R.L.ಜಾಲಪ್ಪ ನಿಧನದ ಬೆನ್ನಲ್ಲೇ ಅಧಿಕಾರಕ್ಕಾಗಿ ಕುಟುಂಬ ಕಲಹ; ಕಾಲೇಜಿಗೆ ನುಗ್ಗಿ ಪ್ರತಿಭಟನೆ, ಪೊಲೀಸರಿಂದ ಲಾಠಿ ಚಾರ್ಜ್
ಜಾಲಪ್ಪನವರ ಕುಟುಂಬದವರಿಗೆ ಟ್ರಸ್ಟ್ ಹಾಗೂ ಸಂಸ್ಥೆಯಲ್ಲಿ ಸೂಕ್ತ ಸ್ಥಾನಮಾನ ನೀಡದೆ ಸರ್ವಾಧಿಕಾರಿ ಧೋರಣೆಯಿಂದ ವರ್ತನೆ ಮಾಡುತ್ತಿದ್ದಾರೆ ಎಂದು ಜಿ.ಹೆಚ್.ನಾಗರಾಜ್ ವಿರುದ್ಧ ಆರೋಪ ಕೇಳಿ ಬಂದಿದೆ.
ಕೋಲಾರ: R.L.ಜಾಲಪ್ಪ ನಿಧನದ ಬೆನ್ನಲ್ಲೇ ಕುಟುಂಬ ಕಲಹ ಬಯಲಾಗಿದೆ. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಅಧಿಕಾರ ಕಲಹ ಈಗ ಬೀದಿಗೆ ಬಂದಿದೆ. ದಿವಂಗತ ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ನಿಧನ ನಂತರ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಕಲಹ ಶುರುವಾಗಿದೆ.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಾಲಪ್ಪ ಸಂಬಂಧಿ G.H.ನಾಗರಾಜ್ ಆಯ್ಕೆ ಆಗಿದ್ದು ಈ ಆಯ್ಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜಾಲಪ್ಪನವರ ಕುಟುಂಬದವರಿಗೆ ಟ್ರಸ್ಟ್ ಹಾಗೂ ಸಂಸ್ಥೆಯಲ್ಲಿ ಸೂಕ್ತ ಸ್ಥಾನಮಾನ ನೀಡದೆ ಸರ್ವಾಧಿಕಾರಿ ಧೋರಣೆಯಿಂದ ವರ್ತನೆ ಮಾಡುತ್ತಿದ್ದಾರೆ ಎಂದು ಜಿ.ಹೆಚ್.ನಾಗರಾಜ್ ವಿರುದ್ಧ ಆರೋಪ ಕೇಳಿ ಬಂದಿದೆ. ಆರ್.ಎಲ್. ಜಾಲಪ್ಪ ಅವರ ಕುಟುಂಬದ ಸದಸ್ಯರನ್ನು ಟ್ರಸ್ಟ್ ಹಾಗೂ ಸಂಸ್ಥೆಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಕೋಲಾರ ನಗರ ಹೊರವಲಯದಲ್ಲಿರುವ ಶ್ರೀ ದೇವರಾಜ್ ಅರಸು ಎಜುಕೇಶನ್ ಟ್ರಸ್ಟ್ ಹಾಗೂ ಮೆಡಿಕಲ್ ಕಾಲೇಜ್ ಮತ್ತು ಶಿಕ್ಷಣ ಸಂಸ್ಥೆಗಳ ಅಧಿಪತ್ಯಕ್ಕಾಗಿ ಮುಸುಕಿನ ಗುದ್ದಾಟ ನಡೆದಿದೆ. ಜಾಲಪ್ಪ ಅವರ ಹಿರಿಯ ಮಗ ಹಾಗೂ ಮಾಜಿ ಶಾಸಕ ನರಸಿಂಹಸ್ವಾಮಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಪಟ್ಟು ಹಿಡಿಯಲಾಗಿದೆ. ಜಾಲಪ್ಪ ಕುಟುಂಬಸ್ಥರು ಹಾಗೂ ಸಂಸ್ಥೆಯ ಸಿಬ್ಬಂದಿ ಹೆಸರಲ್ಲಿ ಸಮಾಜಿಕ ಜಾಲತಾಣದಲ್ಲಿ ಪತ್ರಗಳು ಹರಿದಾಡುತ್ತಿವೆ.
