ಕೋಲಾರ: ಕೆಂಪೇಗೌಡ ರಥಯಾತ್ರೆ ವೇಳೆ ಬಿಜೆಪಿಯ ಎರಡು ಗುಂಪುಗಳ ನಡುವೆ ಗಲಾಟೆ
ಕೆಂಪೇಗೌಡ ರಥಯಾತ್ರೆ ಸ್ವಾಗತಿಸುವ ವಿಚಾರವಾಗಿ ವೇಳೆ ಬಿಜೆಪಿಯ 2 ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಮಾಲೂರು ತಾಲೂಕಿನ ಟೇಕಲ್ನಲ್ಲಿ ನಡೆದಿದೆ.
ಕೋಲಾರ: ಬಿಜೆಪಿಯಿಂದ (BJP) ಕೆಂಪೇಗೌಡ ರಥಯಾತ್ರೆ ನಡೆಯುತ್ತಿದ್ದು, ಕೆಂಪೇಗೌಡ (Kempegowda) ರಥಯಾತ್ರೆ ಸ್ವಾಗತಿಸುವ ವಿಚಾರವಾಗಿ ಬಿಜೆಪಿಯ 2 ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಮಾಲೂರು ತಾಲೂಕಿನ ಟೇಕಲ್ನಲ್ಲಿ ನಡೆದಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಬೆಂಬಲಿಗರ ನಡುವೆ ಸಂಸದ ಮುನಿಸ್ವಾಮಿ ಅವರ ಎದುರೇ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮುನಿಸ್ವಾಮಿ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದರು. ಆದರೆ ಕಾರ್ಯಕರ್ತರು ಮುನಿಸ್ವಾಮಿ ಅವರ ಮಾತಿಗೆ ಕ್ಯಾರೆ ಎನ್ನದೆ ಗಲಾಟೆ ಮುಂದುವರೆಸಿದ್ದರು. ಹೀಗಾಗಿ ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ಮೆರವಣಿಗೆಗೆ ಚಾಲನೆ ದೊರೆತಿತು.
ಬಿಜೆಪಿಯಿಂದ ಮೃತ್ತಿಗೆ ಸಂಗ್ರಹ
ನ.11ರಂದು ಕೆಐಎಬಿ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ರಥಗಳ ಮೂಲಕ ಮೃತ್ತಿಕೆ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಅದರಂತೆ ಮಾಗಡಿ ತಾಲ್ಲೂಕಿನ ಗ್ರಾಮದಲ್ಲಿ ಮೃತ್ತಿಕೆ ಸಂಗ್ರಹ ಮಾಡುತ್ತಿದ್ದಾಗ ರಥದಿಂದ ಬಿದ್ದು ಶ್ರೀನಿವಾಸ್ ಸಾವನ್ನಪ್ಪಿದ್ದಾರೆ.
ನ.11ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ಮೃತ್ತಿಕೆ ಸಂಗ್ರಹ ಅಭಿಯಾನದ ರಥಗಳಿಗೆ ಅಕ್ಟೋಬರ್ 21ರಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಅಭಿಯಾನ ಯಶಸ್ವಿ ಆಗುವಂತೆ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಭಿಯಾನದ ಯಶಸ್ಸಿಗೆ ಎಲ್ಲರೂ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು.
108 ಅಡಿ ಎತ್ತರದ ಪ್ರತಿಮೆ
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ನವೆಂಬರ್ 11ರಂದು ಉದ್ಘಾಟನೆಗೊಳ್ಳಲಿದೆ. ಈ ಪ್ರತಿಮೆ ನಿರ್ಮಾಣದ ಮೂಲಕ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ, 108 ಅಡಿ ಎತ್ತರದ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಅಲ್ಲಿಯ ಸಂಸ್ಥಾಪಕರ ಪ್ರತಿಮೆ ಇಲ್ಲ. ಇನ್ನುಮುಂದೆ, ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Fri, 4 November 22