ಕೋಲಾರ: ರೈತರೂ ಇಷ್ಟೊಂದು ಸಾಧನೆ, ಸಂಪಾದನೆ ಮಾಡಬಹುದು; ಮಾದರಿ ಕೃಷಿಕನ ಯಶಸ್ವಿ ಬದುಕು!
ಕುರಿ ಹಾಗೂ ಮೇಕೆ ಸಾಕಾಣಿಕೆಯಿಂದ ವರ್ಷಕ್ಕೆ ಹತ್ತರಿಂದ ಹನ್ನೆರಡು ಲಕ್ಷ ಸಂಪಾದನೆ ಮಾಡುವ ಬೈರಪ್ಪ ಅವರು ಖಡಕ್ನಾತ್ ಕೋಳಿ ಸಾಕಾಣಿಕೆಯಿಂದಲೇ ವಾರ್ಷಿಕ ಐದು ಲಕ್ಷದಷ್ಟು ಆದಾಯ ಗಳಿಸುತ್ತಾರೆ.
ಕೋಲಾರ: ಸರ್ಕಾರಿ ಉದ್ಯೋಗಿಯಂತೆ ಖಾಕಿ ಬಟ್ಟೆ ತೊಟ್ಟು, ಉದ್ದನೆಯ ಬಿಳಿ ಗಡ್ಡ ಬಿಟ್ಟುಕೊಂಡು ಇಂದಿಗೂ ಸೈಕಲ್ನಲ್ಲೇ ಓಡಾಟ, ನೋಡಲು ಸ್ವಲ್ಪ ಗಿಡ್ಡವಾಗಿದ್ದರೂ ಇವರ ಸಾಧನೆ ಮಾತ್ರ ಬಹಳ ದೊಡ್ಡದು. ರೈತ ದೇಶದ ಬೆನ್ನೆಲುಬು ಎನ್ನುವ ಮಾತಿಗೆ ತಕ್ಕಂತೆ ಇರುವ ಖಡಕ್ ರೈತ ಇವರು. 50 ವರ್ಷಗಳಿಂದ ನಿರಂತರವಾದ ಕೃಷಿಯಲ್ಲಿ ಸಾಧನೆ ಮಾಡುತ್ತಾ ತನ್ನ ಕುಟುಂಬಕ್ಕೂ, ಸಮಾಜಕ್ಕೂ ಹಾಗೂ ಸ್ವತಃ ತಾನು ಪರಿಪೂರ್ಣ ಆರೋಗ್ಯದಿಂದ ಇರುವಲ್ಲಿ ಮಾದರಿಯಾಗಿರುವ ವಿಶೇಷ ರೈತ ಒಬ್ಬರ ಕುರಿತು ವರದಿ ಇಲ್ಲಿದೆ.
ಖಡಕ್ನಾತ್ ಕೋಳಿಗಳಿಗೆ ಮೇವು ಹಾಕುತ್ತಾ, ಕುರಿ ಮೇರೆಗಳನ್ನು ಮೇಯಿಸುತ್ತಾ ಜೀವನ ಸಾಗಿಸುವ ವ್ಯಕ್ತಿಯ ಹೆಸರು ಬೈರಪ್ಪ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತೊಳಕನದೊಡ್ಡಿ ಗ್ರಾಮದ ಮಾದರಿ ರೈತ ಇವರು. ಸುಮಾರು 75 ವರ್ಷ ವಯಸ್ಸಿನ ಬೈರಪ್ಪ ಕಳೆದ 50 ವರ್ಷಗಳಿಂದ ವ್ಯವಸಾಯ ಮಾಡಿಕೊಂಡೇ ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಇವರು ಸಮಗ್ರ ಕೃಷಿಯ ಜೊತೆಗೆ ಕೃಷಿ ಉಪಕಸುವನ್ನು ಮಾಡಿಕೊಂಡು ಯಶಸ್ಸನ್ನು ಕಂಡವರು.
ಇವರು ಕೃಷಿಯ ಜೊತೆ ಜೊತೆಗೆ ಹೈನುಗಾರಿಕೆ, ಖಡಕ್ನಾತ್ ಕೋಳಿ ಸಾಕಾಣಿಕೆ, ಮೇಕೆ ಹಾಗೂ ಕುರಿ ಸಾಕಾಣಿಕೆ ಮಾಡುತ್ತಾ ಉತ್ತಮ ಆದಾಯ ಕಂಡಿರುವ ರೈತ. ಕುರಿ ಹಾಗೂ ಮೇಕೆ ಸಾಕಾಣಿಕೆಯಿಂದ ವರ್ಷಕ್ಕೆ ಹತ್ತರಿಂದ ಹನ್ನೆರಡು ಲಕ್ಷ ಸಂಪಾದನೆ ಮಾಡುವ ಬೈರಪ್ಪ ಅವರು ಖಡಕ್ನಾತ್ ಕೋಳಿ ಸಾಕಾಣಿಕೆಯಿಂದಲೇ ವಾರ್ಷಿಕ ಐದು ಲಕ್ಷದಷ್ಟು ಆದಾಯ ಗಳಿಸುತ್ತಾರೆ.
ಖಡಕ್ನಾತ್ ಕೋಳಿ ಸಾಕಾಣಿಕೆಯಲ್ಲೂ ಯಶಸ್ಸು
ಒಂದು ಖಡಕ್ನಾತ್ ಕೋಳಿ ಸುಮಾರು 1000 ದಿಂದ 1200 ರೂಪಾಯಿಗೆ ಮಾರಾಟವಾದರೆ ಇದರ ಒಂದು ಮೊಟ್ಟೆಯ ಬೆಲೆ 15-20 ರೂಪಾಯಿ ಬೆಲೆ ಇದೆ, ಹಾಗಾಗಿ ಖಡಕ್ನಾತ್ ಕೋಳಿಗಳಿಂದಲೂ ನಿತ್ಯ ಹಾಗೂ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಖಡಕ್ನಾತ್ ಕೋಳಿ ಉತ್ತಮ ಅನ್ನೋ ಕಾರಣಕ್ಕೆ ಈ ಕೋಳಿಗಳಿಗೆ ಉತ್ತಮ ಬೇಡಿಕೆ ಇದೆ. ಸುಮಾರು 100-200 ಖಡಕ್ನಾತ್ ಕೋಳಿಗಳನ್ನು ಸಾಕುತ್ತಿರುವ ಬೈರಪ್ಪಅವರು, ಇದರ ಜೊತೆಗೆ ತಮ್ಮ ಜಮೀನಿನಲ್ಲಿ ಸಮಯಕ್ಕೆ ತಕ್ಕಂತೆ ತರಕಾರಿ ಬೆಳೆಗಳನ್ನು ಬೆಳೆಯುತ್ತಾ ಕೃಷಿಯಲ್ಲೇ ಉತ್ತಮ ಆದಾಯ ಗಳಿಸುತ್ತಾ ಬಂದಿದ್ದಾರೆ. ಹೀಗೆ ತಮ್ಮ ಸಮಗ್ರ ಹಾಗೂ ವಿಭಿನ್ನ ಕೃಷಿಯಿಂದ ವಾರ್ಷಿಕ ಸುಮಾರು 15 ಲಕ್ಷದಷ್ಟು ಆದಾಯ ಗಳಿಸುತ್ತಾ ಉತ್ತಮ ಹಾಗೂ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.