ಅಲ್ಲದೆ ಕೋಲಾರದ ಟಮಕ ಬಳಿಯ ಮೆಡಿಕಲ್ ಕಾಲೇಜಿನಲ್ಲಿ R.L.ಜಾಲಪ್ಪ ಮಕ್ಕಳು, ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. R.L.ಜಾಲಪ್ಪ ಕುಟುಂಬಸ್ಥರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಪೊಲೀಸರನ್ನು ತಳ್ಳಿ ಪ್ರತಿಭಟನಾಕಾರರು ಕಾಲೇಜು ಒಳಕ್ಕೆ ನುಗ್ಗಿದ್ದಾರೆ.
ಪ್ರತಿಭಟನಾ ನಿರತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಇನ್ನು ಪ್ರತಿಭಟನಾಕಾರರು ಕಾಲೇಜು ಒಳಕ್ಕೆ ನುಗ್ಗಿದ್ದು ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮೀಪತಿ ತಲೆಗೆ ಗಾಯವಾಗಿದೆ. ಹಾಗೂ ಪಿಎಸ್ಐ ಅಣ್ಣಯ್ಯ ಅವರ ಕಾಲಿಗೂ ಗಾಯವಾಗಿದೆ. ಪ್ರತಿಭಟನೆಯಲ್ಲಿ ನರಸಿಂಹಸ್ವಾಮಿ, ನಾಗೇಂದ್ರ ಸ್ವಾಮಿ, ರಾಜೇಂದ್ರ, ಪಾರ್ವತಿದೇವಿ, ಉಮಾದೇವಿ, ಸರಸ್ವತಿ ಭಾಗಿಯಾಗಿದ್ದಾರೆ.
ಜಿ.ಹೆಚ್.ನಾಗರಾಜ್ ವಿರುದ್ಧ R.L.ಜಾಲಪ್ಪ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿ.ಹೆಚ್.ನಾಗರಾಜ್ ನಮ್ಮ ಸಂಬಂಧಿ ಅಲ್ಲ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಸಂಸ್ಥೆಯ ಆಡಳಿತ R.L.ಜಾಲಪ್ಪ ಮಕ್ಕಳಿಗೆ ನೀಡಲು ಒತ್ತಾಯಿಸಿದ್ದಾರೆ. ಅದು ಸಾಧ್ಯವಿಲ್ಲದಿದ್ರೆ ಸಂಸ್ಥೆ ಸರ್ಕಾರದ ವಶಕ್ಕೆ ಪಡೆಯಲಿ. ನಾಗರಾಜ್ ಭ್ರಷ್ಟ, ಜಾಲಪ್ಪ ಮಕ್ಕಳಿಗೆ ಮೋಸ ಮಾಡಿದ್ದಾನೆ. 5 ವರ್ಷಗಳಿಂದ ಸಂಸ್ಥೆಯಲ್ಲಿ ಆಗಿರುವ ಅಕ್ರಮ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ಆರ್.ಎಲ್.ಜಾಲಪ್ಪ ಮಕ್ಕಳು, ಬೆಂಬಲಿಗರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಜಾಲಪ್ಪನವರಂಥ ಧೀಮಂತ ಮತ್ತು ಸ್ವಾಭಿಮಾನಿ ರಾಜಕೀಯ ನಾಯಕರು ಬಹಳ ಅಪರೂಪ: ಸಿದ್ದರಾಮಯ್ಯ
Published On - 12:14 pm, Mon, 24 January 22