ನಿತ್ಯ ಬುಡ್ಡಿ ದೀಪದ ಕೆಳಗೆ ಬದುಕು ಕಳೆಯುತ್ತಿದೆ ಓಬೇನಹಳ್ಳಿ ಗ್ರಾಮ
ಕೋಲಾರ, ಸೆ.04: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆ(
Gruha Jyothi Scheme)ಯಿಂದ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಮನೆ ಮನೆ ಬೆಳಗುವ ಉದ್ದೇಶ ಸರ್ಕಾರದ್ದಾಗಿತ್ತು. ಆದರೆ, ಅದೇ ಯೋಜನೆಯ ಫಲವಾಗಿ ಕೋಲಾರ ತಾಲ್ಲೂಕಿನ ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮಕ್ಕೆ ಕತ್ತಲೆ ಆವರಿಸಿದೆ. ಹೌದು, ಗೃಹಜ್ಯೋತಿ ಯೋಜನೆ ಜಾರಿಗೆ ಮೊದಲು 12 ಗಂಟೆ ಸಿಂಗಲ್ ಪೇಸ್ ವಿದ್ಯುತ್ ಕೊಡುತ್ತಿದ್ದರು, 8 ಗಂಟೆ ಮೂರು ಪೇಸ್ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಗೃಹಜ್ಯೋತಿ ಯೋಜನೆ ಜಾರಿಗೆ ತಂದ ಮೇಲೆ ಓಬೇನಹಳ್ಳಿ ಗ್ರಾಮಕ್ಕೆ ಕೇವಲ ಮೂರು ಪೇಸ್ ವಿದ್ಯುತ್, ಅದು ಕೂಡ ಮಧ್ಯ ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಮಾತ್ರ ನೀಡಲಾಗುತ್ತಿದೆ.
ಇದರಿಂದ ಗ್ರಾಮದ ಜನರು ಮನೆಯಲ್ಲಿ ಲೈಟಿಂಗ್ಸ್ ಹಾಗೂ ಗೃಹಪಯೋಗಕ್ಕೆ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಗ್ರಾಮದ ಹೊರಗೆ, ತೋಟಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ಜನರಿಗೆ ಸಂಜೆಯಾಯಿತು ಎಂದರೆ ಜೀವ ಭಯದಲ್ಲಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ. ಮನೆಯ ಹೊರಗೆ ಹೋದರೆ, ಹಾವುಗಳು, ಕಾಡು ಹಂದಿ, ಕರಡಿಗಳ ಕಾಟ ಹೆಚ್ಚುತ್ತಿದ್ದು, ಸಂಜೆಯಾಗುತ್ತಲೇ ಮನೆಯಲ್ಲಿ ಚಾರ್ಜಿಂಗ್ ಲೈಟ್ ಹಾಗೂ ಕ್ಯಾಂಡಲ್ ದೀಪದಲ್ಲಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ.
ಇನ್ನು ಕಳೆದ 30 ರಿಂದ 40 ವರ್ಷಗಳಿಂದ ಜನ್ನಘಟ್ಟ ಗ್ರಾಮಸ್ಥರು ಊರ ಹೊರಗೆ ತಮ್ಮ ತಮ್ಮ ಹೊಲಗಳಲ್ಲಿ ಬಂದು ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮ ಮಾಡಿಕೊಂಡಿದ್ದಾರೆ. ಇಲ್ಲಿ ಸುಮಾರು 20 ಮನೆಗಳಿವೆ. ಈ ಮೊದಲು ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮೋಟಾರ್ ಪಂಪ್ ಸೆಟ್ಗಳಿಗೆ ಪ್ರತ್ಯೇಕ ವಿದ್ಯುತ್ ಸರಬರಾಜಾಗುತ್ತಿತ್ತು. ಮನೆಯ ಗೃಹಪಯೋಗಕ್ಕೆ ಪ್ರತ್ಯೇಕ 24 ಗಂಟೆ ವಿದ್ಯುತ್ ಅಡಿಯಲ್ಲಿ ಸರಬರಾಜಾಗುತ್ತಿತ್ತು. ಆದರೆ, ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ನಂತರ ಸಿಂಗಲ್ ಪೇಸ್ ವಿದ್ಯುತ್ ಕಡಿತ ಮಾಡಿದರ ಪರಿಣಾಮ ಈ ಗ್ರಾಮದ ಮನೆಗಳಿಗೆ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.
ಈ ಬಗ್ಗೆ ಅಧಿಕಾರಿಗಳು ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗೃಹಪಯೋಗಿ ವಿದ್ಯುತ್ಗೆ ಪ್ರತ್ಯೇಕ ಲೈನ್ ಹಾಕಿಕೊಡಬೇಕು. ಅದಕ್ಕೆ ತಗುಲುವ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದರೂ ಅಧಿಕಾರಿಗಳು ಮಾಡಿಕೊಡಲು ಸಿದ್ದರಿಲ್ಲ. ಹಾಗಾಗಿ ಗ್ರಾಮಸ್ಥರು ಕಾಂಗ್ರೆಸ್ ಸರ್ಕಾರದ ವಿರುದ್ದ ತಮ್ಮ ಅಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮ ಬಳಿ ಕಾರು, ಬೈಕ್ ನಮ್ಮ ಅಗತ್ಯತೆಗೆ ಬೇಕಾದ ಎಲ್ಲವನ್ನೂ ಸಂಪಾದನೆ ಮಾಡುತ್ತೇವೆ. ಆದರೂ ನಾವೂ ಕತ್ತಲೆಯಲ್ಲಿ ದಿನ ಕಳೆಯುವ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರುತ್ತಿದ್ದಾರೆ.
ಇನ್ನು ಈ ಕುರಿತು ಬೆಸ್ಕಾಂ ಸೂಪರಿಂಡೆಂಟ್ ಇಂಜಿನಿಯರ್ ಮೃತ್ಯುಂಜಯ ಎಂಬುವವರು ನಾವು ಸಂಪರ್ಕ ಮಾಡಿ ಕೇಳಿದಾಗ ಮಾತನಾಡಿದ ಅವರು, ‘ನಮಗೆ ಮನವಿ ಕೊಡಲಿ, ಕೂಡಲೇ ಅದಕ್ಕೆ ಅಗತ್ಯ ಕ್ರಿಯಾಯೋಜನೆ ಸಿದ್ದಪಡಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ. ಒಟ್ಟಾರೆ ಗೃಹಜ್ಯೋತಿ ಯೋಜನೆಯಿಂದ ಉಚಿತವಾಗಿ ನಮಗೆ ವಿದ್ಯುತ್ ಸಿಗುತ್ತದೆ. ದಿನದ 24 ಗಂಟೆಯೂ ವಿದ್ಯುತ್ ನಳನಳಿಸುತ್ತದೆ ಎಂದು ಕನಸು ಕಂಡಿದ್ದ ಈ ಗ್ರಾಮಸ್ಥರಿಗೆ, ಸದ್ಯ ಈಗ ಹಣ ಕೊಡ್ತೀವಿ ಅಂದರೂ ಇಲ್ಲಿ ವಿದ್ಯುತ್ ಸಿಗದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಓಬೇನಹಳ್ಳಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕಿದೆ.