ ಕೊಲೆ (kill) ಮಾಡಿದ್ದಾರೆ. ಅಶ್ವಿನಿ ಹಳಕಟ್ಟಿ ಕೊಲೆ ಮಾಡಿದ ಮಗುವಿನ ತಾಯಿ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುರೇಬಾನ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಬಂಧಿಸಿದ್ದಾರೆ.
ನಡೆದದ್ದೇನು?
ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಮೂಲದ ಅಶ್ವಿನಿ ಹಳಕಟ್ಟಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ನ.23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಸಿಲುಕಿದ ಪ್ರೇಮಿಗಳು, ಸಿನಿಮಾ ಸ್ಟೈಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿ?
ಜನ್ಮ ನೀಡಿದ ಮಾರನೇ ದಿನ ಅಶ್ವಿನಿ ತವರುಮನೆ ಹಿರೇಮುಲಂಗಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ತಾಯಿ ಹೊರ ಹೋದಾಗ ಹಸುಗೂಸಿನ ಕತ್ತು ಹಿಸುಕಿ ಅಶ್ವಿನಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಗು ಉಸಿರಾಡುತ್ತಿಲ್ಲ ಅಂತಾ ಡ್ರಾಮಾ ಮಾಡಿದ್ದಾರೆ.
ತಕ್ಷಣ ರಾಮದುರ್ಗ ತಾಲೂಕಾಸ್ಪತ್ರೆಗೆ ಮಗು ಕರೆತರಲಾಗಿದ್ದು, ಕತ್ತು ಹಿಸುಕಿ ಉಸಿರುಗಟ್ಟಿಸಿ ಮಗು ಸಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ. ಅಶ್ವಿನಿ ಕೂಡ ಬಾಣಂತಿ ಹಿನ್ನೆಲೆ ಪೊಲೀಸ್ ಕಾವಲಿನಲ್ಲಿ ಅಶ್ವಿನಿಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಆರೈಕೆ ಮಾಡುತ್ತಿದ್ದಾರೆ.
ಅಕ್ರಮ ಸಂಬಂಧ ಹೊಂದಿದ್ದ ಯುವಕನ ಹತ್ಯೆ
ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮಹಿಳೆ ಸಂಬಂಧಿಕರು ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ. ನರಸಿಂಹರಾಜು(32) ಹತ್ಯೆಯಾದ ಯುವಕ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ವಿವಾಹಿತ ಮಹಿಳೆ ಜತೆ ನರಸಿಂಹರಾಜು ಅಕ್ರಮ ಸಂಬಂಧ ಹೊಂದಿದ್ದ. ವಿಷಯ ತಿಳಿದು ಮಹಿಳೆಯ ನಾಲ್ಕೈದು ಸಂಬಂಧಿಕರು ಕಳೆದ ಶನಿವಾರ ಯುವಕನ ಮನೆ ಬಳಿ ಬಂದಿದ್ದರು. ನರಸಿಂಹರಾಜುನನ್ನು ಮನೆಯಿಂದ ಹೊರಗಡೆ ಎಳೆದುತಂದು ರಸ್ತೆಯುದ್ದಕ್ಕೂ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನರಸಿಂಹರಾಜು ತಾಯಿ ಮೇಲೂ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ: ಬೇರೊಬ್ಬನ ಜತೆ ಲವ್ವಿಡವ್ವಿಗೆ ಗಂಡನ ಹತ್ಯೆ: ಸುಪಾರಿ ಹಣ ಕೊಡದೆ ಕಳ್ಳಾಟ, 9 ವರ್ಷದ ಬಳಿಕ ರಹಸ್ಯ ಬಯಲು
ತೀವ್ರ ರಕ್ತಸ್ರಾವದಿಂದ ನರಸಿಂಹರಾಜು ಅಸ್ವಸ್ಥನಾಗಿದ್ದ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ. ಯುವಕನ ಸಾವಿಗೆ ಮಹಿಳೆ ಹಾಗೂ ಕುಟುಂಬಸ್ಥರು ಕಾರಣ ಎಂದು ಆರೋಪ ಕೇಳಿಬಂದಿದೆ. ಸದ್ಯ ದೂರು ದಾಖಲಾಗಿದ್ರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