ಉಪಕಸುಬಿಗೂ ಹೆಚ್ಚಿನ ಆದ್ಯತೆ
ಇನ್ನು ಕೃಷಿಯ ಜೊತೆಗೆ ತಮ್ಮ ಉಪಕಸುಬಿಗೂ ಹೆಚ್ಚಿನ ಆದ್ಯತೆ ಕೊಟ್ಟಿರುವ ಬೈರಪ್ಪಅವರು ತಮ್ಮ ಜಮೀನಿನಲ್ಲಿ ಹೆಬ್ಬೇವು, ಶ್ರೀಗಂಧದಂತ ಮರಗಳನ್ನು ಬೆಳೆದಿದ್ದಾರೆ. ಹೀಗೆ ಕೇವಲ ತಮ್ಮ ಕೃಷಿಯಿಂದಷ್ಟೇ ಅಲ್ಲ ಅವರ ಜೀವನ ಶೈಲಿಯಿಂದಲೂ ಅವರು ಗಮನ ಸೆಳೆದಿದ್ದಾರೆ. 75 ವರ್ಷ ವಯಸ್ಸಾದರೂ ಇಂದಿಗೂ ಸೈಕಲ್ ನಲ್ಲೇ ಓಡಾಡುತ್ತಾರೆ. ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಾಗಿದ್ದಾರೆ. ಈಗಲೂ ಚಿರಯುವಕನಂತೆ ಕೆಲಸ ಮಾಡುತ್ತಾರೆ.
ಇವರ ಕುಟುಂಬವೂ ಆನಂದ ಸಾಗರ, ರೈತನ ಯಶೋಗಾಥೆ
ವ್ಯವಸಾಯ ಮಾಡಿಕೊಂಡೇ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿರುವ ಬೈರಪ್ಪ ಅವರ ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಇಬ್ಬರು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದರೆ, ಒಬ್ಬರು ಅಮೇರಿಕಾದಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಅಲ್ಲೇ ನೆಲೆಸಿದ್ದಾರೆ. ಹೀಗೆ ತಮ್ಮ ಕೃಷಿಯಿಂದಷ್ಟೇ ಅಲ್ಲದೆ ತಮ್ಮ ಆರೋಗ್ಯ, ಕೌಟುಂಬಿಕ ವಿಷಯಗಳಲ್ಲೂ ತಾನಂದುಕೊಂಡಂತೆ ಯಶಸ್ವಿಯಾಗಿರುವ ಬೈರಪ್ಪ ಅವರು ನಿಜಕ್ಕೂ ರೈತರಿಗೆ ಮಾದರಿ ಎಂದು ಜಿಲ್ಲೆಯ ಜನರಿಂದ ಹಿಡಿದು ಕ್ಷೇತ್ರದ ಶಾಸಕರವರೆಗೂ ಬೈರಪ್ಪ ಅವರ ಸಾಧನೆಯನ್ನು ಕೊಂಡಾಡುತ್ತಾರೆ. ಅದಕ್ಕೆ ಪೂರಕವೆಂಬಂತೆ ಬೈರಪ್ಪ ಅವರು ಲಕ್ಷ ಲಕ್ಷ ಸಂಪಾದನೆ ಮಾಡಿದರೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಒಟ್ಟಾರೆ ಕೃಷಿ ಅಂದರೆ ಕೇವಲ ಆದಾಯ ತರುವ ಕಸುಬಲ್ಲ ಇದು ಆರೋಗ್ಯವನ್ನೂ ಕೊಡುವ ಕಾಯಕ ಅನ್ನೋ ನಿಟ್ಟಿನಲ್ಲಿ ನಿರಂತರ ಕೃಷಿ ಮಾಡುತ್ತಾ, ಜೀವನದಲ್ಲಿ ಯಶಸ್ವಿಯಾಗಿರುವ ಬೈರಪ್ಪ ಅವರು ನಿಜಕ್ಕೂ ಎಲ್ಲಾ ರೈತರಿಗೆ ಮಾದರಿ. ಇವರಂತೆ ಎಲ್ಲಾ ರೈತರು ಜೀವನ ರೂಪಿಸಿಕೊಂಡರೆ ರೈತನಿಗೆ ಸಂಕಷ್ಟ ಅನ್ನೋದೆ ಇರೋದಿಲ್ಲ.
ವಿಶೇಷ ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಕೋಲಾರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ; ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ
Published On - 7:30 am, Tue, 25 January 22